ನೀನೂ ಕೂಡ...!

Update: 2019-03-03 07:35 GMT

ಬಶೀರ್ ಬಿ.ಎಂ.

ಮೈದಾನದಲ್ಲಿ ಕ್ರಿಕೆಟ್ ಆಟ ಮುಗಿಸಿ, ಗೆಳೆಯ ಕಬೀರನಿಗೆ ‘ಬೈ’ ಹೇಳಿದ ಮೃತ್ಯುಂಜಯ ಪಕ್ಕದ ಬಾವಿಕಟ್ಟೆಯಲ್ಲಿ ಕೈಕಾಲು ತೊಳೆದು ತನ್ನ ಬೈಕ್ ಏರಿದ. ತಾಯಿ ಅದೇನೋ ಒಂದಿಷ್ಟು ದಿನಸಿ ತರಲು ಹೇಳಿದ್ದು ನೆನಪಾಯಿತು. ನೇರ ಅಲ್ಲಿಂದ ಪೇಟೆಗೆ ತೆರಳಿದ. ಪೇಟೆ ಯಾಕೋ ಎಂದಿನಂತಿಲ್ಲ. ಅಂಗಡಿಗಳೆಲ್ಲ ಮುಚ್ಚಿತ್ತು. ಓಣಿಗಳೆಲ್ಲ ಅಪರಿಚಿತ ಅನ್ನಿಸ ತೊಡಗಿತು ಮೃತ್ಯುಂಜಯನಿಗೆ. ಅಮ್ಮ ಹೇಳಿದ್ದು ನೆನಪಾಯಿತು ‘‘ಮನೆಗೆ ಬೇಗ ಬಾ ಮಗ...ಊರು ಸರಿಯಿಲ್ಲ, ಮನುಷ್ಯ ತಾನು ಮನುಷ್ಯ ಅನ್ನೋದನ್ನೇ ಮರೆತು ಬಿಟ್ಟಿದ್ದಾನೆ...’’

‘‘ನನಗೆ ಯಾರ ಜೊತೆಗೂ ಜಗಳ ಇಲ್ಲ ಅಮ್ಮ. ಎಲ್ಲರೂ ನನ್ನ ಗೆಳೆಯರೇ....ಪರಿಚಿತರೇ...ಸುಮ್ಮನೆ ಯಾರಾದರೂ ನನ್ನ ಮೇಲೆ ಬಂದು ಬೀಳುತ್ತಾರೆಯೇ?’’ ತಾಯಿಗೆ ಬುದ್ಧಿವಾದ ಹೇಳಿದ್ದ.

‘‘ಹಾಗಲ್ಲ ಮಗ, ಮೊನ್ನೆ ಪಕ್ಕದ ಬೀದಿಯಲ್ಲಿ ಅಬ್ಬು ಕಾಕನ ಮಗ ಅದ್ದುವನ್ನು ಅವರೆಲ್ಲ ಸೇರಿ ಕೊಂದರಲ್ಲ, ಅವನೇನು ಮಾಡಿದ್ದ? ಒಳ್ಳೆಯ ಹುಡುಗ, ನಮ್ಮ ಸಹಾಯಕ್ಕೆ ಆಗಾಗ ಸಿಗುತ್ತಿದ್ದ ಹುಡುಗ. .. ಅದಕ್ಕೆ ಹೇಳಿದೆ... ’’

ಮೃತ್ಯುಂಜಯನಿಗೂ ಹೌದು ಅನ್ನಿಸಿತ್ತು. ಅದ್ದು ತುಂಬಾ ಒಳ್ಳೆಯ ಹುಡುಗ. ಗೆಳೆಯ ಕಬೀರನ ಮಾವನ ಮಗನಂತೆ. ಪೇಟೆಯ ರಸ್ತೆಗಳ ಇಕ್ಕೆಲವನ್ನು ಕತ್ತಲು ನಿಧಾನಕ್ಕೆ ನುಂಗತೊಡಗಿತ್ತು. ಯಾಕೋ ‘ಬೇಗ ಮನೆ ಸೇರಬೇಕು’ ಅನ್ನಿಸಿತು ಮೃತ್ಯುಂಜಯನಿಗೆ. ಎಲ್ಲ ಅಂಗಡಿಗಳೂ ಎಂದಿಗಿಂತ ಬೇಗ ಮುಚ್ಚಿವೆ. ಇದು ಪೇಟೆಯೊಳಗೆ ಏನೋ ನಡೆದಿದೆ, ನಡೆಯಲಿದೆ ಎನ್ನುವುದರ ಸೂಚನೆ ಎಂದು ಅನ್ನಿಸಿತು ಅವನಿಗೆ. ತನ್ನ ಮುಂದೆ ಕಪ್ಪು ಹಾವಿನಂತೆ ಬಿದ್ದಿರುವ ರಸ್ತೆ. ದೂರದಲ್ಲಿ ಯಾರದೋ ನೆರಳು ಚಲಿಸಿದಂತೆ. ಯಾಕೋ ಎದೆ ಢವಢವಿಸಿತು. ಜೊತೆಗೆ ಕಬೀರನನ್ನು ಕರೆದು ಕೊಳ್ಳಬೇಕಾಗಿತ್ತು, ಹೀಗೆ ಒಬ್ಬನೇ ಬರಬಾರದಿತ್ತು ಅಂದುಕೊಂಡ. ನೇರ ಮನೆಯ ಕಡೆಗೆ ಬೈಕ್ ಓಡಿಸಿದ.

ಅರ್ಧ ಕಿಲೋಮೀಟರ್ ಹೋಗಿರಬಹುದು. ದೂರದಲ್ಲೊಂದು ರಿಕ್ಷಾ ಕಾಣಿಸಿತು ಮೃತ್ಯುಂಜಯನಿಗೆ. ಯಾರೋ ಸಹಾಯಕ್ಕೆ ಕಾಯುತ್ತಿರುವ ಹಾಗೆ. ಯಾರೋ ಕೈ ಬೀಸುತ್ತಿದ್ದ ಹಾಗೆ. ಸೀದಾ ರಿಕ್ಷಾದ ಬಳಿ ಸಾಗಿದ. ವ್ಯಕ್ತಿಯ ಮುಖ ಕಾಣುತ್ತಿಲ್ಲ. ಕೈ ಬೀಸುತ್ತಿದ್ದಾನೆ ಅಷ್ಟೇ. ಬೈಕ್ ನಿಲ್ಲಿಸಿ, ಮೃತ್ಯುಂಜಯ ಕೆಳಗಿಳಿದ.

ಅಷ್ಟೇ...ಎಲ್ಲಿ ಬಚ್ಚಿಟ್ಟುಕೊಂಡಿದ್ದರೋ...ಮುಖ ಮುಚ್ಚಿದ ಐವರು ಮೃತ್ಯುಂಜಯನನ್ನು ಸುತ್ತುವರಿದರು.

ಓಹ್! ಅವನೊಳಗಿನ ಶಂಕೆ ಇದೀಗ ಧುತ್ತೆಂದು ಮೈತಳೆದು ನಿಂತಿತ್ತು. ಅವರ ಕೈಯಲ್ಲಿ ಹೊಳೆಯುತ್ತಿರುವ ತಲವಾರುಗಳು! ಅವನೊಳಗಿನ ಕರುಳನ್ನು ಒಮ್ಮೆಲೆ ಯಾರೋ ಎಳೆದು ಮೀಟಿದಂತಾಯಿತು.

‘‘ಯಾರು ನೀವು ? ಏನು ಬೇಕು ನಿಮಗೆ? ಯಾಕೆ ಹೀಗೆ ನಿಂತಿದ್ದೀರಿ...?’’ ಅವನು ಕೇಳಿದ.

ಅಷ್ಟರಲ್ಲಿ ಮಿಂಚಿನ ಬಳ್ಳಿಯೊಂದು ತನ್ನ ಬೆನ್ನನ್ನು ಸವರಿ ಹೋದಂತೆ....ಕತ್ತಿಯ ಅಲಗು ಸವರಿ ಹೋಯಿತು.‘ಆಹ್...’ ಎಂದ ಮೃತ್ಯುಂಜಯ ಬೈಕಿನತ್ತ ಧಾವಿಸಿದ. ಅವರು ತಡೆದರು. ಆಳೆತ್ತರ ಜೀವ ಮೃತ್ಯುಂಜಯನದು. ಬದುಕುವುದಕ್ಕಾಗಿ ಹೋರಾಡಲೇ ಬೇಕು. ಸರ್ವ ಪ್ರಯತ್ನ ಮಾಡತೊಡಗಿದ. ಅಪರಿಚಿತನೊಬ್ಬನ ಹೊಟ್ಟೆಗೆ ಒದ್ದ. ಅವನು ಅಷ್ಟು ದೂರ ಬಿದ್ದ. ಮೂವರು ಒಮ್ಮೆಲೆ ಮೃತ್ಯುಂಜಯನ ಮೇಲೆ ಮುಗಿ ಬಿದ್ದರು.

ಈ ಎಳೆದಾಟದ ಸಂದರ್ಭದಲ್ಲೇ ಒಬ್ಬ ಆಗಂತುಕನ ಮುಖದ ಬಟ್ಟೆ ಸರಿದು ಹೋಯಿತು....‘‘ಓಹ್...ಕಬೀರ್...ನೀನು ಕೂಡ....?’’ ಮೃತ್ಯುಂಜಯ ಉದ್ಗರಿಸಿದ.

ಆ ಉದ್ಗಾರಕ್ಕೆ ಕಬೀರ್ ನಿಂತಲ್ಲೇ ಕಂಪಿಸಿದ. ಅಷ್ಟರಲ್ಲೇ ಮತ್ತೊಬ್ಬ ಮೃತ್ಯುಂಜಯನ ಮೇಲೆ ಎರಗಿದ್ದ. ಮೃತ್ಯುಂಜಯನೋ ಕಬೀರನ ಕಡೆಗೆ ಧಾವಿಸುತ್ತಿದ್ದ. ಕಬೀರನೋ ಅಸಹಾಯಕನಾಗಿ ಮೃತ್ಯುಂಜಯನನ್ನು ನೋಡುತ್ತಾ...‘‘ಅದ್ದು...ನನ್ನ ಮಾನವ ಮಗ ಅದ್ದು...’’ ಎಂದು ಹೇಳಲು ಪ್ರಯತ್ನಿಸುತ್ತಿದ್ದ. ಈ ಗೊಂದಲಗಳ ನಡುವೆಯೇ ಮೃತ್ಯುಂಜಯನಿಗೆಂದು ಬೀಸಿದ ಕತ್ತಿಯೊಂದು ಕಬೀರನ ಕೊರಳನ್ನು ಸವರಿ ಹೋಯಿತು.

ಅಪರಿಚಿತರಿಬ್ಬರು ಒಟ್ಟಿಗೇ ಉದ್ಗರಿಸಿದರು ‘‘ಛೇ...ತಪ್ಪಾಯಿತು....’’

ಕಬೀರ್ ಕುಸಿದು ಬೀಳುತ್ತಿರುವುದನ್ನು ಮೃತ್ಯುಂಜಯ ನೋಡುತ್ತಿದ್ದ. ಅಷ್ಟರಲ್ಲೇ ಯಾರೋ ಹಿಂಬದಿಯಿಂದ ಮೃತ್ಯುಂಜಯನಿಗೆ ಚುಚ್ಚಿದಂತಾಯಿತು. ಅಪರಿಚಿತರು ಅದೇನೋ ವದರಾಡುತ್ತಿದ್ದರು ‘‘ಓಡು ಓಡು...ಯಾರೋ ದೂರದಲ್ಲಿ ಬರುತ್ತಿದ್ದಾರೆ....’’

‘‘ಕಬೀರ್‌ನನ್ನು ಏನು ಮಾಡುವುದು?’’

‘‘ಅವನೂ ಸತ್ತಿದ್ದಾನೆ...ಮೊದಲು ಈ ಜಾಗದಿಂದ ಓಡುವ....’’

ಮೃತ್ಯುಂಜಯ ನೆಲಕ್ಕೊರಗುವಾಗಲೂ ಕಬೀರನನ್ನು ನೋಡುತ್ತಿದ್ದ. ಇಂದು ಸಂಜೆ ಮೈದಾನದಲ್ಲಿ ಜೊತೆ ಜೊತೆಯಾಗಿ ಕ್ರಿಕೆಟ್ ಆಡಿದೆವು. ಜೊತೆಯಾಗಿ ನಮ್ಮ ತಂಡಕ್ಕೆ ರನ್ ಸಂಗ್ರಹಿಸಿದೆವು. ಆ ಸಂದರ್ಭದಲ್ಲಿ ಆತನ ಕಣ್ಣುಗಳಲ್ಲಿ ಈ ಕುರಿತ ಒಂದು ಕುರುಹೂ ಇರಲಿಲ್ಲವಲ್ಲ? ಕಬೀರ್ ತಣ್ಣಗೆ ಬಿದ್ದುಕೊಂಡಿದ್ದಾನೆ. ಅವನ ಕಣ್ಣುಗಳು ತೆರೆದೇ ಇತ್ತು. ಮೃತ್ಯುಂಜಯ ಜೋರಾಗಿ ಚೀರುವುದಕ್ಕೆ ಪ್ರಯತ್ನಿಸಿದ. ಇಲ್ಲ...ಧ್ವನಿ ಹೊರಡುತ್ತಿಲ್ಲ....ಇಡೀ ಕತ್ತಲು ಒಟ್ಟಾಗಿ ತನ್ನ ಮೈಮೇಲೆ ಮುಗ್ಗರಿಸಿ ಬಿದ್ದಂತಾಯಿತು ಮೃತ್ಯುಂಜಯನಿಗೆ.

***

ಮೃತ್ಯುಂಜಯ ಕಣ್ಣು ತೆರೆದ. ತನ್ನ ಸುತ್ತ ಜನ ಸೇರಿದ್ದಾರೆ. ಗೆಳೆಯರು, ಬಂಧುಗಳು.

ತಾನು ಆಸ್ಪತ್ರೆಯಲ್ಲಿದ್ದೇನೆ ಎನ್ನುವುದು ಅವನಿಗೆ ಅರಿವಾಯಿತು.

‘ಓಹ್...ನಾನಿನ್ನೂ ಬದುಕಿದ್ದೇನೆ....’ ಸುತ್ತಲಿರುವವರಲ್ಲಿ ಯಾರು ತನ್ನವರು? ಮೃತ್ಯುಂಜಯನಿಗೆ ಗೊಂದಲವಾಯಿತು.

ಅಮ್ಮ ತಲೆ ಪಕ್ಕದಲ್ಲೇ ಕುಕ್ಕರಿಸಿದ್ದಾಳೆ. ಅತ್ತು ಅತ್ತು ಅವಳ ಮುಖ ಜರ್ಝರಿತವಾಗಿದೆ. ಅಷ್ಟರಲ್ಲೇ ಅವನ ಕಣ್ಣ ಮುಂದೆ ಕುಸಿದು ಬೀಳುತ್ತಿರುವ ಕಬೀರನ ಮುಖ ತೇಲಿತು.

‘ಕಬೀರ್....’ ಅವನ ಬಾಯಿಯಿಂದ ಅವನಿಗರಿವಿಲ್ಲದೆ ಉದ್ಗಾರ ಹೊರಟಿತು.

ಅಷ್ಟರಲ್ಲೇ ಯಾರೋ ಅವನಿಗೆ ಹಿಂದಿನ ದಿನದ ದಿನಪತ್ರಿಕೆ ತಂದು ಕೊಟ್ಟರು. ಮೃತ್ಯುಂಜಯ ಅದರ ತಲೆಬರಹದ ಮೇಲೆ ಕಣ್ಣಾಯಿಸಿದ. ‘‘ಹಿಂದೂ ಗೆಳೆಯನಿಗಾಗಿ ಪ್ರಾಣ ತೆತ್ತ ಮುಸ್ಲಿಮ್ ಗೆಳೆಯ!’’

ಮೃತ್ಯುಂಜಯನಿಗೆ ಅರ್ಥವಾಗಲಿಲ್ಲ. ಇದೇನಿದು ಹಿಂದೂ ಗೆಳೆಯ! ಮುಸ್ಲಿಮ್ ಗೆಳೆಯ!

ಸುದ್ದಿಯ ಮೇಲೆ ಕಣ್ಣಾಡಿಸಿದ ‘‘ಹಿಂದೂ ಗೆಳೆಯನ ಮೇಲೆ ದಾಳಿ ನಡೆಸಿದ ಮತಾಂಧರ ಎದುರಿಸಿ, ಗೆಳೆಯನ ಪ್ರಾಣಕ್ಕಾಗಿ ತನ್ನ ಪ್ರಾಣ ಅರ್ಪಿಸಿದ ಮುಸ್ಲಿಮ್ ತರುಣ’’

‘‘ಕೋಮುದ್ವೇಷದ ನಡುವೆಯೂ ಒಂದು ಆಶಾಕಿರಣ...ಕಬೀರ್...’’

‘ಮೃತ್ಯುಂಜಯನ ಮೇಲೆ ದುಷ್ಕರ್ಮಿಗಳು ಎರಗಿದಾಗ ಅಲ್ಲೇ ಹತ್ತಿರದಲ್ಲಿ ಕಬೀರ್ ಗೆಳೆಯನ ನೆರವಿಗೆ ಧಾವಿಸಿದ. ಗೆಳೆಯನನ್ನು ಇರಿಯಲು ಹೊರಟ ಕತ್ತಿಗೆ ತಾನು ಎದೆಯೊಡ್ಡಿದ....’ ತುಂಬಾ ರೋಚಕವಾಗಿ ಪತ್ರಿಕೆಗಳಲ್ಲಿ ಬರೆಯಲಾಗಿತ್ತು.

‘‘ನಿಮ್ಮ ಗೆಳೆಯ ಕಬೀರ್‌ನ ಬಗ್ಗೆ ಏನು ಹೇಳಲು ಬಯಸುತ್ತೀರಿ?’’ ಯಾರೋ ತಲೆಪಕ್ಕದಲ್ಲಿ ನಿಂತವನೊಬ್ಬ ಕೇಳಿದಂತಾಯಿತು. ಪತ್ರಕರ್ತನಿರಬೇಕು.

ಮೃತ್ಯುಂಜಯನ ಕಣ್ಣಿನಿಂದ ನೀರು ಹನಿಯಿತು. ‘‘ಯಾರಿಗಾಗಿ, ಯಾಕಾಗಿ ಈ ಕಣ್ಣೀರು...?’’ ಮೃತ್ಯುಂಜಯನ ಬಳಿ ಉತ್ತರವಿರಲಿಲ್ಲ.

‘ತನಗಾಗಿ ಪ್ರಾಣಕೊಟ್ಟ ಗೆಳೆಯನಿಗೆ ಕಣ್ಣೀರಿನ ಭಾಷ್ಪಾಂಜಲಿ’ ಮರುದಿನ ಪತ್ರಿಕೆಗಳಲ್ಲಿ ತಲೆಬರಹ ಪ್ರಕಟವಾಯಿತು.

***

‘‘ದಾರಿ ಬಿಡಿ ದಾರಿ ಬಿಡಿ. ಗಾಯಾಳುವಿನಿಂದ ಸ್ಟೇಟ್ಮೆಂಟ್ ತೆಗೆದುಕೊಳ್ಳಬೇಕು...ಎಲ್ಲರೂ ಹೊರಗೆ ಹೋಗಿ...’’ ಪೊಲೀಸ್ ಇನ್‌ಸ್ಪ್ಪೆಕ್ಟರ್ ಕೊಠಡಿಗೆ ಪ್ರವೇಶಿಸಿದರು. ಜೊತೆಗೊಬ್ಬ ಪೊಲೀಸ್ ಪೇದೆ ಕೂಡ. ಎಲ್ಲರೂ ಹೊರ ಹೋದರು. ಪೊಲೀಸ್ ಅಧಿಕಾರಿ, ಪೇದೆ ಮತ್ತು ಹಾಸಿಗೆಯ ಮೇಲೆ ಮಲಗಿರುವ ಮೃತ್ಯುಂಜಯ ಮಾತ್ರ.

‘‘ಹೇಳಿ. ಅವತ್ತು ರಾತ್ರಿ ನಿಜಕ್ಕೂ ಏನು ನಡೆಯಿತು. ನಿಮ್ಮ ಮೇಲೆ ಯಾರೆಲ್ಲ ಹಲ್ಲೆ ನಡೆಸಿದರು. ಯಾರದ್ದಾದರೂ ಪರಿಚಯ ಇದೆಯಾ?’’

ಮೃತ್ಯುಂಜಯ ಮೌನವಾಗಿದ್ದ. ಏನು ಹೇಳಬೇಕು?

‘‘ಆರೋಪಿಗಳನ್ನು ಹುಡುಕಬೇಕಾದರೆ ನೀವು ಬಾಯಿ ತೆರೆಯಲೇ ಬೇಕು...ಹೇಳಿ...ದುಷ್ಕರ್ಮಿಗಳಲ್ಲಿ ಯಾರೆಲ್ಲ ಇದ್ದರು...ಅವರ ಗುರುತು ಇದೆಯಾ?’’

‘‘ಯಾರ ಗುರುತೂ ಇಲ್ಲ...ಅವರು ಯಾಕೆ ನನ್ನ ಮೇಲೆ ದಾಳಿ ನಡೆಸಿದ್ದಾರೆ ಎನ್ನುವುದೂ ಗೊತ್ತಿಲ್ಲ....ಗೊತ್ತಿದ್ದರೆ ಒಂದಿಷ್ಟು ನನಗೆ ಸಮಾಧಾನವಾಗುತ್ತಿತ್ತು....’’ ಮೃತ್ಯುಂಜಯ ಬಾಯಿ ತೆರೆದ.

‘‘ಅವತ್ತು ರಾತ್ರಿ ನಾನು ಒಂಟಿಯಾಗಿ ಬೈಕ್ನಲ್ಲಿ ಮನೆಯ ಕಡೆ ಹೋಗುತ್ತಿದ್ದೆ. ಅರ್ಧ ಕಿಲೋಮೀಟರ್ ಹೋಗಿರಬಹುದು. ಅಷ್ಟರಲ್ಲಿ ಒಂದು ರಿಕ್ಷಾ ಕಾಣಿಸಿತು. ಮುಖ ಮುಚ್ಚಿದ ನಾಲ್ಕೈದು ಜನರು. ಎಲ್ಲರೂ ನನ್ನನ್ನು ಸುತ್ತುವರಿದರು....’’

ಮೃತ್ಯುಂಜಯ ಕ್ಷಣ ಹೊತ್ತು ವೌನವಾದ. ‘‘ನಂತರ ಏನಾಯಿತು?’’ ಪೊಲೀಸ್ ಅಧಿಕಾರಿ ಪ್ರಶ್ನಿಸಿದರು.

‘‘ಅಷ್ಟರಲ್ಲಿ ಅದೆಲ್ಲಿದ್ದನೋ ಗೊತ್ತಿಲ್ಲ...ನನ್ನ ಗೆಳೆಯ ಕಬೀರ್....ಓಡೋಡಿ ಬಂದ. ನನಗೂ ದುಷ್ಕರ್ಮಿಗಳಿಗೂ ಅಡ್ಡವಾಗಿ ನಿಂತ. ಅವರನ್ನು ತಡೆದು, ನನ್ನನ್ನು ಕಾಪಾಡಲು ಯತ್ನಿಸಿದ. ಜೀವದ ಕೊನೆಯವರೆಗೂ ನನಗಾಗಿ ಅವರಲ್ಲಿ ಹೋರಾಡಿದ....ಈ ಸಂದರ್ಭದಲ್ಲಿ ನನಗೂ ಗಾಯಗಳಾದವು. ಅವರು ಕಬೀರ್‌ನ ಕುತ್ತಿಗೆಯನ್ನೇ ಕೊಯ್ದರು...ನಾನೂ ಕೆಳಗೆ ಬಿದ್ದಿದ್ದೆ. ನಾವು ಸತ್ತಿದ್ದೇವೆ ಎಂದು ತಿಳಿದು ಅವರು ಅಲ್ಲಿಂದ ಹೋದರು...’’ ಗೊಗ್ಗರು ಸ್ವರದಲ್ಲಿ ನಡೆದ ಘಟನೆಯನ್ನು ಮೃತ್ಯುಂಜಯ ವಿವರಿಸಿದ.

ಪೊಲೀಸ್ ಅಧಿಕಾರಿ ಮೃತ್ಯುಂಜಯನನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ.

‘‘ನಿಜಕ್ಕೂ ಇದೇ ನಡೆದಿರುವುದಾ?’’ ಪೊಲೀಸ್ ಅಧಿಕಾರಿ ಮತ್ತೆ ಕೇಳಿದ.

ಅಧಿಕಾರಿಯ ಕಣ್ಣಿಗೆ ಕಣ್ಣು ಕೊಡಲು ಮೃತ್ಯುಂಜಯನಿಗೆ ಸಾಧ್ಯವಾಗಲಿಲ್ಲ ‘‘ಹೌದು. ಕಬೀರನಿಂದ ನನ್ನ ಜೀವ ಉಳಿಯಿತು...’’

‘‘ಇನ್ನೊಮ್ಮೆ ಕೇಳುತ್ತಿದ್ದೇನೆ...ನಿಜಕ್ಕೂ ನಡೆದಿರುವುದು ಇಷ್ಟೇಯಾ?’’ ಪೊಲೀಸ್ ಅಧಿಕಾರಿ ಮತ್ತೆ ಕೇಳಿದ.

‘‘ಹೌದು. ಕಬೀರ್ ನನ್ನ ಜೀವ ಉಳಿಸಿದ. ನನಗಾಗಿ ಅವನು ಪ್ರಾಣ ಕೊಟ್ಟ’’ ಮೃತ್ಯುಂಜಯ ಸ್ಪಷ್ಟವಾಗಿ, ಜೋರಾಗಿ ಹೇಳಿದ. ಹಾಗೆ ಹೇಳುವಾಗ ಅವನ ಕಣ್ಣಂಚಲ್ಲಿ ನೀರು ತುಳುಕಿತು. ಮೃತ್ಯುಂಜಯ ತನ್ನ ಹೇಳಿಕೆಯನ್ನು ಬಲವಾಗಿ ನಂಬಿ ಹೇಳಿದ್ದ. ಪೊಲೀಸ್ ಅಧಿಕಾರಿ ಮೃತ್ಯುಂಜಯನ ಕೈಯನ್ನು ಮೆದುವಾಗಿ ಹಿಸುಕಿದ ‘ತನಗೆಲ್ಲ ಗೊತ್ತು’ ಎಂಬಂತೆ.

ಮೃತ್ಯುಂಜಯ ಕಿರು ನಗೆ ನಕ್ಕ. ಇಡೀ ಆಸ್ಪತ್ರೆಯ ವೌನವನ್ನು, ಕತ್ತಲನ್ನು ಬೆಳಗುವ ಶಕ್ತಿ ಇತ್ತು ಕಿರು ನಗೆಗೆ. ಪೊಲೀಸ್ ಅಧಿಕಾರಿಯ ಕಣ್ಣಲ್ಲಿ ಆ ನಗು ಪ್ರತಿಫಲಿಸಿತು.

ಪೊಲೀಸ್ ಅಧಿಕಾರಿ ತನ್ನ ಟೋಪಿಯನ್ನು ತಲೆಗೇರಿಸಿಕೊಂಡ.

Writer - ಬಶೀರ್ ಬಿ.ಎಂ.

contributor

Editor - ಬಶೀರ್ ಬಿ.ಎಂ.

contributor

Similar News