ಜಮ್ಮು ಕಾಶ್ಮೀರ: ಮೀಸಲಾತಿ ವಿಸ್ತರಣೆ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಪಿಡಿಪಿ, ಎನ್‌ಸಿ ನಿರ್ಧಾರ

Update: 2019-03-01 18:30 GMT

ಶ್ರೀನಗರ, ಮಾ.1: ಸಂವಿಧಾನದ 370ನೇ ಅನುಚ್ಛೇದಕ್ಕೆ ತಂದಿರುವ 77 ಮತ್ತು 103ನೇ ತಿದ್ದುಪಡಿಯನ್ನು (ಎಸ್ಸಿ/ಎಸ್ಟಿಗಳಿಗೆ ಮೀಸಲಾತಿ)ವಿಸ್ತರಿಸುವ ನಿರ್ಧಾರವನ್ನು ಚುನಾಯಿತ ಸರಕಾರದ ಅನುಪಸ್ಥಿತಿಯಲ್ಲಿ ತೆಗೆದುಕೊಂಡಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದಾಗಿ ಎನ್‌ಸಿ ಮತ್ತು ಪಿಡಿಪಿ ಪಕ್ಷಗಳು ಹೇಳಿವೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ಅನುಚ್ಛೇದಕ್ಕೆ ತಂದಿರುವ 77 ಮತ್ತು 103ನೇ ತಿದ್ದುಪಡಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಪರಿಶಿಷ್ಟ ಜಾತಿ/ವರ್ಗದ ಸಮುದಾಯದವರಿಗೆ ಮೀಸಲಾತಿ ಸೌಲಭ್ಯ ಒದಗಿಸಲಾಗಿದ್ದು, ಇದನ್ನು ವಿಸ್ತರಿಸುವ ಆಧ್ಯಾದೇಶಕ್ಕೆ ಗುರುವಾರ ಕೇಂದ್ರ ಸರಕಾರ ಅನುಮೋದನೆ ನೀಡಿದೆ. 370ನೇ ಅನುಚ್ಛೇದದ ಪ್ರಕಾರ, ಸಾಂವಿಧಾನಿಕ ವ್ಯವಸ್ಥೆಯನ್ನು ವಿಸ್ತರಿಸಲು ಜಮ್ಮು ಕಾಶ್ಮೀರ ಸರಕಾರದ ಒಪ್ಪಿಗೆಯ ಅಗತ್ಯವಿದೆ. ಸರಕಾರ ಎಂದರೆ ಚುನಾಯಿತ ಸರಕಾರ. ರಾಜ್ಯಪಾಲರು ರಾಷ್ಟ್ರಪತಿಯ ಏಜೆಂಟ್ ಅಥವಾ ಪ್ರತಿನಿಧಿಯಾಗಿರುವ ಕಾರಣ ರಾಜ್ಯಪಾಲರಿಂದ ಒಪ್ಪಿಗೆ ಪಡೆಯುವಂತಿಲ್ಲ. ಆದ್ದರಿಂದ , ಕೇಂದ್ರ ಸರಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಶ್ನಿಸಬಹುದು ಎಂಬ ಕುರಿತು ಪಕ್ಷವು ಅನುಭವಿ ವಕೀಲರ ಸಲಹೆ ಪಡೆಯಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ)ನ ಮುಖಂಡ ಉಮರ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಕುರಿತ ಸಂವಿಧಾನದ ಅನುಚ್ಛೇದಕ್ಕೆ ತಂದಿರುವ ತಿದ್ದುಪಡಿಯನ್ನು ವಿಸ್ತರಿಸುವ ಕೇಂದ್ರ ಸರಕಾರದ ನಿರ್ಧಾರವು ಕಾಶ್ಮೀರ ರಾಜ್ಯವನ್ನು ಇನ್ನಷ್ಟು ದುರ್ಬಲಗೊಳಿಸುವ ಕುಟಿಲ ಪ್ರಯತ್ನದ ಫಲವಾಗಿದೆ . ಇದನ್ನು ಸಹಿಸಲಾಗದು ಮತ್ತು ಭಾರತ ಸರಕಾರದ ಕ್ರಿಮಿನಲ್ ಮತ್ತು ಅಕ್ರಮ ಕೃತ್ಯವನ್ನು ಖಂಡಿಸಿ ಇಡೀ ರಾಜ್ಯದ ಜನತೆ ಪ್ರತಿಭಟಿಸಲಿದ್ದಾರೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಭಾರತ ಸರಕಾರ ಬೆಂಕಿಗೆ ಪೆಟ್ರೋಲ್ ಸುರಿಯುವ ಕೆಲಸವನ್ನು ಯಾಕೆ ಮಾಡುತ್ತಿದೆ ಎಂದರ್ಥವಾಗುವುದಿಲ್ಲ. ಪರಿಸ್ಥಿತಿ ಕೈಮೀರಿ ಹೋಗುವಂತೆ, ಕಾಶ್ಮೀರವನ್ನು ಮತ್ತಷ್ಟು ಅಂಚಿಗೆ ಸರಿಸುವ ಪ್ರಯತ್ನ ಯಾಕೆ ನಡೆಯುತ್ತಿದೆ ಎಂಬ ಪ್ರಶ್ನೆ ಮೂಡುತ್ತಿದೆ. ಇದನ್ನು ವಿರೋಧಿಸಿ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ನ್ಯಾಯಾಲಯದಲ್ಲಿ ಸರ್ವ ವಿಧದ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ. 1954ರ ರಾಷ್ಟ್ರಪತಿಗಳ ಆದೇಶಕ್ಕೆ ಯಾವುದೇ ತಿದ್ದುಪಡಿ ತರಬೇಕಿದ್ದರೂ, ಚುನಾಯಿತ ಸರಕಾರದ ಒಪ್ಪಿಗೆಯ ಅಗತ್ಯವಿದೆ ಎಂದು ಪಕ್ಷ ಟ್ವಿಟರ್‌ನಲ್ಲಿ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News