ರೊಹಿಂಗ್ಯಾ ನಿರಾಶ್ರಿತರಿಗೆ ಫಿಲಿಪೀನ್ಸ್ ಪೌರತ್ವ!

Update: 2019-03-02 03:48 GMT

ಮನಿಲಾ, ಮಾ.2: ರೊಹಿಂಗ್ಯಾ ನಿರಾಶ್ರಿತರಿಗೆ ದೇಶದ ಪೌರತ್ವ ನೀಡಲು ತಾವು ಬಯಸಿರುವುದಾಗಿ ಫಿಲಿಪೀನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟ್ರೇಟ್ ಪ್ರಕಟಿಸಿದ್ದಾರೆ. ದಬ್ಬಾಳಿಕೆಗೆ ಒಳಗಾಗಿರುವ ಈ ಅಲ್ಪಸಂಖ್ಯಾತ ಗುಂಪಿನ ಪರವಾಗಿ 2015ರ ಬಳಿಕ ಅಧ್ಯಕ್ಷರು ಹೇಳಿಕೆ ನೀಡುತ್ತಿರುವುದು ಇದು ಮೂರನೇ ಬಾರಿ.

"ರೊಹಿಂಗ್ಯಾರನ್ನು ನಮ್ಮ ದೇಶಕ್ಕೆ ಬರಮಾಡಿಕೊಳ್ಳುವ ಬಯಕೆ ನನಗಿದೆ" ಎಂದು ಮನಿಲಾದಲ್ಲಿ ನಡೆದ ಫಿಲಿಪೀನ್ಸ್ ಲೀಗ್ ಆಫ್ ಮುನ್ಸಿಪಾಲಿಟೀಸ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಸ್ಪಷ್ಟಪಡಿಸಿದರು. ರೊಹಿಂಗ್ಯಾ ಸಮುದಾಯಕ್ಕೆ ಪೌರತ್ವ ನೀಡಲು ಮ್ಯಾನ್ಮಾರ್ ನಿರಾಕರಿಸಿದ ಹಿನ್ನೆಲೆಯಲ್ಲಿ, ರೊಹಿಂಗ್ಯಾ ಸಮುದಾಯ ಇಡೀ ವಿಶ್ವದ ಅತಿದೊಡ್ಡ ದೇಶರಹಿತರ ಗುಂಪು ಎನಿಸಿಕೊಂಡಿದೆ.

ಸಾವಿರಾರು ರೊಹಿಂಗ್ಯಾ ಜನರು ಉತ್ತಮ ಜೀವನ ಮತ್ತು ಸ್ಥಿತಿಗತಿಯನ್ನು ಎದುರು ನೋಡುತ್ತಿರುವ ಮತ್ತು ಮ್ಯಾನ್ಮಾರ್‌ಗೆ ವಾಪಾಸಾಗುವ ಅನಿವಾರ್ಯತೆಯ ಭೀತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಫಿಲಿಪೀನ್ಸ್ ಅಧ್ಯಕ್ಷರ ಈ ಹೇಳಿಕೆ ಸಮುದಾಯದ ಪಾಲಿಗೆ ಆಶಾಕಿರಣವಾಗಿದೆ. ರೊಹಿಂಗ್ಯಾ ನಿರಾಶ್ರಿತರ ಪೈಕಿ ಅತಿ ಹೆಚ್ಚು ಅಂದರೆ ಸುಮಾರು 7 ಲಕ್ಷದಷ್ಟು ಮಂದಿ ಭೌಗೋಳಿಕವಾಗಿ ಹತ್ತಿರವಿರುವ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ.

ಆದರೆ ಅಧಿಕ ಸಂಖ್ಯೆಯ ನಿರಾಶ್ರಿತರಿಗೆ ಆಶ್ರಯ ನೀಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಬಾಂಗ್ಲಾದೇಶ ನಿರಾಶ್ರಿತರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ಆರಂಭಿಸಿದೆ. ಬಾಂಗ್ಲಾದೇಶಕ್ಕೆ ತೆರಳಿರುವ ನಿರಾಶ್ರಿತರ ಪೈಕಿ ಬಹುತೇಕ ಮಂದಿ ಗಡಿ ಪಟ್ಟಣವಾದ ಕಾಕ್ಸ್ ಬಜಾರ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News