ಮೈತ್ರಿ ಸರಕಾರ ಮುನ್ನಡೆಸುವುದು ನಿಜಕ್ಕೂ ಸವಾಲಿನ ಕೆಲಸ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಮಾ. 4: ಮೈತ್ರಿ ಸರಕಾರ ಮುನ್ನಡೆಸುವುದು ಒಂದು ಸವಾಲಿನ ಕೆಲಸ. ಹನ್ನೆರಡು ವರ್ಷಗಳ ಹಿಂದೆ ಮೈತ್ರಿ ಸರಕಾರ ರಚಿಸಿದ್ದ ವೇಳೆ ನನಗೆ ದೇವೇಗೌಡರ ಪುತ್ರ ಎಂಬ ಅರ್ಹತೆಯಷ್ಟೇ ಇತ್ತು. ಆದರೆ, ಇಂದಿನ ಪರಿಸ್ಥಿತಿಯೇ ಬೇರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಾರ್ತಾ ಇಲಾಖೆಯಿಂದ ಏರ್ಪಡಿಸಿದ್ದ ಕರ್ನಾಟಕ ಮುನ್ನಡೆ ಪರಿಣತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಸರಕಾರ ಇಂದು ಬೀಳುತ್ತೆ, ನಾಳೆ ಪತನವಾಗುತ್ತದೆ ಎಂಬ ವಿಶ್ಲೇಷಣೆಗಳ ಮೂಲಕ ಗಡುವು ನೀಡಲಾಗುತ್ತದೆ ಎಂದರು.
ಮೈತ್ರಿ ಸರಕಾರ ಅಸ್ಥಿತ್ವಕ್ಕಿಂತ ಸರಕಾರಕ್ಕೆ ಪದೇ ಪದೇ ಗಡುವು ನೀಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಮುನ್ನಡೆಸುವುದು ಸವಾಲಿನ ಕೆಲಸ. ಏಕಪಕ್ಷೀಯ ಸರಕಾರದ ಆಡಳಿತಕ್ಕಿಂತ ಉತ್ತಮ ಆಡಳಿತ-ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುವೆ ಎಂದು ಕುಮಾರಸ್ವಾಮಿ ಘೋಷಿಸಿದರು.
ಮೈತ್ರಿ ಸರಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸೂಕ್ತ ಪ್ರಚಾರ ಸಿಗುತ್ತಿಲ್ಲ. ಆದರೂ, ರಾಜ್ಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ನಿರ್ವಹಿಸುವೆ ಎಂದ ಅವರು, ಬಿಜೆಪಿ ಜತೆ ಸಮ್ಮಿಶ್ರ ಸರಕಾರ ರಚನೆ ಮಾಡಿದ ಸಂದರ್ಭದಲ್ಲಿ ಜೆಡಿಎಸ್-38, ಬಿಜೆಪಿ-78 ಶಾಸಕರ ಸಂಖ್ಯಾಬಲದೊಂದಿಗೆ ಸಿಎಂ ಆಗಿದ್ದೆ. ಇದೀಗ ಜೆಡಿಎಸ್-37, ಕಾಂಗ್ರೆಸ್-78 ಶಾಸಕರ ಬಲದೊಂದಿಗೆ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿದ್ದೇನೆ ಎಂದ ಅವರು ತಿಳಿಸಿದರು.
ಜ್ಯೋತಿಷಿಗಳ ಹಿಂದೆ ಬೀಳಲ್ಲ: ಜ್ಯೋತಿಷ್ಯರ ಹಿಂದೆ ಬೀಳುವು ಜಾಯಮಾನ ನಮ್ಮದಲ್ಲ. ಆದರೆ, ದೇವರನ್ನು ನಂಬುತ್ತೇನೆ. ನಮ್ಮ ಕುಟುಂಬದವರು ಜ್ಯೋತಿಷ್ಯವನ್ನು ನಂಬುತ್ತಾರೆ. ದೇವೇಗೌಡ ರಾಜಮಹಾರಾಜರ ಕಾಲದಿಂದಲೂ ಜ್ಯೋತಿಷಿಗಳ ಸಲಹೆ-ಸೂಚನೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಅದು ಅವರ ನಂಬಿಕೆ ಎಂದರು.
ಚರ್ಚಿಸುವ ಮನೋಭಾವವಿಲ್ಲ: ಇತ್ತೀಚಿನ ದಿನಗಳಲ್ಲಿ ಆಯವ್ಯಯದ ಮೇಲೆ ಚರ್ಚಿಸುವ ಮನೋಭಾವ ಜನಪ್ರತಿನಿಧಿಗಳಲ್ಲಿ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬಜೆಟ್ ಚರ್ಚೆ ಇಲ್ಲದೆ ಅಂಗೀಕರಿಸಿದ್ದು ದುರದೃಷ್ಟಕರ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಶಾಸಕರು ಲೆಕ್ಕಾಚಾರ ಹಾಕುವ ಧೋರಣೆ ಸಲ್ಲ. ನನ್ನ ತಂದೆ ದೇವೇಗೌಡರು ನನಗೆ ರಾಜಕೀಯ ಗುರುಗಳು. ಆದರೆ, ನಾನು ಪ್ರತಿನಿತ್ಯ ಭೇಟಿ ಮಾಡುವ ಬಡಜನತೆ ನನಗೆ ಆದರ್ಶ. ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಬಗ್ಗೆ ನಾನು ಸದಾ ಚಿಂತಿಸುತ್ತೇನೆ ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.