ಬಡವರಿಗೆ ಹಕ್ಕು ಪತ್ರ ನೀಡಲು ಜನಪ್ರತಿನಿಧಿಗಳೇ ಸರ್ಕಸ್ ಮಾಡಬೇಕು: ಬಿಡಿಎ ಅಧ್ಯಕ್ಷ ಎಸ್.ಟಿ.ಸೋಮಶೇಖರ್
ಬೆಂಗಳೂರು, ಮಾ. 4: ಜನಪ್ರತಿನಿಧಿಗಳಾದ ನಾವು ಬಡವರಿಗೆ ಹಕ್ಕುಪತ್ರ ಕೊಡಿಸಲು ಇಷ್ಟೊಂದು ಸರ್ಕಸ್ ಮಾಡಬೇಕಾಗಿದೆ ಎಂದರೆ ನಾವೇಕೆ ಜನಪ್ರತಿನಿಧಿಗಳಾಗಬೇಕು ಬಿಡಿಎ ಅಧ್ಯಕ್ಷ ಶಾಸಕ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಕಂದಾಯ ಇಲಾಖೆ ವತಿಯಿಂದ ಹೇರೋಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಸರಕಾರಿ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿರುವ 216 ಪಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 94ಸಿಸಿ ಕಾಯ್ದೆಯನ್ನು ಜಾರಿಗೆ ತಂದು ಅದರಡಿಯಲ್ಲಿ 1,216 ಪಲಾನುಭಗಳಿಗೆ ಹಕ್ಕುಪತ್ರ ನೀಡಲು ಆದೇಶ ಹೊರಡಿಸಲಾಗಿದ್ದರೂ ಸರಕಾರದ ಆದೇಶವನ್ನು ಗಾಳಿಗೆ ತೂರಿದ್ದಲ್ಲದೆ ನಿರ್ಲಕ್ಷ ವಹಿಸಿ ಕೇವಲ 216 ಮಂದಿಗೆ ಮನೆಯ ಹಕ್ಕುಪತ್ರ ನೀಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎರಡೂವರೆ ವರ್ಷದಿಂದ ಬಡವರಿಗೆ 94ಸಿಸಿ ಯೋಜನೆಯಲ್ಲಿ ಹಕ್ಕುಪತ್ರ ನೀಡದೆ ದರ್ಪದಿಂದ ವರ್ತಿಸುತ್ತಿರುವ ಅಯೋಗ್ಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಸರಕಾರಕ್ಕೆ ಒಳ್ಳೆಯ ಹೆಸರು ತರಬೇಕಾಗಿದೆ. ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲೂಕಿನ ಇಬ್ಬರು ಅಧಿಕಾರಿಗಳನ್ನು ಕೂಡಲೇ ವರ್ಗಾಯಿಸಬೇಕೆಂದು ಸಿಎಂ ಎಚ್.ಡಿ.ಕುಮಾರಸ್ವಾಮಿ, ಕಂದಾಯ ಸಚಿವ ಆರ್.ದೇಶಪಾಂಡೆಯವರನ್ನು ಒತ್ತಾಯಿಸಿದರು.
ಬಡವರಿಗೆ ಹಕ್ಕುಪತ್ರ ಕೊಡಿಸಲು ಇಷ್ಟೊಂದು ಸರ್ಕಸ್ ಮಾಡಬೇಕಾಗಿದೆ ಎಂದರೆ ನಾವೇಕೆ ಜನಪ್ರತಿನಿಧಿಗಳಾಗಬೇಕು. ಹಲವು ಬಾರಿ ಹೇಳಿದರೂ ವಿಳಂಬ ತೋರುವ ಅಧಿಕಾರಿಗಳನ್ನು ಏಕೆ ಉಳಿಸಿಕೊಳ್ಳಬೇಕು. ನಿಜವಾದ ಬಡವರಿಗೆ ಸಾಮಾನ್ಯ ಜನರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.