ಜೀತ ಪದ್ಧತಿ ನಿರ್ಮೂಲನೆಗೆ ಸಮಾಜ ಕೈಜೋಡಿಸಬೇಕು: ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್

Update: 2019-03-01 12:38 GMT

ಬೆಂಗಳೂರು, ಮಾ. 1: ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತಪದ್ಧತಿಯಂತಹ ಸಮಾಜಿಕ ಪಿಡುಗುಗಳ ನಿರ್ಮೂಲನೆಗೆ ಸರಕಾರ ಮತ್ತು ನಾಗರಿಕ ಸಮಾಜ ಕೈಜೋಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಪದ್ಧತಿ ಕೊನೆಗೊಳಿಸಲು ಸ್ವಯಂ ಸೇವಾ ಸಂಸ್ಥೆಗಳು ರಚಿಸಿಕೊಂಡಿರುವ ‘ಮುಕ್ತಿ’ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜೀತ ಪದ್ಧತಿ ಮತ್ತು ಮಾನವ ಕಳ್ಳಸಾಗಾಣಿಕೆ ನಿರ್ಮೂಲನೆ ದೊಡ್ಡ ಸವಾಲಿನ ಕೆಲಸ. ಇಂತಹ ಪಿಡುಗುಗಳಿಂದ ನಾಗರಿಕ ಸಮಾಜ ತಲೆ ತಗ್ಗಿಸವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಜೀತ ಪದ್ಧತಿ ಮತ್ತು ಮಾನವ ಕಳ್ಳ ಸಾಗಾಣಿಕೆಯಂತಹ ಕೃತ್ಯಗಳಿಗೆ ಪ್ರೋತ್ಸಾಹ ನೀಡುವವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ಜನ ಜಾಗೃತಿ ಅಗತ್ಯ. ಈ ಬಗ್ಗೆ ಸರಕಾರ ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅತೀಕ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಡಿ.ಎಚ್.ವೇಲಾ ಮಾತನಾಡಿ, ಜೀತ ಪದ್ಧತಿಗೆ ಉತ್ತೇಜನ ನೀಡುವವರನ್ನು ಪತ್ತೆ ಹಚ್ಚುವುದು ದೊಡ್ಡ ಸಮಸ್ಯೆ. ಆದರೂ ಇಂತಹ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿವೆ ಎಂದು ಹೇಳಿದರು.

ಸ್ವಯಂ ಸೇವಾ ಸಂಸ್ಥೆಗಳು ಜೀತ ಪದ್ಧತಿ ಮತ್ತು ಮಾನವ ಕಳ್ಳ ಸಾಗಾಣಿಕೆಯಿಂದ ನೊಂದವರ ಮತ್ತು ಆಡಳಿತರೂಢ ಸರಕಾರಗಳ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ಅನಿಷ್ಟ ಪದ್ಧತಿಗಳನ್ನು ಹತ್ತಿಕ್ಕಲು ಶ್ರಮಿಸಬೇಕು ಎಂದು ಅವರು ಸೂಚಿಸಿದರು.

ಜೀತ ಪದ್ಧತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ತಮ್ಮ ಕುಟುಂಬವನ್ನು ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಮುಕ್ತಿಗೊಳಿಸಲಾಗಿದೆ. ಇದೀಗ ನಾವು ಹೊಸ ಬದುಕು ಕಟ್ಟಿಕೊಳ್ಳಲು ಪಡಿತರ ಚೀಟಿ, ಸೂಕ್ತ ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ನೆರವು ನೀಡಬೇಕು’
-ಪಾಪಮ್ಮ, ಜೀತ ವಿಮುಕ್ತ ಮಹಿಳೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News