"ಪಾಕಿಸ್ತಾನಿಯರಂತೆ ಬಿಜೆಪಿಯವರೂ ಹೇಳಿಕೆ ತಿರುಚುವುದರಲ್ಲಿ, ವಿಡಿಯೋ ಎಡಿಟಿಂಗ್ ನಲ್ಲಿ ನಿಸ್ಸೀಮರು"

Update: 2019-03-02 12:44 GMT

ಬೆಂಗಳೂರು, ಮಾ.2: ಉಗ್ರರ ಅಡಗುತಾಣಗಳ ವಿರುದ್ಧ ಭಾರತದ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ ಎಂಬ ಅರ್ಥದಲ್ಲಿ ಟೀಕೆ ಮಾಡಿದ್ದ ಬಿಜೆಪಿ ನಾಯಕರಿಗೆ ಸರಣಿ ಟ್ವಿಟ್‌ಗಳ ಮೂಲಕ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನಿಯರಂತೆ ಬಿಜೆಪಿಯವರೂ ಕೂಡ ಹೇಳಿಕೆಗಳನ್ನು ತಿರುಚುವುದರಲ್ಲಿ, ವಿಡಿಯೋ ಎಡಿಟ್ ಮಾಡುವುದರಲ್ಲಿ ನಿಸ್ಸೀಮರು ಎಂದು ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.

ಬಿಜೆಪಿ ನಾಯಕರು ತಾವೇ ಹೋಗಿ ದಾಳಿ ನಡೆಸಿದ್ದೇವೆಂದು ಸಂಭ್ರಮಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ತಾನು ಹೇಳಿದ್ದು. ಆದರೆ, ಬಿಜೆಪಿಯವರು ತಮ್ಮ ಹೇಳಿಕೆಯನ್ನು ತಿರುಚಿ ಬೇರೆ ಅರ್ಥ ಬರುವ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

'ನಿಮ್ಮ ರಾಜಕೀಯ ಲಾಭಕ್ಕಾಗಿ ಒಬ್ಬರ ಹೆಸರಿಗೆ ಮಸಿ ಬಳಿಯುವ ರೀತಿಯಲ್ಲಿ ಹೇಳಿಕೆ ತಿರುಚುವುದು ಸರಿಯಲ್ಲ. ನಮ್ಮ ಹೀರೋ ಅಭಿನಂದನ್ ಅವರ ಹೇಳಿಕೆಯನ್ನು ತಿರುಚಿ ಪಾಕಿಸ್ತಾನಿಯರು ವಿಡಿಯೋ ಸೃಷ್ಟಿಸಿರುವಂತೆ, ನೀವು ಮಾಡಿದ್ದೀರಿ ಎಂದು ಬಿಜೆಪಿಯವರನ್ನು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ್ಮ ರಕ್ಷಣಾ ಕಾರ್ಯಾಚರಣೆಯ ವಿಚಾರವನ್ನು ಬಳಸಿಕೊಂಡು ಬಿಜೆಪಿ ಸ್ನೇಹಿತರು ರಾಜಕೀಯ ಲಾಭಗಳಿಸುವ ಹಾಗೂ ಯುದ್ಧೋನ್ಮಾದ ಮಾತುಗಳಿಂದ ಸಾಮಾಜಿಕ ಅಶಾಂತಿ ಮೂಡಿಸುತ್ತಿರುವ ಪ್ರಯತ್ನದ ಬಗ್ಗೆ ತಾನು ಮಾತನಾಡಿದ್ದು. ಆದರೆ, ಆ ಹೇಳಿಕೆಯನ್ನೇ ತಿರುಚಿದ್ದೀರಿ. ನಮ್ಮ ನೆರೆಯ ರಾಷ್ಟ್ರದಂತೆಯೇ ನೀವೂ ಕೂಡ ನಕಲಿ ಸುದ್ದಿಗಳ ತಜ್ಞರೆಂದು ಸಾಬೀತುಪಡಿಸಿದ್ದೀರಿ ಎಂದು ಕುಮಾರಸ್ವಾಮಿ ಟ್ವಿಟ್‌ನಲ್ಲಿ ಕುಟುಕಿದ್ದಾರೆ.

ಇದಕ್ಕೂ ಮುನ್ನ ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕುಮಾರಸ್ವಾಮಿ ಮಾತನಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಉಗ್ರಗಾಮಿಗಳು ಮತ್ತು ದೇಶಪ್ರೇಮಿಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ. ಉಗ್ರಗಾಮಿಗಳು ಸತ್ತರೆ ದೇಶದೊಳಗಡೆ ಶಾಂತಿ ಯಾಕೆ ಕದಡುತ್ತೆ ? ನಿಮ್ಮ ಪ್ರಕಾರ ದೇಶದೊಳಗೆ ಉಗ್ರಗಾಮಿಗಳು ಇದ್ದಾರೆ ಅಂತಾಯ್ತು. ನಿಮಗೆ ಗೊತ್ತಿರೊ ಉಗ್ರಗಾಮಿಗಳನ್ನು ದಯವಿಟ್ಟು ಸೈನಿಕರಿಗೆ ಹಿಡಿದುಕೊಟ್ಟು ಪುಣ್ಣ ಕಟ್ಟಿಕೊಳ್ಳಿ ಎಂದು ಟ್ವಿಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News