ಮಂಡಿನೋವು ಶಮನಕ್ಕೆ ಇಲ್ಲಿವೆ ಸರಳ ಉಪಾಯಗಳು

Update: 2019-02-28 14:19 GMT

ನಮ್ಮ ಒತ್ತಡದ ಬದುಕಿನಲ್ಲಿ ನಾವು ಆಗಾಗ್ಗೆ ಒಂದಲ್ಲ ಒಂದು ಕಾಯಿಲೆಗೆ ಗುರಿಯಾಗುತ್ತಲೇ ಇರುತ್ತೇವೆ. ಮಂಡಿನೋವು ಇವುಗಳಲ್ಲಿ ಒಂದಾಗಿದೆ. ಮಂಡಿನೋವಿಗೆ ಹಲವಾರು ಕಾರಣಗಳಿವೆ. ಉಳುಕು,ಮೂಳೆಗೆ ಪೆಟ್ಟು,ಗಾಯ ಅಥವಾ ಸಂಧಿವಾತದಂತಹ ಗಂಭೀರ ಸಮಸ್ಯೆ ಮಂಡಿನೋವನ್ನುಂಟು ಮಾಡುತ್ತವೆ. ಸಂದುಗಳು ಮತ್ತು ಮೂಳೆಗಳಲ್ಲಿ ಉರಿಯೂತ ಪ್ರಮುಖವಾಗಿ ಸಂಧಿವಾತದಿಂದ ನರಳುತ್ತಿರುವವರನ್ನು ಕಾಡುತ್ತದೆ. ಕೆಲವು ಸರಳ ಉಪಾಯಗಳಿಂದ ಮಂಡಿನೋವಿಗೆ ಶಮನವನ್ನು ಕಂಡುಕೊಳ್ಳಬಹುದಾಗಿದೆ.

► ಬಿಸಿ ಮತ್ತು ತಂಪು ಚಿಕಿತ್ಸೆ

ಹೀಟಿಂಗ್ ಪ್ಯಾಡ್ ಬಳಕೆಯು ಮಂಡಿಯ ಕೀಲು ಪೆಡಸಾಗುವುದನ್ನು ತಪ್ಪಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ತಂಪು ಜೆಲ್ ಹೊಂದಿರುವ ಪ್ಯಾಕ್ ನೋವಿನಿಂದ ಮುಕ್ತಿ ನೀಡುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಐಸ್‌ಪ್ಯಾಕ್,ಹಾಟ್ ಪ್ಯಾಕ್,ಇಲೆಕ್ಟ್ರಿಕ್ ಬ್ಲಾಂಕೆಟ್‌ಗಳನ್ನೂ ಬಳಸಬಹುದಾಗಿದೆ. ರಬ್ಬರ್ ಬ್ಯಾಗ್‌ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬಿಸಿನೀರು ಅಥವಾ ತಂಪು ನೀರನ್ನು ತುಂಬಿಯೂ ಬಳಸಬಹುದು.

► ಶುಂಠಿಯ ಸಾರ

ಶುಂಠಿಯು ತನ್ನ ಆರೋಗ್ಯಲಾಭಗಳಿಗಾಗಿ ಖ್ಯಾತವಾಗಿದೆ ಮತ್ತು ಸುದೀರ್ಘ ಕಾಲದಿಂದಲೂ ಆಯುರ್ವೇದದಲ್ಲಿ ಔಷಧಿಯ ರೂಪದಲ್ಲಿ ಬಳಕೆಯಾಗುತ್ತಿದೆ. ಹಸಿ ಶುಂಠಿಯನ್ನು ತಿಂದರೆ ಅದರಲ್ಲಿರುವ ಉರಿಯೂತ ನಿರೋಧಕ ಗುಣಗಳು ಹೊಟ್ಟೆನೋವು ಅಥವಾ ಸಂಧಿವಾತದ ನೋವನ್ನು ಶಮನಗೊಳಿಸುತ್ತವೆ.

► ಆ್ಯಪಲ್ ಸಿಡರ್ ವಿನೆಗರ್

ಮಂಡಿನೋವನ್ನು ತಗ್ಗಿಸುವಲ್ಲಿ ಆ್ಯಪಲ್ ಸಿಡರ್ ವಿನೆಗರ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅದರ ಕ್ಷಾರೀಯ ಪರಿಣಾಮವು ಬಿಗಿದುಕೊಂಡ ಸ್ನಾಯುಗಳನ್ನು ಮೃದುಗೊಳಿಸುತ್ತದೆ ಮತ್ತು ಚಲನವಲನವನ್ನು ಉತ್ತಮಗೊಳಿಸುತ್ತದೆ. ರಾತ್ರಿ ಮಲಗುವ ಮನ್ನ ಆ್ಯಪಲ್ ಸಿಡರ್ ವಿನೆಗರ್‌ನ್ನು ನೀರಿನೊಂದಿಗೆ ಬೆರೆಸಿಕೊಂಡು ಸೇವಿಸಬಹುದು ಅಥವಾ ತೆಂಗಿನೆಣ್ಣೆಯೊಂದಿಗೆ ಸೇರಿಸಿ ಪೀಡಿತ ಭಾಗದ ಮೇಲೆ ಲೇಪಿಸಿಕೊಳ್ಳಬಹುದು.

► ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯಿಂದ ಮಂಡಿಯನ್ನು ಮೃದುವಾಗಿ ಮಸಾಜ್ ಮಾಡುವುದು ಅದ್ಭುತ ಪರಿಣಾಮವನ್ನು ನೀಡುತ್ತದೆ. ಇದು ಹಿತವಾದ ಅನುಭವವನ್ನು ನೀಡುವ ಜೊತೆಗೆ ನೋವಿನಿಂದ ಕಿರಿಕಿರಿಯನ್ನು ತಗ್ಗಿಸುತ್ತದೆ. ಮಸಾಜ್ ರಕ್ತದ ಪರಿಚಲನೆಯನ್ನು ಹೆಚ್ಚಿಸುತ್ತದೆ ಹಾಗೂ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

► ಆ್ಯಕ್ಯುಪಂಕ್ಚರ್

ಊತವನ್ನು ಮತ್ತು ಮಂಡಿನೋವನ್ನು ಕಡಿಮೆಗೊಳಿಸಲು ಆ್ಯಕ್ಯುಪಂಕ್ಚರ್ ಪರಿಣಾಮಕಾರಿ ವಿಧಾನವಾಗಿದೆ. ಕೆಲವು ಸಲ ಆ್ಯಕ್ಯುಪಂಕ್ಚರ್ ಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಸಂಧಿವಾತ ಮತ್ತು ನೋವಿನಿಂದ ಉಂಟಾದ ಊತದಿಂದ ಶಮನವನ್ನು ಪಡೆಯಬಹುದು. ಇದು ಇತರ ರೀತಿಗಳಲ್ಲೂ ಆರೋಗ್ಯಲಾಭಗಳನ್ನು ನೀಡುವ ಅಪಾಯರಹಿತ ಚಿಕಿತ್ಸೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News