ಎಸ್ಸಿ-ಎಸ್ಟಿಗಳಿಗೆ ಸ್ಪರ್ಧಾತ್ಮಕ ತರಬೇತಿ ಕೇಂದ್ರ ತೆರೆಯಲು ಸೂಚನೆ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-03-04 13:22 GMT

ಬೆಂಗಳೂರು, ಮಾ. 4: ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲು ಬಿಬಿಎಂಪಿ ವ್ಯಾಪ್ತಿಯ 1 ಎಕರೆ ಜಾಗದಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ತರಬೇತಿ ಕೇಂದ್ರ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸೋಮವಾರ ಛಲವಾದಿ ಮಹಾಸಭಾ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು ವಿಷಯದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದಲಿತ ಸಮುದಾಯದ ಮಕ್ಕಳು ಆಡಳಿತ ಕ್ಷೇತ್ರದಲ್ಲಿ ಹೆಚ್ಚು ಹುದ್ದೆ ಪಡೆಯುವಂಥ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ 100 ಕೋಟಿ ರೂ.. ವೆಚ್ಚದಲ್ಲಿ ಅತ್ಯಾಧುನಿಕ ಟೆಕ್ನಾಲಜಿ ಹೊಂದಿರುವ ತರಬೇತಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ದೇಶದಲ್ಲಿ ಈಗಲೂ ಮೇಲು-ಕೀಳು ಎಂಬ ಭಾವನೆ ಇದೆ. ಕೆಲ ದೇವಸ್ಥಾನಗಳಿಗೆ ಈಗಲೂ ಪ್ರವೇಶ ಇಲ್ಲ. ಕೆಲ ಮನೆಗಳಲ್ಲಿ ದಲಿತರನ್ನು ಹೀನಾಮಾನವಾಗಿ ನಡೆಸಿಕೊಳ್ಳುತ್ತಾರೆ. ಜಾತಿಯಲ್ಲಿ ಪರಿಶಿಷ್ಟರೇ ಆದರೂ ಅಸ್ಪೃಶ್ಯರಂತೆ ನೋಡುತ್ತಾರೆ. ನಮ್ಮನ್ನು ಮುಟ್ಟಿಸಿಕೊಳ್ಳದ ಸ್ಥಿತಿ ಇನ್ನೂ ಜೀವಂತವಾಗಿದೆ. ಇಷ್ಟಾದರೂ ನಮ್ಮ ಸಮುದಾಯ ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಎಲ್ಲರೂ ಸಂಘಟಿತರಾಗಿ, ಹೋರಾಟದಿಂದಲೇ ನಾವು ಗುರಿಮುಟ್ಟಬೇಕು ಎಂದು ಸಲಹೆ ಮಾಡಿದರು.

‘ಇತ್ತೀಚೆಗೆ ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಸಂಬಂಧ ಕಾನೂನು ತಂದು ಅದನ್ನು ಜಾರಿಗೆ ತರಲು ಏಳು ಬಾರಿ ಸಚಿವ ಸಂಪುಟಕ್ಕೆ ತಂದು, ಅಂತಿಮವಾಗಿ ಈ ಕಾಯ್ದೆ ಅನುಷ್ಠಾನಕ್ಕೆ ಸರಕಾರ ಹೆಜ್ಜೆ ಇಟ್ಟಿತ್ತು. ಆದರೆ, ಕೆಲ ಕಾಣದ ಕೈಗಳು ಈ ಕಾಯ್ದೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ’

-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News