18 ವರ್ಷ ತುಂಬಿದವರು ಕಡ್ಡಾಯ ಮತ ಚಲಾಯಿಸಿ: ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

Update: 2019-03-02 12:54 GMT

ಬೆಂಗಳೂರು, ಮಾ.2: ಪ್ರಜಾಪ್ರಭುತ್ವದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸುವುದು ಅಗತ್ಯ ಎಂದು ರಾಜ್ಯ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಇಂದಿಲ್ಲಿ ಹೇಳಿದರು. 

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಮತದಾನದ ಮಹತ್ವ ಕುರಿತು ಭಾರತ ಚುನಾವಣಾ ಆಯೋಗದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ, ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸುವುದು ಅಗತ್ಯ. ಅದು ಅವನ ಹಕ್ಕು ಮತ್ತು ಕರ್ತವ್ಯ. ಆದ್ದರಿಂದ, 18 ವರ್ಷ ತುಂಬಿರುವ ಪ್ರತಿಯೊಬ್ಬರು ಕೂಡಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದ ಹಕ್ಕು ಮತದಾನ. ಅದನ್ನು ಪ್ರತಿಯೊಬ್ಬರು ವಿವೇಚನಾಶೀಲರಾಗಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಚಲಾಯಿಸಬೇಕು. ಅಷ್ಟೇ ಅಲ್ಲದೆ, ದೇಶದ ಮುಂದಿನ ಉತ್ತಮ ಭವಿಷ್ಯಕ್ಕಾಗಿ ತಪ್ಪದೆ ಮತದಾನ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ರವೀಂದ್ರ ಪ್ರತಿಜ್ಞೆವಿಧಿ ಬೋಧಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಡಾ.ಎನ್.ಮಂಜುಳಾ, ಸರಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಜೆ.ಎಸ್.ವೀಣಾ, ಸರಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್.ಜಿ.ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News