ಸ್ವಾಭಿಮಾನದ ಬದುಕಿಗೆ ಅಡ್ಡಿಯಾಗದ ಅಂಗವೈಕಲ್ಯ

Update: 2019-02-28 09:32 GMT

ಬಂಟ್ವಾಳ, ಫೆ.27: ಕಾರು ಚಾಲಕನಾಗಿ ದುಡಿಯುತ್ತಿದ್ದ ಮಧ್ಯಮ ಕುಟುಂಬದ ಆ ವ್ಯಕ್ತಿಗೆ ಈಗ 58 ವರ್ಷ ಪ್ರಾಯ. ಸುಮಾರು 15 ವರ್ಷಗಳ ಹಿಂದೆ ಗ್ಯಾಂಗ್ರಿನ್ ಬಾಧಿಸಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದ ಅವರಿಗೆ 4 ಹೆಣ್ಣು, 4 ಗಂಡು ಮಕ್ಕಳು. ಹಿರಿಯ ಮಗಳು ಅದಾಗಲೇ ಮದುವೆಯ ಪ್ರಾಯಕ್ಕೆ ಬಂದಿದ್ದಳು. ಮಕ್ಕಳನ್ನು ಸಲಹುವ ಹೊಣೆಗಾರಿಕೆಯ ಜೊತೆಗೆ ತನ್ನ ಚಿಕಿತ್ಸಾ ವೆಚ್ಚದ ಹೊಣೆಯನ್ನೂ ಹೊತ್ತುಕೊಂಡ ಸುಲೈಮಾನ್, ಯಾರೊಂದಿಗೂ ಸಹಾಯ ಕ್ಕಾಗಿ ಅಂಗಲಾಚಿದವರಲ್ಲ.

ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ನಿವಾಸಿಯಾಗಿರುವ ಸುಲೈಮಾನ್ ‘ಗುಜರಿ ಸುಲೈಮಾನ್ ಕಾಕ’ ಎಂದೇ ಜನಪ್ರಿಯರು. ತನ್ನ ಕಾಲನ್ನು ಕಳೆದುಕೊಂಡ ಪ್ರಾರಂಭದಲ್ಲಿ ವೀಲ್‌ಚಯರ್ ಮೂಲಕ ಗುಜರಿ ವ್ಯಾಪಾರವನ್ನು ಆರಂಭಿಸಿದ್ದ ಕಾರಣಕ್ಕಾಗಿ ಅವರು ಆ ಹೆಸರಿನಿಂದ ಗುರುತಿಸಲ್ಪಟ್ಟರು.

ಆಟೊ ರಾಜ: ಸುಲೈಮಾನ್ ತನ್ನ ಗುಜರಿ ವ್ಯಾಪಾರದಲ್ಲಿ ಬಂದ ಹಣವನ್ನು ಕೂಡಿಸಿ ಒಂದು ಆಟೊ ರಿಕ್ಷಾವನ್ನು ಖರೀದಿಸಿದರು. ಮಧ್ಯ ರಾತ್ರಿ ಯಾರಾದರೂ ತುರ್ತು ಅಗತ್ಯಕ್ಕಾಗಿ ಕರೆದಾಗ ಪ್ರತ್ಯಕ್ಷವಾಗಿ ಬಿಡುತ್ತಾರೆ. ತುರ್ತು ಸೇವೆಗಾಗಿ ದೈನಂದಿನ ಬಾಡಿಗೆಯನ್ನು ಬೇರೆಯವರಿಗೆ ವಹಿಸಿ ಕೊಡುವ ಅವರು, ಮದುವೆ, ಮರಣ ಹೊಂದಿದ ಮನೆಯಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ. ತನ್ನ ಆಪೆ ರಿಕ್ಷಾದಲ್ಲೇ ಜನಾಝ ಪೆಟ್ಟಿಗೆ, ಮೃತರ ಹೆಸರಿನಲ್ಲಿ ನೀಡುವ ದಾನ (ಅಕ್ಕಿ, ಮಾಂಸ)ವನ್ನು ಬಡಬಗ್ಗರಿಗೆ ತಲುಪಿಸುವ ಜವಾಬ್ದಾರಿಯನ್ನು ಸುಲೈಮಾನ್ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.

ಅಡುಗೆ ಅನಿಲ ವಿತರಣೆ: ಬಾಂಬಿಲ ಜುಮಾ ಮಸೀದಿ ವ್ಯಾಪ್ತಿಯಲ್ಲಿ ಬರುವ ಸುಮಾರು 100ರಷ್ಟು ಮನೆಗೆ ಅಡುಗೆ ಅನಿಲವನ್ನೂ ಸುಲೈಮಾನ್ ತಲುಪಿ ಸುತ್ತಾರೆ. ಅಡುಗೆ ಅನಿಲ ತಲುಪಿಸಿದ್ದಕ್ಕೆ ಜನರು ಇಂತಿಷ್ಟು ಹಣ ನೀಡುತ್ತಾರೆ.

ಚೀಟಿ ವ್ಯವಹಾರ: ತನ್ನ ಜ್ಞಾನಕ್ಕೆ ಟುಕುವ ಕೆಲಸವನ್ನು ಕ್ರಿಯಾಶೀಲವಾಗಿ ಮಾಡಿ ಮುಗಿಸುವ ಸುಲೈಮಾನ್ ಚೀಟಿ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ವರ್ಷಕ್ಕೆ ಸುಮಾರು 1 ಲಕ್ಷ, ಮತ್ತು 50 ಸಾವಿರದ ಎರಡು ಚೀಟಿ ವ್ಯವಹಾರವನ್ನು ನಡೆಸುವ ಅವರು, ಯಾರಿಗೆ ಚೀಟಿ ಬಂದಿದ್ದರೂ ಆ ಸಮಯದಲ್ಲಿ ಚೀಟಿಗೆ ಸೇರಿದ ಬಡವರ ಮನೆಯಲ್ಲಿ ಮದುವೆ ಇದ್ದರೆ ಆ ಕುಟುಂಬಕ್ಕೆ ಚೀಟಿ ಹಣ ನೀಡಿ ಸಹಕರಿಸಬೇಕೆಂಬುದು ಸುಲೈಮಾನ್‌ರ ಒಪ್ಪಂದ. ಅಷ್ಟೇ ಅಲ್ಲ ಮಸೀದಿ, ಮದ್ರಸಗಳಲ್ಲಿನ ಚೀಟಿಗೆ ಸೇರಿದವರ ಕಂತನ್ನೂ ತಲುಪಿಸಲು ಸುಲೈಮಾನ್ ನೆರವಾಗುತ್ತಾರೆ. 

ಬಾಡಿಗೆ ಮನೆಗಳ ಒಡೆಯ: ತನ್ನ ಎರಡು ಕಾಲು ಆರೋಗ್ಯವಿದ್ದಾಗ ಮಧ್ವದಲ್ಲಿ ಹೆಂಚಿನ ಮನೆ ನಿರ್ಮಿಸಿದ್ದ ಸುಲೈಮಾನ್, ನಂತರ ಅವರ ಶ್ರಮದ ದುಡಿಮೆಯಿಂದ ಬಂದ ಹಣದಿಂದ ತನ್ನ 4 ಹೆಣ್ಣು ಮಕ್ಕಳನ್ನೂ ಮದುವೆ ಮಾಡಿಸಿದ್ದಾರೆ. ನಂತರದಲ್ಲಿ ಕಾವಳಮೂಡೂರು ಗ್ರಾಮದ ದೂಮಲಿಕೆ, ಕಾವಳಪಡೂರು ಗ್ರಾಮದ ಕೈಲಾರ್ ಎಂಬಲ್ಲಿ ಒಟ್ಟು ಎರಡು ಸಿಮೆಂಟ್ ಶೀಟ್‌ನ ಮನೆ ನಿರ್ಮಿಸಿ ಬಾಡಿಗೆಗೂ ನೀಡಿದ್ದಾರೆ. ಅಂಗವಿಕಲರಿಗೆ ಮಾತ್ರವಲ್ಲ, ಆರೋಗ್ಯವಾಗಿದ್ದೂ, ಕಾರಣಗಳನ್ನು ನೀಡಿ ದುಡಿಮೆಯಿಂದ ದೂರವುಳಿದು, ಸಮಯ ವ್ಯರ್ಥಮಾಡುವ ಮಂದಿಗೆ ಸುಲೈಮಾನ್‌ರಂತವರ ಬದುಕು ಮಾದರಿಯಾಗಿದೆ. ಸ್ವಾಭಿಮಾನಿಗಳಾಗಿ ಬದುಕಲು ಸಮಸ್ಯೆಗಳು ಅಡ್ಡಿಯಲ್ಲ, ಆತ್ಮವಿಶ್ವಾಸವೇ ಯಶಸ್ವೀ ಜೀವನಕ್ಕೆ ಬುನಾದಿ ಎಂಬುದನ್ನು ಸುಲೈಮಾನ್ ತೋರಿಸಿಕೊಟ್ಟಿದ್ದಾರೆ.

ಸ್ವಾಭಿಮಾನಿಯಾಗಿ ಬದುಕುವ ಛಲ ಇರುವವರಿಗೆ ಸುಲೈಮಾನ್ ಮಾದರಿ. ತನ್ನ ಮಕ್ಕಳಿಗೆ ಶಿಕ್ಷಣ ಮತ್ತು ಮದುವೆ ಯಾರ ಸಹಾಯವನ್ನು ಪಡೆಯದೆ ಮಾಡಿದ್ದಾರೆ. ಕಷ್ಟದಲ್ಲಿರುವವರಿಗೆ ಸಾಲದ ರೂಪದಲ್ಲಿ ಆರ್ಥಿಕ ಸಹಾಯವನ್ನೂ ಮಾಡುವ ಅಪರೂಪದ ವ್ಯಕ್ತಿ.

 ಅಬೂಬಕರ್ ಮದ್ದ, ಸಮಾಜ ಸೇವಕ

ಸರಕಾರದ ಸೌಲಭ್ಯವನ್ನು ಹೊರತು ಪಡಿಸಿ ಯಾರೊಂದಿಗೂ ಅಂಗಲಾಚದ ಸ್ವಭಾವ ಸುಲೈಮಾನ್‌ರದ್ದು. ಅಂಗವೈಕಲ್ಯದ ನೆಪದಲ್ಲಿ ಅನುಕಂಪ ಗಿಟ್ಟಿಸಿ ಸಾರ್ವಜನಿಕರಿಂದ ನೆರವು ಬಯಸುವವರ ನಡುವೆ ಸುಲೈಮಾನ್, ಯಾವುದೇ ಫಲಾಪೇಕ್ಷೆ ಇಲ್ಲದೆ ಸಾರ್ವಜನಿಕರಿಗೂ ಸಹಾಯ ಮಾಡುತ್ತಾರೆ.

 ವೇದವ, ಕಾವಳಪಡೂರು ಗ್ರಾಪಂ ಪಿಡಿಒ

Writer - ಅಕ್ಬರ್ ಅಲಿ, ಕಾವಳಕಟ್ಟೆ

contributor

Editor - ಅಕ್ಬರ್ ಅಲಿ, ಕಾವಳಕಟ್ಟೆ

contributor

Similar News