ಬಿಬಿಎಂಪಿ ಬಜೆಟ್ ಅನುಮೋದನೆ ಕಷ್ಟ ?

Update: 2019-03-02 16:54 GMT

ಬೆಂಗಳೂರು, ಮಾ.2: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಭಾರಿ ಗಾತ್ರದ ಬಜೆಟ್ ಮಂಡಿಸಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತಕ್ಕೆ ಅಡಳಿತರೂಢ ರಾಜ್ಯ ಮೈತ್ರಿ ಸರಕಾರದಿಂದಲೇ ಮುಖಭಂಗವುಂಟಾಗಲಿದೆ.

ಮೊದಲ ಬಾರಿಗೆ ಫೆ.18 ರಂದು 10,691 ಕೋಟಿ ಬಜೆಟ್ ಮಂಡನೆ ಮಾಡಿ ದಾಖಲೆ ಬಜೆಟ್ ಮಂಡಿಸಲಾಗಿದೆ ಎಂದು ಮೇಯರ್ ಸೇರಿದಂತೆ ಮೈತ್ರಿ ನಾಯಕರು ಹೇಳಿದ್ದರು. ಅಲ್ಲದೆ, ಅನುದಾನದ ತಾರತಮ್ಯ ಸೇರಿದಂತೆ ಮತ್ತಿತರೆ ಗಲಾಟೆಯಿಂದಾಗಿ ಬಜೆಟ್ ಗಾತ್ರವನ್ನು 12,957 ಕೋಟಿ ರೂ.ಗೆ ಹೆಚ್ಚಿಸಿಕೊಂಡು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದಿತ್ತು. ಇದು ವಾಸ್ತವಿಕ ಲೆಕ್ಕಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನ ಬಜೆಟ್ ಶೇ.148 ರಷ್ಟು ಅಧಿಕವಾಗಿದ್ದು, ಅನುಷ್ಠಾನಗೊಳಿಸಲು ಅಸಾಧ್ಯವಾಗಿದೆ. ಆದರೆ, 9 ಸಾವಿರ ಕೋಟಿ ರೂ.ಗಳ ಆಯವ್ಯಯ ಮಂಡಿಸಲು ಅವಕಾಶವಿದ್ದು, ಈ ಮೊತ್ತಕ್ಕೆ ಅನುಮೋದನೆ ನೀಡಬೇಕೆಂದು ಆಯುಕ್ತರು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ಬಜೆಟ್ ಸಂಬಂಧಿಸಿ ಆಯುಕ್ತ ಮಂಜುನಾಥ್ ಪ್ರಸಾದ್ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, 12,957 ಕೋಟಿ ರೂ. ಬಜೆಟ್ ಅನುಷ್ಠಾನಗೊಳಿಸಲು ಅಸಾಧ್ಯವಾಗಿದೆ. ಆದಾಯ ಸಂಗ್ರಹ ಗುರಿಯಾಗಿಸಿಕೊಂಡು 9 ಸಾವಿರ ಕೋಟಿ ರೂ. ಆಯವ್ಯಯಕ್ಕೆ ಅನುಮೋದನೆ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೈತ್ರಿಕೂಟದಲ್ಲೇ ಅಸಮಾಧಾನ: 2019-20 ನೆ ಸಾಲಿನ ಬಜೆಟ್‌ನಲ್ಲಿ ಮೇಯರ್ ಪ್ರತಿನಿಧಿಸುವ ಕ್ಷೇತ್ರ ಹಾಗೂ ಮಹಾಲಕ್ಷ್ಮೀ ಲೇಔಟ್, ಜಯನಗರ, ಬಿಟಿಎಂ ಲೇಔಟ್, ರಾಜರಾಜೇಶ್ವರಿ ನಗರ ಸೇರಿದಂತೆ 8 ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಶಾಂತಿನಗರ, ಶಿವಾಜಿನಗರ, ಗಾಂಧಿನಗರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಪ್ರಸ್ತುತ ಆಯುಕ್ತರ ಪತ್ರದಿಂದಾಗಿ ಹೆಚ್ಚಿನ ಅನುದಾನ ಕಡಿತವಾಗುವ ಸಾಧ್ಯತೆ ಇದೆ.

ಮುಜುಗರಕ್ಕೀಡಾದ ಮೈತ್ರಿಕೂಟ ಬಜೆಟ್: ಬಜೆಟ್ ಮೇಲಿನ ಚರ್ಚೆ ವೇಳೆ ಮೈತ್ರಿಕೂಟ ಇನ್ನು 2289 ಕೋಟಿ ರೂ ಹೆಚ್ಚುವರಿ ಬಜೆಟ್ ಮಂಡಿಸಿ ರಾಜ್ಯ ಸರಕಾರದ ಅನುಮೋದನೆಗೆ ಕಳುಹಿಸಿತ್ತು. ವಾಸ್ತವಿಕ, ಆರ್ಥಿಕ ಚಿತ್ರಣ ಅವಲೋಕಿಸಿ ಅನುಮೋದನೆ ನೀಡಲು ಆಯುಕ್ತರು ಪತ್ರ ಬರೆದಿರುವುದು ಮೈತ್ರಿಕೂಟಕ್ಕೆ ಮುಜುಗರ ಉಂಟಾಗಿದೆ.

ಯೋಜನೆಗಳಿಗೆ ಕತ್ತರಿ ಬೀಳುವ ಸಾಧ್ಯತೆ: ಪಾಲಿಕೆಯ 2019-20ರ ಬಜೆಟ್‌ನಲ್ಲಿ ಹಲವಾರು ಯೋಜನೆ ಸೇರಿದಂತೆ ಕೆಲ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿತ್ತು ಎಂಬ ಆರೋಪಗಳಿದ್ದು, ಒಂದು ವೇಳೆ ಸರಕಾರ 9 ಸಾವಿರ ಕೋಟಿ ರೂ. ಗೆ ಅನುಮೋದನೆ ನೀಡಿದರೆ ಹೆಚ್ಚುವರಿ 4 ಸಾವಿರ ಕೋಟಿ ರೂ. ಯೋಜನೆಗಳಿಗೆ ಕ್ತರಿ ಬೀಳಲಿವೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News