×
Ad

ಲೋಕಸಭಾ ಚುನಾವಣೆ ಸೀಟು ಹಂಚಿಕೆ: 12 ಕ್ಷೇತ್ರಗಳಿಗೆ ಜೆಡಿಎಸ್ ಪಟ್ಟು- ಸಮನ್ವಯ ಸಮಿತಿಯಲ್ಲಿ ಚರ್ಚೆ

Update: 2019-03-04 18:30 IST

ಬೆಂಗಳೂರು, ಮಾ.4: ಲೋಕಸಭಾ ಚುನಾವಣೆಯಲ್ಲಿ ಸೀಟುಗಳ ಹಂಚಿಕೆ ಕುರಿತು ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿಂದು ಚರ್ಚೆ ನಡೆದಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನೀಶ್ ಅಲಿ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್ ಪಕ್ಷದ ಹಾಲಿ ಸಂಸದರು ಇರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದಿಲ್ಲ. ಅದೇ ರೀತಿ ಜೆಡಿಎಸ್ ಸಂಸದರು ಇರುವ ಕ್ಷೇತ್ರಗಳನ್ನು ಕಾಂಗ್ರೆಸ್ ಕೇಳುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಸಮನ್ವಯ ಸಮಿತಿ ಮುಖಂಡರು, ಉಳಿದ 16 ಕ್ಷೇತ್ರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಆರಂಭಿಸಿದರು.

ರಾಜ್ಯದ 28 ಕ್ಷೇತ್ರಗಳ ಪೈಕಿ ಮೈತ್ರಿ ಸೂತ್ರದ ಪ್ರಕಾರ ಜೆಡಿಎಸ್‌ಗೆ 12 ಕ್ಷೇತ್ರಗಳು ಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೇಡಿಕೆ ಇಟ್ಟಿದ್ದು, ಈ ಪೈಕಿ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳು ಸೇರಿವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ದಾನೀಶ್ ಅಲಿಯೂ ದನಿಗೂಡಿಸಿದರು. ಆದರೆ, ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ 9 ಕ್ಷೇತ್ರಗಳನ್ನು ಬಿಟ್ಟುಕೊಡಲು ಮನಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಯ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಹಾಲಿ ಸಂಸದರಿದ್ದಾರೆ. ಈ ರೀತಿ ಏಕಾಏಕಿ ಹಾಲಿ ಸಂಸದರ ಕ್ಷೇತ್ರವನ್ನು ಕೇಳಿದರೆ ಹೇಗೆ? ಈ ಸಂಬಂಧ ಹೈಕಮಾಂಡ್ ಮಟ್ಟದಲ್ಲೇ ತೀರ್ಮಾನವಾಗಲಿ ಎಂದು ತಿಳಿಸಿದ್ದಾರೆ.

ಬೆಂಗಳೂರು ಉತ್ತರ, ಹಾಸನ, ಮಂಡ್ಯ, ಶಿವಮೊಗ್ಗ ಕ್ಷೇತ್ರಗಳ ಬಗ್ಗೆ ಬೇಕಾದರೆ ತೀರ್ಮಾನ ಮಾಡಬಹುದು. ನಿಮ್ಮ ಬೇಡಿಕೆಯನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ, ಉಳಿದ ಕ್ಷೇತ್ರಗಳ ಬಗ್ಗೆ ಹೈಕಮಾಂಡ್ ಮಟ್ಟದಲ್ಲೆ ಚರ್ಚೆಯಾಗಿ, ತೀರ್ಮಾನ ಕೈಗೊಳ್ಳುವುದು ಉತ್ತಮ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪರಮೇಶ್ವರ್ ಹಾಗೂ ವೇಣುಗೋಪಾಲ್ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಹೈಕಮಾಂಡ್ ಜೊತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ನೇರವಾಗಿ ಮಾತುಕತೆ ನಡೆಸಿ, ತೀರ್ಮಾನ ಕೈಗೊಳ್ಳಲಿ ಎಂದು ತಿಳಿಸಿ, ಮತ್ತೊಂದು ಕಾರ್ಯಕ್ರಮದ ನಿಮಿತ್ತ ಸಭೆಯಿಂದ ಹೊರ ನಡೆದರು.

ಇದಕ್ಕೂ ಮುನ್ನ ಸಭೆ ಆರಂಭವಾಗುತ್ತಿದ್ದಂತೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಭಿನ್ನಮತೀಯ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವನ್ನು ಮುಖ್ಯಮಂತ್ರಿ ಸಭೆಯಲ್ಲಿ ಪ್ರಸ್ತಾಪಿಸಿದರು. ಅಲ್ಲದೇ, ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ ಹಾಗೂ ಮಹೇಶ್ ಕುಮಟಳ್ಳಿ ಮುಂದಿನ ನಡೆ ಏನಾಗಬಹುದು ಎಂದು ಪ್ರಶ್ನಿಸಿದರು.

ರಮೇಶ್ ಜಾರಕಿಹೊಳಿ, ನಾಗೇಂದ್ರ ಹಾಗೂ ಮಹೇಶ್ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಅವರು ನಮ್ಮ ನಿರೀಕ್ಷೆಗೆ ಮೀರಿ ತೀರ್ಮಾನ ಕೈಗೊಂಡರೆ, ಮುಂದೆ ನೋಡೋಣ. ಸದ್ಯಕ್ಕೆ ಅವರಿಂದ ಸರಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News