''ಮೋದಿ ಪಾಕ್ ಗೆ ಎಚ್ಚರಿಕೆ ನೀಡಿದ ಮೇಲೆ ಅಭಿನಂದನ್ ಬಿಡುಗಡೆ''

Update: 2019-03-02 05:58 GMT

ಬೆಂಗಳೂರು, ಮಾ.2: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಿದ ಬಳಿಕ ಪಾಕಿಸ್ತಾನವು ಭಾರತದ ವಾಯು ಪಡೆಯ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

‘‘ಪೈಲಟ್ ಅವರನ್ನು ಬಿಡುಗಡೆಗೊಳಿಸದೇ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ಪ್ರಧಾನಿ ಎಚ್ಚರಿಸಿದ ನಂತರ ಪಾಕ್ ಅವರನ್ನು ಬಿಡುಗಡೆಗೊಳಿಸಿತು’’ ಎಂದು ಪಕ್ಷ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು ಸುತ್ತಮುತ್ತಲಿನ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವತಯಾರಿ ನಡೆಸಲು ಆಯೋಜಿಸಲಾಗಿದ್ದ ಸಭೆ ಇದಾಗಿತ್ತು.

‘‘ಅಭಿನಂದನ್ ಅವರ ಶೌರ್ಯವನ್ನು ಹೊಗಳಬೇಕು. ಅವರ ಪ್ಯಾರಾಚ್ಯೂಟ್ ಪಾಕಿಸ್ತಾನದಲ್ಲಿಳಿದಾಗ ಅವರು ತಮ್ಮ ಬಳಿಯಿದ್ದ ದಾಖಲೆಗಳನ್ನು ನುಂಗಿ ಅದು ಪಾಕ್ ಸೈನಿಕರ ಕೈಗಳಿಗೆ ಸಿಗದಂತೆ ನೋಡಿಕೊಂಡಿದ್ದಾರೆ. ದೇಶಭಕ್ತರ ನಡೆ ಹೇಗಿರಬೇಕೆಂದು ಅವರು ಇಡೀ ಜಗತ್ತಿಗೆ ತೋರಿಸಿದ್ದಾರೆ’’ ಎಂದು ಯಡಿಯೂರಪ್ಪ ಹೇಳಿದರು.

ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿಯನ್ನಾಗಿಸಲು ಶ್ರಮಿಸಬೇಕೆಂದು ಅವರು ಈ ಸಂದರ್ಭ ಕಾರ್ಯಕರ್ತರಿಗೆ ಕರೆ ನೀಡಿದರು.

‘‘ನರೇಂದ್ರ ಮೋದಿಯ ತಂತ್ರಗಾರಿಕೆ ಪಾಕಿಸ್ತಾನದ ನಿಜ ಬಣ್ಣವನ್ನು ಬಯಲುಗೊಳಿಸಿದೆ. ಜಗತ್ತಿನಲ್ಲಿ ಈಗ ಪಾಕಿಸ್ತಾನ ಏಕಾಂಗಿಯಾಗಿ ಬಿಟ್ಟಿದೆ. ಚೀನಾ ಕೂಡ ಪಾಕಿಸ್ತಾನವನ್ನು ಬೆಂಬಲಿಸುತ್ತಿಲ್ಲವಾದ ಕಾರಣ ಪಾಕಿಸ್ತಾನ ತಗ್ಗಿದೆ. ನಲ್ವತ್ತು ವರ್ಷಗಳಲ್ಲಿ ಮೊದಲ ಬಾರಿ ಭಾರತೀಯ ಪಡೆಗಳು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿವೆ. ಭದ್ರತಾ ಪಡೆಗಳಿಗೆ ತಮ್ಮ ಶೌರ್ಯ, ಸಾಹಸವನ್ನು ಪ್ರದರ್ಶಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ ಫಲವಿದು’’ ಎಂದು ಯಡಿಯೂರಪ್ಪ ಹೇಳಿದರು.

ಮೋದಿ ಪ್ರಧಾನಿಯಾದ ನಂತರ ಭಾರತದ ಗೌರವ ಇನ್ನಷ್ಟು ಹೆಚ್ಚಾಗಿದೆ ಎಂದೂ ಅವರು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News