ಲಿಂಗತ್ವ ಅಲ್ಪಸಂಖ್ಯಾತರು ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲರು: ಸಚಿವೆ ಜಯಮಾಲಾ
ಬೆಂಗಳೂರು, ಮಾ. 1: ಅರ್ಹತೆಯನ್ನು ಆಧರಿಸಿ, ಸೂಕ್ತ ಅವಕಾಶಗಳನ್ನು ಕಲ್ಪಿಸಿದರೆ ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಎಲ್ಲರಂತೆಯೇ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲರು ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತೆ ಪರಿಚಯ ಗೌಡ ಅವರಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಿದ ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಸಾಮಾನ್ಯವಾಗಿ ಕಡೆಗಣನೆಗೆ ತುತ್ತಾಗಿ, ಪ್ರತಿನಿತ್ಯ ವಿವಿಧ ಸಮಸ್ಯೆಗಳನ್ನು ಎದುರಿಸುವಂತಹ ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೆ ನೆಲೆ ಕಲ್ಪಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಆ ಹಿನ್ನೆಲೆಯಲ್ಲಿ ನಮ್ಮ ಕಚೇರಿಯಿಂದಲೇ ಈ ಕೆಲಸ ಅಕ್ಷರಶಃ ಜಾರಿಗೆ ತಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಇದೊಂದು ಉತ್ತಮ ಪ್ರಾರಂಭ ಎಂದರು.
(ಪರಿಚಯ ಗೌಡ)
ಲಿಂಗತ್ವ ಅಲ್ಪಸಂಖ್ಯಾತರಾಗಿರುವ ಪರಿಚಯ ಗೌಡ ಎಂಬವರಿಗೆ ಇಂದಿನಿಂದ ತಮ್ಮ ವಿಧಾನಸೌಧದ ಕಚೇರಿಯಲ್ಲಿಯೇ ಉದ್ಯೋಗ ನೀಡಿದ್ದು, ಆ ಪ್ರಕಾರ ಲಿಂಗತ್ವ ಅಲ್ಪಸಂಖ್ಯಾತೆ ಪರಿಚಯ ಗೌಡ ಅವರು ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಲಾಗಿದೆ.
'ಲಿಂಗತ್ವ ಅಲ್ಪಸಂಖ್ಯಾತರಿಗೆ ಬಾಯಿ ಮಾತಿನ ಅನುಕಂಪ ಬೇಕಿಲ್ಲ. ಅವರು ಸಮಾಜದಲ್ಲಿ ಗೌರವದಿಂದ ಜೀವನ ನಿರ್ವಹಣೆ ಮಾಡಲು ಸೂಕ್ತ ಅವಕಾಶ ಕಲ್ಪಿಸಬೇಕು. ಇದರಿಂದ ಅವರು ಎಲ್ಲರಂತೆ ಬದುಕಲು ಸಾಧ್ಯವಾಗಲಿದೆ'
-ಜಯಮಾಲಾ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ