'ಮನ್ ಕೀ ಬಾತ್’ ಪತ್ನಿಗೆ ಮಾತ್ರ ಸೀಮಿತ: ಸಚಿವ ಝಮೀರ್ ಅಹ್ಮದ್ ವ್ಯಂಗ್ಯ
ಬೆಂಗಳೂರು, ಮಾ.3: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮ ಯಾರಿಗೆ ಬೇಕು. ಅದು, ಪತ್ನಿಗೆ ಮಾತ್ರ ಸೀಮಿತ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝಡ್.ಝಮೀರ್ ಅಹ್ಮದ್ ವ್ಯಂಗ್ಯವಾಡಿದರು.
ಸೋಮವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಏರ್ಪಡಿಸಿದ್ದ, ಅಲ್ಪಸಂಖ್ಯಾತರ ವಿಭಾಗದಿಂದ ರಾಜ್ಯಮಟ್ಟದ ಐಕ್ಯತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಯ ಕಡೆ ಗಮನ ನೀಡುತ್ತಿಲ್ಲ. ಬದಲಾಗಿ, ಮನ್ ಕೀ ಬಾತ್ ಕಾರ್ಯಕ್ರಮ ತಂದಿದ್ದೇನೆ ಎನ್ನುತ್ತಾರೆ. ಆದರೆ, ಈ ಮನ್‌ಕೀ ಬಾತ್ ಎಂದರೆ, ಪತ್ನಿಯ ಜೊತೆ, ಪತಿರಾಯ ಮಾತನಾಡುವುದು ಎಂದರ್ಥ. ಅಷ್ಟೇ ಅಲ್ಲದೆ, ಇದು ವೈಯಕ್ತಿಕ ಬದುಕಿಗೆ ಸೀಮಿತ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬದಲಾವಣೆಗಾಗಿ 2014ರ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಮಾಡಲಾಯಿತು. ಆದರೆ ಅವರು ಕೊಟ್ಟ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಬದಲಾಗಿ ದೇಶದಲ್ಲಿ ಅಸಮಾನತೆ, ಆರ್ಥಿಕ ಸಂಕಷ್ಟ ಸೇರಿದಂತೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ಹುಟ್ಟು ಹಾಕಿದ್ದಾರೆ ಎಂದರು.
ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಮುಂದೆ ಹೀಗಾಗಬಾರದೆಂದರೆ ಮುಸ್ಲಿಮರು ಜಾತ್ಯತೀತ ಪಕ್ಷಕ್ಕೆ ಮತ ಹಾಕಬೇಕು ಎಂದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ ‘ಅಚ್ಚೇ ದಿನ್’ ಬರಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಠೇವಣಿ ಮಾಡುವುದಾಗಿ ಹೇಳಿದ್ದರು. ಅದು, ಈಡೇರಲೇ ಇಲ್ಲ. ಕಾಳಧನವನ್ನು ನಿಯಂತ್ರಿಸುವ ಸಲುವಾಗಿ ನಗದು ಅಮಾನ್ಯೀಕರಣ ಮಾಡಿದರು. ಇದರ ಪರಿಣಾಮ, ದೇಶದ ಆರ್ಥಿಕತೆಗೆ ಹೊಡೆತ ಬಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದು ಕೊಂಡರು ಎಂದು ಅವರು ಆರೋಪಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮನ್ ಕೀ ಬಾತ್ ಬೇಕಿಲ್ಲ. ಕಾಮ್ ಕೀ ಬಾತ್ ಬೇಕಿದೆ. ಭಾಷಣ ಮಾಡಿಕೊಂಡು ಕಾಲಕಳೆಯುವ ಬಿಜೆಪಿ ಮತ್ತು ಮೋದಿಯವರನ್ನು ಸೋಲಿಸಿ ಮನೆಗೆ ಕಳುಹಿಸಬೇಕೆಂದು ಝಮೀರ್ ನುಡಿದರು.
ಸಮಾವೇಶದಲ್ಲಿ ಎಐಸಿಸಿ ಅಲ್ಪಸಂಖ್ಯಾತ ವಿಭಾಗದ ನದೀಮ್ ಝಾವಿದ್, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಸ್ತುವಾರಿ ಡಾ.ಜಫರ್ ಅಹ್ಮದ್ ಖಾನ್, ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ವೈ.ಸಯೀದ್ ಅಹ್ಮದ್ ಸೇರಿದಂತೆ ಪ್ರಮುಖರಿದ್ದರು.