ಇಂಜಿನಿಯರಿಂಗ್ ಶುಲ್ಕ ಶೇ.10 ರಷ್ಟು ಹೆಚ್ಚಳ: ಸಚಿವ ಜಿ.ಟಿ.ದೇವೇಗೌಡ

Update: 2019-03-02 13:04 GMT

ಬೆಂಗಳೂರು, ಮಾ.2: ರಾಜ್ಯ ವ್ಯಾಪ್ತಿಯಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕ ಶೇಕಡ 10ರಷ್ಟು ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಶನಿವಾರ ನಗರದ ಕುಮಾರಕೃಪಾದಲ್ಲಿ ಕಾಮೆಡ್-ಕೆ ಸೇರಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಶೇಕಡ 15ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಪ್ರಸ್ತಾಪ ಇತ್ತು. ಆದರೆ, ನ್ಯಾ.ಶೈಲೇಂದ್ರಕುಮಾರ್ ನೇತೃತ್ವದ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ನಿಗದಿ ಸಮಿತಿ ಶೇ.8ರಷ್ಟು ಹೆಚ್ಚಳಕ್ಕೆ ಸೀಮಿತಗೊಳಿಸಿತ್ತು. ಹೀಗಾಗಿ, ಶನಿವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಶೇ.10ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರಕಟಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಶುಲ್ಕ ಹೆಚ್ಚಳ ಸಂಬಂಧ ದೂರವಾಣಿ ಮೂಲಕ ಸಮಾಲೋಚನೆ ನಡೆಸಿ ಇಲಾಖೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಧರಿಸಲಾಗಿದೆ ಎಂದ ಅವರು, ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡವಿಲ್ಲ ಎಂದರು.

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಅಡ್ಡಿ ಉಂಟಾಗಬಾರದೆಂಬ ಉದ್ದೇಶದಿಂದ ಶುಲ್ಕ ನಿಗದಿ ಪಡಿಸಲಾಗಿದೆ. ಸದ್ಯಕ್ಕೆ ಯಾವುದೇ ಶುಲ್ಕ ನಿಗದಿ ಸಮಿತಿಗಳನ್ನು ರಚಿಸಿಲ್ಲ ಎಂದು ದೇವೇಗೌಡ ಸ್ಪಷ್ಟನೆ ನೀಡಿದರು.

ಈ ಬಾರಿ ಎಷ್ಟು ಶುಲ್ಕ?

* 1ನೇ ಸ್ಲ್ಯಾಬ್ನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸರಕಾರಿ ಸೀಟುಗಳಿಗೆ ಪ್ರಸ್ತುತ 2019-20ನೇ ಸಾಲಿಗೆ 58,800 ರೂ. ನಿಗದಿ * 2ನೇ ಸ್ಲ್ಯಾಬ್ 2018-19ನೇ ಸಾಲಿನಲ್ಲಿ 59,400 ರೂ. ಶುಲ್ಕವನ್ನು 65,340 ರೂ.ಗೆ ಪರಿಷ್ಕರಿಸಲಾಗಿದೆ

* ಅದೇ ರೀತಿ, ಕಾಮೆಡ್-ಕೆ ಸೀಟುಗಳನ್ನು 1ನೇ ಸ್ಲ್ಯಾಬ್ನಲ್ಲಿ 2018-19ರಲ್ಲಿ 1,30,680 ರೂ. ಶುಲ್ಕವನ್ನು 1,43,748 ರೂ.ಗೆ ಹೆಚ್ಚಳ

* 2ನೇ ಸ್ಲ್ಯಾಬ್ನಲ್ಲಿ 1,83,600 ರೂ. ಶುಲ್ಕವನ್ನು 2,01,960 ರೂ.ಗೆ ಹೆಚ್ಚಿಸಲು ತೀರ್ಮಾನ

‘ಸರಕಾರಿ ಶುಲ್ಕ ಹೆಚ್ಚಳವಿಲ್ಲ’

ಶನಿವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಶೇ.10ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಸರಕಾರಿ ಕಾಲೇಜುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ.

-ಜಿ.ಟಿ.ದೇವೇಗೌಡ,ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News