×
Ad

ಭಾಷೆಗಳ ನಡುವಿನ ಸಾಹಿತ್ಯ-ಸಂಸ್ಕೃತಿಯ ಸಾಮ್ಯತೆ ಅನುವಾದಕ್ಕೆ ಪೂರಕ: ಎಚ್.ಎಸ್.ಶಿವಪ್ರಕಾಶ್

Update: 2019-03-02 22:06 IST

ಬೆಂಗಳೂರು, ಮಾ.2: ಎರಡು ಭಾಷೆಗಳ ಸಾಹಿತ್ಯ ಹಾಗೂ ಸಂಸ್ಕೃತಿಯ ಸಾಮ್ಯತೆಗಳು ಯಶಸ್ವಿ ಅನುವಾದಕ್ಕೆ ಪೂರಕವಾಗಲಿವೆ. ಭಾಷೆಗಳ ನಡುವೆ ಸಾಮ್ಯತೆ ಇಲ್ಲದಿದ್ದರೆ ಭಾವಾರ್ಥದ ಹಿನ್ನೆಲೆಯಲ್ಲಿ ಅನುವಾದ ಮಾಡಬಹುದು ಎಂದು ಹಿರಿಯ ನಾಟಕಕಾರ ಡಾ.ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಿಸಿದರು.

ಶನಿವಾರ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ಇಲ್ಲಿನ ರಾಣಿ ಚೆನ್ನಮ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಬಹುಭಾಷಾ ಪುಸ್ತಕ ವಿಮರ್ಶಾ ಸ್ಪರ್ಧೆ ಹಾಗೂ ಭಾಷಾಂತರ ಸರ್ಟಿಫಿಕೇಟ್ ಕೋರ್ಸ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಭಾಷೆಯ ಸಾಹಿತ್ಯ ಇಲ್ಲವೆ ಪಠ್ಯವನ್ನು ಮತ್ತೊಂದು ಭಾಷೆಗೆ ಅನುವಾದಿಸುವುದು ಅಷ್ಟು ಸುಲಭವಲ್ಲ. ಭಾರತದ ಜಾತಿವಾರು ದೇಶದಲ್ಲಿ ಪ್ರತಿಯೊಂದು ಜಾತಿ ಸಮುದಾಯದ ನುಡಿಗಟ್ಟು, ಆಚಾರ ವಿಚಾರಗಳಿಗೂ ಮತ್ತೊಂದು ಜಾತಿಯ ಆಚಾರ ವಿಚಾರಗಳಿಗೂ ವಿಭಿನ್ನತೆ ಇದೆ. ಹೀಗಿರುವಾಗ ಪ್ರತಿ ಜಾತಿ ಸಮುದಾಯದ ಸಾಹಿತ್ಯವನ್ನು ಬೇರೆ, ಬೇರೆ ಭಾಷೆಗಳಿಗೆ ಅನುವಾದಿಸುವುದು ಕಷ್ಟವೆ. ಇಂತಹ ಸಮಯದಲ್ಲಿ ಸಾಹಿತ್ಯದಲ್ಲಿರುವ ಭಾವಾರ್ಥಗಳನ್ನು ಗ್ರಹಿಸುವ ಮೂಲಕ ಮತ್ತೊಂದು ಭಾಷೆಗೆ ಅನುವಾದವನ್ನು ಯಶಸ್ವಿಯಾಗಿ ಮಾಡಬಹುದು ಎಂದು ಅವರು ಹೇಳಿದರು.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಕನ್ನಡ ಚಿಂತನೆಗಳು ಇಂಗ್ಲಿಷ್‌ ಮಯವಾಗಿದೆ. ಪರಂಪರೆಯಾಗಿ ಬಂದಿರುವ ಕನ್ನಡ ಪದಗಳ ಜಾಗದಲ್ಲಿ ಇಂಗ್ಲಿಷ್‌ನಿಂದ ಅನುವಾದಗೊಂಡ ಕನ್ನಡ ಪದಗಳನ್ನು ಬಳಸಲಾಗುತ್ತಿದೆ. ಚರಿತ್ರೆ ಪದದ ಜಾಗದಲ್ಲಿ ಇತಿಹಾಸ ಬಂದು ಕುಳಿತಿದೆ. ಹೀಗೆ ಹುಡುಕುತ್ತಾ ಹೋದರೆ ಕನ್ನಡದ ಮೂಲ ಪದಗಳು ನಶಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಮ್ಮ ನೆಲದ ಭಾಷೆಗಳಲ್ಲಿ ಧರ್ಮ ಎಂಬ ಪದಕ್ಕೆ ನಿಜವಾದ ಅರ್ಥವೆ ಇಲ್ಲ. ಇಲ್ಲಿ ಧರ್ಮಗಳಿರಲಿಲ್ಲ. ನೂರಾರು ಪಂಥಗಳು ಆಚರಣೆಯಲ್ಲಿ ಇದ್ದವು. ಇವತ್ತು ಧರ್ಮ ಬೇರೆ, ಬೇರೆ ರೀತಿಯ ವ್ಯಾಖ್ಯಾನಕ್ಕೆ ಒಳಪಡುತ್ತಿದೆ. ಇವೆಲ್ಲವುಗಳು ಅನುವಾದಕನಿಗೆ ಸವಾಲುಗಳೆ. ಇಂತಹ ಬಿಕ್ಕಟ್ಟುಗಳನ್ನು ಎದುರಿಸುವ ಕುರಿತು, ಅನುವಾದ ಕುರಿತು ಚರ್ಚೆ ಸಂವಾದಗಳನ್ನು ಆಯೋಜಿಸುವುದು ಅಗತ್ಯವಿದೆ ಎಂದು ಅವರು ಹೇಳಿದರು.

ಭಾರತದ ಪರಂಪರೆಯಲ್ಲಿ ಏಕಮುಖಿಯಾದ ಅನುವಾದ ಕ್ರಮವಿಲ್ಲ. ಭಿನ್ನವಾದ ಅನುವಾದಗಳನ್ನು ನಮ್ಮ ಚರಿತ್ರೆಯುದ್ದಕ್ಕೂ ನೋಡಬಹುದು. ರಾಮಾಯಣ ಹಾಗೂ ಮಹಾಭಾರತ ಮಹಾಗ್ರಂಥಗಳನ್ನು ಆಧರಿಸಿ ಸಾವಿರಾರು ಬಗೆಯಲ್ಲಿ ಅನುವಾದಗಳಾಗಿವೆ. ಇವು ಕೇವಲ ರಾಜಕೀಯ ನೆಲೆಗಟ್ಟಿನಲ್ಲಿ ಮಾತ್ರ ಅನುವಾದವಾಗದೆ, ಭಕ್ತಿ, ಧಾರ್ಮಿಕತೆ, ಸಂಸ್ಕೃತಿ, ಪರಿಸರ ಸೇರಿದಂತೆ ಹಲವಾರು ಆಯಾಮಗಳಲ್ಲಿ ಅನುವಾದಗೊಂಡಿರುವುದನ್ನು ನೋಡಬಹುದಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಬಹುಭಾಷಾ ವೇದಿಕೆಯ ಸಂಚಾಲಕಿ ಶೋಭಾ, ಮಹಾರಾಣಿ ಕಾಲೇಜಿನ ಪ್ರಾಂಶುಪಾಲ ಲಕ್ಕಪ್ಪಗೌಡ ಮತ್ತಿತರರಿದ್ದರು. 

ನಮ್ಮ ಚರಿತ್ರೆಯಲ್ಲಿ ಪ್ರಗತಿ ಎಂದರೆ ಎಲ್ಲ ಸಮನಾಗಿ ಬಾಳಿ ಬದುಕುವುದು. ಆದರೆ, ಇವತ್ತಿನ ಜಾಗತೀಕರಣದ ಯುಗದಲ್ಲಿ ಪ್ರಗತಿಯ ಪದ ಕೇವಲ ಕಾರ್ಪೊರೇಟ್ ವಲಯದ ಅಭಿವೃದ್ಧಿಗೆ ಸೀಮಿತವಾಗಿದೆ. ಹೀಗಾಗಿ ಪದಗಳ ಹಿಂದಿರುವ ರಾಜಕೀಯವನ್ನು ಅನುವಾದಕರಿಗೆ ಸರಿಯಾದ ರೀತಿಯಲ್ಲಿ ತಿಳಿವಳಿಕೆ ನೀಡುವ ಅಗತ್ಯವಿದೆ.

-ಎಚ್.ಎಸ್.ಶಿವಪ್ರಕಾಶ್ ಹಿರಿಯ ನಾಟಕಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News