ಅಭಿನಂದನ್‌ ಪಕ್ಕೆಲುಬು, ಬೆನ್ನೆಲುಬಿನಲ್ಲಿ ಗಾಯ ಪತ್ತೆ

Update: 2019-03-03 18:15 GMT

ಹೊಸದಿಲ್ಲಿ, ಮಾ. 3: ಪಾಕಿಸ್ತಾನದ ಸೆರೆಯಲ್ಲಿದ್ದು, ಶುಕ್ರವಾರ ಭಾರತಕ್ಕೆ ಮರಳಿದ ಭಾರತೀಯ ವಾಯು ಪಡೆಯ ಪೈಲೆಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಪಕ್ಕೆಲುಬು ಹಾಗೂ ಕೆಳ ಬೆನ್ನು ಮೂಳೆಯಲ್ಲಿ ಗಾಯಗಳು ಕಂಡು ಬಂದಿವೆ.

ದಿಲ್ಲಿಯ ಸೇನಾ ಸಂಶೋಧನ ಹಾಗೂ ರೆಫರಲ್ ಆಸ್ಪತ್ರೆಯಲ್ಲಿ ನಡೆಸಲಾದ ವೈದ್ಯಕೀಯ ತಪಾಸಣೆಯಿಂದ ಇದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರು ಎಂಆರ್‌ಐ ಸ್ಕಾನ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಅವರ ಬೆನ್ನುಹುರಿ ಹಾಗೂ ಮೆದುಳಿಗೆ ಯಾವುದೇ ಘಾಸಿ ಆಗಿಲ್ಲ ಎಂಬುದು ಕಂಡು ಬಂದಿದೆ ಅವರು ಹೇಳಿದ್ದಾರೆ. ವರ್ಧಮಾನ್ ಅವರಿಗೆ ಗಂಭೀರ ಗಾಯಗಳಾಗಿಲ್ಲ. ಆದರೂ ನಿಗಾದಲ್ಲಿ ಇರಿಸಲು ಹಾಗೂ ಪಕ್ಕೆಲುಬು ಹಾಗೂ ಕೆಳ ಬೆನ್ನು ಮೂಳೆಯಲ್ಲಿ ಆಗಿರುವ ಗಾಯದಲ್ಲಿ ಚೇತರಿಕೆ ಕಾಣಲು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗುವುದು. ಅವರು ಮಂಗಳವಾರ ಬಿಡುಗಡೆ ಯಾಗುವರು ಎಂದು ಅವರು ತಿಳಿಸಿದ್ದಾರೆ.

ಎಂಆರ್‌ಐ ಸ್ಕಾನ್‌ನಲ್ಲಿ ಅಭಿನಂದನ್ ಅವರ ದೇಹದಲ್ಲಿ ಯಾವುದೇ ಚಿಪ್‌ಗಳು ಪತ್ತೆಯಾಗಿಲ್ಲ. ಆದರೆ, ಎರಡು ಗಾಯಗಳು ಕಂಡು ಬಂದಿವೆ. ಒಂದು ಗಾಯ ಬೆನ್ನು ಮೂಳೆಯ ಕೆಳಭಾಗದಲ್ಲಿದೆ. ಇದು ಅವರು ವಿಮಾನದಿಂದ ಕೆಳಗೆ ಜಿಗಿಯುವಾಗ ಆಗಿರಬಹುದು. ಇನ್ನೊಂದು ಪಕ್ಕೆಲುಬಿನಲ್ಲಿದೆ. ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದುರುಳಿಸುವ ಸಂದರ್ಭ ಅಭಿನಂದನ್ ಅವರ ಮಿಗ್ ಪಾಕ್ ಆಕ್ರಮಿತ ಪ್ರದೇಶದೊಳಗೆ ಪತನಗೊಂಡಿತ್ತು. ಅವರು ಪ್ಯಾರಚೂಟ್ ಬಳಸಿ ಕೆಳಗೆ ಜಿಗಿದಿದ್ದರು. ಅನಂತರ ಸ್ಥಳೀಯರ ಕೈಗೆ ಸಿಕ್ಕಿ ಹಲ್ಲೆಗೊಳಗಾಗಿದ್ದರು. ಇದರಿಂದ ಪಕ್ಕೆಲುಬಿನಲ್ಲಿ ಗಾಯಗಳಾಗಿರುವು ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News