ಉಮೇಶ್ ಜಾಧವ್ ರಾಜೀನಾಮೆ ಹಳೆಯ ಸರಕು: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಮಾ. 4: ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜೀನಾಮೆ ನಿರೀಕ್ಷಿತ. ಅವರ ರಾಜೀನಾಮೆಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಂಭಾಗದಲ್ಲಿ ‘ಟ್ರೀಣ್ ಟ್ರೀಣ್ ಸೈಕಲ್’ ಸವಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಡಾ.ಉಮೇಶ್ ಹಾಧವ್ ಅವರ ರಾಜೀನಾಮೆ ಬಗ್ಗೆ ಈ ಹಿಂದೆಯೇ ಗೊತ್ತಿತ್ತು. ಅದು ಒಂದು ತಿಂಗಳ ಹಳೆಯ ಸರಕು ಎಂದು ಹೇಳಿದರು.
ಉಮೇಶ್ ಜಾಧವ್ ಅವರೊಂದಿಗೆ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ನಾಗೇದ್ರ ರಾಜೀನಾಮೆ ನೀಡುತ್ತಾರೆ ಎಂಬುದು ಸತ್ಯಕ್ಕೆ ದೂರ. ಅಂತೆ-ಕಂತೆಗಳಿಂದ ಮೈತ್ರಿ ಸರಕಾರಕ್ಕೆ ಯಾವುದೇ ದಕ್ಕೆ ಇಲ್ಲ. ಸರಕಾರ ಸುಭದ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಸೀಟು ಹಂಚಿಕೆ ಸುಗಮ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಸಂಬಂಧ ಸಮನ್ವಯ ಸಮಿತಿ ಸಭೆ ನಡೆಸಿದ್ದು, ಸೀಟು ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸುಗಮವಾಗಿ ಸೀಟು ಹಂಚಿಕೆಯಾಗಲಿದೆ. ಶೀಘ್ರದಲ್ಲೆ ಎಲ್ಲವೂ ಅಂತಿಮಗೊಳ್ಳಲಿದೆ ಎಂದು ಹೇಳಿದರು.