ಗೇಲ್ ಮತ್ತೆ ಅಬ್ಬರದ ಬ್ಯಾಟಿಂಗ್: ಏಕದಿನ ಸರಣಿ ಸಮಬಲಗೊಳಿಸಿದ ವಿಂಡೀಸ್

Update: 2019-03-03 07:03 GMT
ಕ್ರಿಸ್ ಗೇಲ್, ಒಶಾನೆ ಥಾಮಸ್

ಸೈಂಟ್‌ಲೂಸಿಯಾ, ಮಾ.3: ಕ್ರಿಸ್ ಗೇಲ್ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ವೆಸ್ ್ಟಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದ 5ನೇ ಹಾಗೂ ಕೊನೆಯ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದರೊಂದಿಗೆ ಸರಣಿಯನ್ನು 2-2ರಿಂದ ಸಮಬಲಗೊಳಿಸಿದೆ.

 ಬಹುಶಃ ತವರಿನಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡುತ್ತಿರುವ 39ರ ಹರೆಯದ ಗೇಲ್ ಕೇವಲ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿದರು.

   ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ವಿಂಡೀಸ್‌ನ ವೇಗದ ಬೌಲರ್ ಒಶಾನೆ ಥಾಮಸ್ (5-21) ದಾಳಿಗೆ ಸಿಲುಕಿ 28.1 ಓವರ್‌ಗಳಲ್ಲಿ ಕೇವಲ 113 ರನ್‌ಗೆ ಆಲೌಟಾಯಿತು. ಪ್ರವಾಸಿ ಇಂಗ್ಲೆಂಡ್ ತಂಡ ಮೂರು ದಿನಗಳ ಹಿಂದೆ ವಿಂಡೀಸ್ ವಿರುದ್ಧ 4ನೇ ಏಕದಿನದಲ್ಲಿ 418 ರನ್ ಗಳಿಸಿತ್ತು. ಆದರೆ, ಸರಣಿ ನಿರ್ಣಾಯಕ ಪಂದ್ಯದಲ್ಲಿ ಕೊನೆಯ 5 ವಿಕೆಟ್‌ಗಳನ್ನು ಕೇವಲ 2 ರನ್ ಸೇರಿಸುವಷ್ಟರಲ್ಲಿ ಕಳೆದುಕೊಂಡಿತು. ಹೇಲ್ಸ್ ಹಾಗೂ ಬಟ್ಲರ್ ತಲಾ 23 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

ಗೆಲ್ಲಲು ಸುಲಭ ಸವಾಲು ಪಡೆದ ವಿಂಡೀಸ್ 12.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 115 ರನ್ ಕಲೆ ಹಾಕಿತು. ಸರಣಿಯಲ್ಲಿ ಆಡಿದ 4 ಪಂದ್ಯಗಳ ಪೈಕಿ 424 ರನ್ ಗಳಿಸಿದ ಗೇಲ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ ಮೊದಲ ಪಂದ್ಯದಲ್ಲಿ 135 ರನ್ ಹಾಗೂ 4ನೇ ಪಂದ್ಯದಲ್ಲಿ 162 ರನ್ ಗಳಿಸಿದ್ದ ಗೇಲ್ ಸರಣಿಯ 4 ಪಂದ್ಯಗಳಲ್ಲಿ ಒಟ್ಟು 39 ಸಿಕ್ಸರ್‌ಗಳನ್ನು ಸಿಡಿಸಿದ್ದು ದ್ವಿಪಕ್ಷೀಯ ಸರಣಿಯಲ್ಲಿ ಇದೊಂದು ದಾಖಲೆಯಾಗಿದೆ.

ಇಂಗ್ಲೆಂಡ್ ಈ ಪಂದ್ಯವನ್ನು ಜಯಿಸಿದ್ದರೆ, ಸತತ 10 ಏಕದಿನ ಸರಣಿ ಜಯಿಸಿದ್ದ ಆಸೀಸ್ ದಾಖಲೆಯನ್ನು ಸರಿಗಟ್ಟಬಹುದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News