×
Ad

ನೀವು ಪಡೆದ ಅಂಕ ಮುಖ್ಯವಲ್ಲ, ಸಮಾಜಕ್ಕೆ ನೀಡಿದ ಕೊಡುಗೆ ಮುಖ್ಯ: ನ್ಯಾ.ರಾಮಮೋಹನ್ ರೆಡ್ಡಿ

Update: 2019-03-02 22:01 IST

ಬೆಂಗಳೂರು, ಮಾ. 2: ಮುಂದುವರೆದ ರಾಷ್ಟ್ರಗಳಲ್ಲಿ ನೀವು ಪಡೆದ ಅಂಕಗಳನ್ನು ನೋಡುವುದಿಲ್ಲ. ಬದಲಿಗೆ ನೀವು ಸಮಾಜಕ್ಕೆ ನೀಡಿರುವ ಕೊಡುಗೆಗಳು, ನಡತೆ ಮತ್ತು ನಿಮ್ಮ ವ್ಯಕ್ತಿತ್ವವನ್ನು ನೋಡುತ್ತಾರೆ. ಆದುದರಿಂದ ಕಾನೂನು ವಿದ್ಯಾರ್ಥಿಗಳಿಗೆ ನಡತೆ, ಸ್ವಾಭಿಮಾನ, ಪ್ರಾಮಾಣಿಕತೆ ಬಹಳ ಮುಖ್ಯ ಎಂದು ನಿವೃತ್ತ ನ್ಯಾಯಮೂರ್ತಿ ರಾಮಮೋಹನ್ ರೆಡ್ಡಿ ಹೇಳಿದ್ದಾರೆ.

ಶನಿವಾರ ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವಿಶ್ವ ವಿದ್ಯಾಲಯ ಕಾನೂನು ಕಾಲೇಜಿನಲ್ಲಿ ನಡೆದ 23ನೆ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವುಗಳು ಕಾನೂನು ವಿದ್ಯಾಭ್ಯಾಸ ಮಾಡುವ ವೇಳೆ ಈ ರೀತಿಯ ಸ್ಪರ್ಧೆ ಇರುತ್ತಿರಲಿಲ್ಲ. ಸ್ಪರ್ಧೆಯಿಂದ ಕಾನೂನು ವಿದ್ಯಾರ್ಥಿಗಳನ್ನು ಉತ್ತಮ ರೀತಿಯ ಚರ್ಚಾಪಟುಗಳನ್ನು ಮಾಡುವಲ್ಲಿ ಸಂದೇಹವಿಲ್ಲ. ಕಾನೂನುಗಳನ್ನು ಓದಿ ಅರ್ಥೈಸಿಕೊಳ್ಳಬೇಕು ಹಾಗೂ ನ್ಯಾಯಾಲಯದ ತೀರ್ಪುಗಳನ್ನು ಚೆನ್ನಾಗಿ ಓದಿ ಕರಗತ ಮಾಡಿಕೊಂಡಲ್ಲಿ ಈ ವೃತ್ತಿಗೆ ಅರ್ಥಪೂರ್ಣತೆ ಬರುತ್ತದೆ. ದೀರ್ಘ ಅಧ್ಯಯನ, ಎಲ್ಲಿ ಯಾವ ಕಾನೂನನ್ನು ಅನ್ವಯ ಮಾಡಬೇಕೆಂಬ ಚಾಣಾಕ್ಷತೆ ಕಾನೂನು ವಿದ್ಯಾರ್ಥಿಗಳಿಗೆ ಇರಬೇಕು. ಕಾನೂನು ವಿದ್ಯಾರ್ಥಿಗಳು ಉದ್ವೇಗಕ್ಕೆ ಒಳಗಾಗದೆ, ಪ್ರಕರಣವನ್ನು ಕೂಲಂಕಷವಾಗಿ ತಿಳಿದುಕೊಂಡು ವಾದ ನಡೆಸಬೇಕು. ವಾದ ಮಾಡುವ ವೇಳೆ ಆತ್ಮವಿಶ್ವಾಸ ಬಹಳ ಮುಖ್ಯ, ನ್ಯಾಯಾಧೀಶರು ಹಾಗೂ ನಿಮ್ಮ ಎದುರು ವಕೀಲರಿಗೆ ಗೌರವವಾಗಿ ನೋಡಬೇಕು.

ಪ್ರಕರಣ ಮುಖ್ಯ ಅಂಶಗಳ ಬಗ್ಗೆ ಗುರುತರವಾಗಿ ತಿಳಿದುಕೊಳ್ಳುವುದು. ಏಕಾಗ್ರತೆ ಈ ರೀತಿಯ ಸ್ಪರ್ಧಿಗಳಲ್ಲಿ ಬಹಳ ಮುಖ್ಯ. ನ್ಯಾಯಾಧೀಶರು ಕೇಳುವ ಪ್ರಶ್ನೆಗಳನ್ನು ಗಮನಾರ್ಹವಾಗಿ ಕೇಳುವುದು ಉತ್ತಮ ಆಲೋಚನೆಗಳಿರಬೇಕು, ಸತತವಾಗಿ ಕಷ್ಟವನ್ನು ಸಲೀಸಾಗಿ ನಿರ್ವಹಿಸಿದಾಗ ಮಾತ್ರ ಈ ವೃತ್ತಿಗೆ ಗೌರವ. ಸಂವಹನ, ಹೊಣೆಗಾರಿಕೆ, ಕೌಶಲ್ಯ, ವ್ಯವಸ್ಥಿತತೆ ಹಾಗೂ ಬೌದ್ಧಿಕತೆಯ ಅಳತೆ ಎಲ್ಲವೂ ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊ.ಪದ್ಮನಾಭ ರಾಮನುಜ ಮಾತನಾಡಿ, ಅಣುಕು ಸ್ಪರ್ಧೆ 14ನೆ ಶತಮಾನದಲ್ಲಿ ಶುರುವಾಗಿ 18ನೆ ಶತಮಾನದಲ್ಲಿ ಅಮೆರಿಕಾದ ಹಾರ್ವರ್ಡ್ ಲಾ ಶಾಲೆಯಲ್ಲಿ ಪ್ರಾರಂಭವಾಯಿತು. ಕೌಶಲ್ಯ ಅವಲಂಬಿತ ಶಿಕ್ಷಣ ಬಹಳ ಅಗತ್ಯ. ಅಣುಕು ನ್ಯಾಯಾಲಯ ಸ್ಪರ್ಧೆಗಳು ಕಾನೂನು ವಿದ್ಯಾರ್ಥಿಗಳ ಕ್ರಿಯಾಶೀಲತೆ ಹಾಗೂ ಪ್ರಾಯೋಗಿಕತೆಯನ್ನು ಕಲಿಸುತ್ತದೆ ಎಂದರು.

ವಿಶ್ವ ವಿದ್ಯಾಲಯದ ಕಾನೂನು ಕಾಲೇಜು 23 ವರ್ಷಗಳಿಂದ ಸತತವಾಗಿ ಈ ಅಣುಕು ನ್ಯಾಯಾಲಯ ಸ್ಪರ್ಧೆ ಮಾಡುತ್ತಾ ಬಂದಿರುವುದು ಹೆಗ್ಗಳಿಕೆಯ ವಿಚಾರವೆ ಎಂದ ಅವರು, ಎಲ್ಲ ರಾಜ್ಯಗಳಿಂದ ಬಂದಿರುವ ಕಾನೂನು ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿದರು.

ಉತ್ತಮ ನಡತೆ ಕೇವಲ ಕಾನೂನು ವಿದ್ಯಾರ್ಥಿಗಳಿಗಲ್ಲದೆ, ಕಾನೂನು ಪ್ರಾಧ್ಯಾಪಕರಿಗೆ ಇರಬೇಕು. ವಿಶ್ವವಿದ್ಯಾಲಯ ಕಾನೂನು ಕಾಲೇಜು ಕಾನೂನು ವಿದ್ಯಾರ್ಥಿಗಳನ್ನು ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಲು ಉತ್ತೇಜಿಸುತ್ತದೆಯೇ ಹೊರತು ಕಂಪೆನಿಗಳಲ್ಲಿ ಉದ್ಯೋಗ ಗಳಿಸುವಂತಹದಲ್ಲ.

-ಪ್ರೊ.ಸುದೇಶ್, ಪ್ರಾಂಶುಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News