ಮಾಧ್ಯಮಗಳು ನಮ್ಮ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದೆ: ಹುತಾತ್ಮ ಯೋಧ ಗುರು ತಾಯಿ

Update: 2019-03-01 14:54 GMT

ಬೆಂಗಳೂರು, ಮಾ.1: ನಾನು ಸೊಸೆ ಜೊತೆ ಚೆನ್ನಾಗಿದ್ದೇನೆ. ಯಾವುದೇ ರೀತಿಯ ಜಗಳ ನಮ್ಮಲ್ಲಿಲ್ಲ. ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದು, ನಾವು ಹಣಕ್ಕಾಗಿ ಪೊಲೀಸ್ ಠಾಣೆಗೆ ಹೋಗಿಲ್ಲ ಎಂದು ಹುತಾತ್ಮ ಯೋಧ ಗುರು ಅವರ ತಾಯಿ ಚಿಕ್ಕತಾಯಮ್ಮ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಯೋಧ ಗುರು ಅವರ ಕುಟುಂಬಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 5 ಲಕ್ಷ ಚೆಕ್ ವಿತರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಮಗೆ ಎದ್ದು ನಿಲ್ಲಲು ಶಕ್ತಿ ಇಲ್ಲ. ನಾವೇಕೆ ಸೊಸೆಯ ಜೊತೆ ಜಗಳ ಮಾಡಬೇಕು. ಸುಮ್ಮನೆ ಜನರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ನಾವು ಬಡವರು. ನಮಗೆ ದುಡ್ಡು ಬೇಕಾಗಿಲ್ಲ. ನಾಡಿನ ಜನತೆ ನನ್ನ ಮಗನಿಗೆ ನೀಡುತ್ತಿರುವ ಗೌರವವೇ ನಮಗೆ ಸಾಕು ಎಂದು ಯೋಧ ಗುರು ಅವರ ತಾಯಿ ಚಿಕ್ಕತಾಯಮ್ಮ ಭಾವುಕರಾದರು.

ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಹುತಾತ್ಮ ಯೋಧ ಗುರು ಅವರ ಕಂಚಿನ ಪ್ರತಿಮೆ ನಿರ್ಮಿಸಲಾಗುವುದು. ಪ್ರತಿಮೆ ನಿರ್ಮಾಣ ಸಂಬಂಧಿಸಿದಂತೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪುಲ್ವಾಮ ಉಗ್ರ ದಾಳಿಗೆ ಯೋಧ ಗುರು ವೀರ ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ಪ್ರಸ್ತುತ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ 5ಲಕ್ಷ ರೂ. ನೀಡಲಾಗಿದೆ. ಬಿಬಿಎಂಪಿ ವತಿಯಿಂದ ಶೀಘ್ರವೇ 20 ಲಕ್ಷ ರೂ. ನೀಡಲಾಗುವುದು ಎಂದರು.

ಈ ವೇಳೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಚ್.ವಿ.ಅಶ್ವಥ್, ಪ್ರಧಾನ ಕಾರ್ಯದರ್ಶಿ ನಲ್ಲಪ್ಪ, ಸಂಘದ ಪದಾಧಿಕಾರಿ ಎಸ್.ಜಿ.ಸುರೇಶ್, ಗಂಗಾಧರ್ ಜಾಣಗೆರೆ, ರಾಮಚಂದ್ರ, ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News