ಮೈತ್ರಿ ಪಕ್ಷದಲ್ಲಿ ಶಾಸಕರ ಕಡೆಗಣನೆ: ಅರವಿಂದ ಲಿಂಬಾವಳಿ

Update: 2019-03-04 14:06 GMT

ಬೆಂಗಳೂರು, ಮಾ.4: ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಡಾ.ಉಮೇಶ್ ಜಾಧವ್ ನೀಡಿರುವ ರಾಜೀನಾಮೆಯು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಶಾಸಕರನ್ನು ಯಾವ ರೀತಿ ಕಡೆಗಣಿಸಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.

ಸೋಮವಾರ ನಗರದ ಡಾಲರ್ಸ್ ಕಾಲನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಜಾಧವ್ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ನಾಯಕರು ಬಿಜೆಪಿ ಸೇರಬಹುದು ಎಂದರು.

ರಾಜ್ಯದಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಶಾಸಕರಿಗೆ ಸರಿಯಾದ ಅನುದಾನ ನೀಡುತ್ತಿಲ್ಲ. ಆಡಳಿತರೂಢ ಪಕ್ಷಗಳ ಶಾಸಕಾಂಗ ಸಭೆಗಳಲ್ಲೆ ಪರಸ್ಪರ ಅಸಮಾಧಾನಗಳು ವ್ಯಕ್ತವಾಗಿವೆ, ರೆಸಾರ್ಟ್‌ನಲ್ಲಿ ಶಾಸಕರ ನಡುವೆ ಹೊಡೆದಾಟ ನಡೆದಿದೆ. ಇದನ್ನೆಲ್ಲಾ ನಿಭಾಯಿಸೋಕೆ ಆಗದೇ, ಅನಗತ್ಯವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಪ್ರಧಾನಿ ನರೇಂದ್ರಮೋದಿ ನಾಯಕತ್ವದಲ್ಲಿ ಬಿಜೆಪಿಯು ದೇಶಕ್ಕೆ ಉತ್ತಮವಾದ ಆಡಳಿತ ನೀಡುತ್ತಿದೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿರುವುದರಿಂದ, ಉಮೇಶ್ ಜಾಧವ್ ನಮ್ಮ ಪಕ್ಷಕ್ಕೆ ಸೇರುತ್ತಾರೆ. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯ ವರ್ತನೆಯಿಂದ ಜಾಧವ್ ಬೇಸತ್ತು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರಬಹುದು ಎಂದು ಅರವಿಂದ ಲಿಂಬಾವಳಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಇವತ್ತು ಇದ್ದಕ್ಕಿದ್ದಂತೆ ಮಲ್ಲಿಕಾರ್ಜುನ ಖರ್ಗೆಯವರನ್ನು ಹೊಗಳಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ಹುಳುಕುಗಳನ್ನು ಮುಚ್ಚಿ ಹಾಕಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಜನರು ಇವರ ಮಾತುಗಳನ್ನು ನಂಬುವುದಿಲ್ಲ ಎಂದು ಅವರು ಹೇಳಿದರು.

ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಉಮೇಶ್ ಜಾಧವ್ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಏನು ಬೇಕಾದರೂ ಬೆಳವಣಿಗೆಗಳು ನಡೆಯಬಹುದು. ನಮಗೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿರುವ ಕಲಬುರ್ಗಿ ಅಷ್ಟೇ ಅಲ್ಲ, ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುವ ಉದ್ದೇಶವಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News