ಕಾಶ್ಮೀರದಲ್ಲಿ ಭಾರತೀಯ ಭಯೋತ್ಫಾದನೆ: ಒಐಸಿ ನಿರ್ಣಯಕ್ಕೆ ಭಾರತದ ತಿರಸ್ಕಾರ

Update: 2019-03-03 18:19 GMT

ಅಬುಧಾಬಿ, ಮಾ.3: ಜಮ್ಮು ಮತ್ತು ಕಾಶ್ಮೀರದ ಕುರಿತು ಒಐಸಿಯಲ್ಲಿ ಕೈಗೊಂಡಿರುವ ‘ಭಾರತೀಯ ಭಯೋತ್ಪಾದನೆ’ ಮತ್ತು ‘ಸಾಮೂಹಿಕ ಕುರುಡು’ ವಿಷಯಗಳನ್ನು ಉಲ್ಲೇಖಿಸಿರುವ ನಿರ್ಣಯವನ್ನು ಭಾರತ ತಿರಸ್ಕರಿಸಿದ್ದು, ಈ ವಿಷಯದಲ್ಲಿ ಭಾರತದ ನಿಲುವು ಸುಪರಿಚಿತವಾಗಿದೆ ಎಂದು ವಿದೇಶ ವ್ಯವಹಾರ ಇಲಾಖೆ ತಿಳಿಸಿದೆ.

ಅಬುಧಾಬಿಯಲ್ಲಿ ಶನಿವಾರ ಮುಕ್ತಾಯಗೊಂಡ ‘ದಿ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕಂಟ್ರೀಸ್(ಒಐಸಿ) ಸಮಾವೇಶದಲ್ಲಿ ‘ಭಾರತ -ಪಾಕಿಸ್ತಾನ ಶಾಂತಿ ಪ್ರಕ್ರಿಯೆ’ಯ ಕುರಿತು ಕೈಗೊಂಡಿರುವ ನಿರ್ಣಯದಲ್ಲಿ ಪಾಕಿಸ್ತಾನದ ಪ್ರಯತ್ನಗಳನ್ನು ಶ್ಲಾಘಿಸಲಾಗಿದೆ. ಅಲ್ಲದೆ ವಿಶ್ವದಾದ್ಯಂತದ ಮುಸ್ಲಿಮ್ ಅಲ್ಪಸಂಖ್ಯಾತರ ಕುರಿತ ಹೇಳಿಕೆಯಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಮರು ನಿರ್ಮಿಸುವಂತೆ ಭಾರತೀಯ ಸರಕಾರಕ್ಕೆ ಕರೆ ನೀಡಲಾಗಿದೆ.

ಸಮಾವೇಶ ಮುಕ್ತಾಯಗೊಂಡ ಬಳಿಕ ಹೇಳಿಕೆ ನೀಡಿರುವ ಭಾರತದ ವಿದೇಶ ವ್ಯವಹಾರ ಸಚಿವಾಲಯ, ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂದು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ ಎಂದಿದೆ. ಭಾರತ ಸರಕಾರದ ಬಗ್ಗೆ ಅಧಿಕೃತ ಪತ್ರಿಕಾ ಹೇಳಿಕೆಯಾಗಿರುವ ಅಬುಧಾಬಿ ಘೋಷಣೆಯಲ್ಲಿ ಯಾವುದೇ ನಕಾರಾತ್ಮಕ ಉಲ್ಲೇಖವಿಲ್ಲ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. 57 ರಾಷ್ಟ್ರಗಳ ಒಕ್ಕೂಟದ ಸಮಾವೇಶದಲ್ಲಿ ಕೈಗೊಂಡಿರುವ ಇತರ ನಿರ್ಣಯಗಳು ಒಮ್ಮತದ ನಿರ್ಣಯಗಳಲ್ಲ . ಇವು ದೇಶವೊಂದರ ವೈಯಕ್ತಿಕ ಅಭಿಪ್ರಾಯವಾಗಿದ್ದು ಇದಕ್ಕೆ ಸಭೆಯಲ್ಲಿ ಯಾವುದೇ ವಿರೋಧ ವ್ಯಕ್ತವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿರುವ ಯುಎಇಯ ವಿದೇಶ ಸಚಿವ ಶೇಖ್ ಅಬ್ದುಲ್ಲಾ, ಒಐಸಿಯು ಭಾರತಕ್ಕೆ ಸ್ಪಷ್ಟ ಮತ್ತು ಖಚಿತ ಸಂದೇಶ ನೀಡಿರುವುದಾಗಿ ತಾನು ಭಾವಿಸುತ್ತೇನೆ. ಭಾರತವು ಈ ನಿಟ್ಟಿನಲ್ಲಿ ಮುಂದಡಿಯಿಟ್ಟು ಸಂಬಂಧ ಸುಧಾರಣೆಗೆ ಕ್ರಮ ಕೈಗೊಂಡು ಮುಂದಿನ ದಿನದಲ್ಲಿ ಇದೇ ವೇದಿಕೆಯಲ್ಲಿ ಭಾರತವನ್ನು ನಾವು ಅಭಿನಂದಿಸುವ ಸಮಯಕ್ಕಾಗಿ ತಾನು ಕಾಯುತ್ತಿದ್ದೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News