ವಿಚಾರವಾದಿಗಳು ಪರಂಪರೆಯಿಂದ ದೂರವಾಗಬಾರದು: ಡಾ.ಎಲ್.ಹನುಮಂತಯ್ಯ

Update: 2019-03-04 15:56 GMT

ಬೆಂಗಳೂರು, ಮಾ.4: ವಿಚಾರವಾದಿಗಳು ಪರಂಪರೆಯಿಂದ ದೂರವಾದರೆ ಜನರಿಂದ ದೂರವಾಗುತ್ತಾರೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕಸಾಪದಲ್ಲಿ ಶಿವರಾತ್ರಿಯ ಅಂಗವಾಗಿ ಕಾವ್ಯ ಮಂಡಲದ ವತಿಯಿಂದ ಆಯೋಜಿಸಿದ್ದ ಅಹೋರಾತ್ರಿ ಕಾವ್ಯಗಾಯನ ‘ಕಾವ್ಯ ಶಿವರಾತ್ರಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಡಿನ ಪರಂಪರೆಯನ್ನು ಧಿಕ್ಕರಿಸುತ್ತಾ ಹೋದರೆ ವಿಚಾರಗಳು ಹಿಂದೆ ಸರಿಯುತ್ತಾ ಹೋಗುತ್ತವೆ. ಇತ್ತೀಚಿಗೆ ವಿಚಾರವಾದಿಗಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅಲ್ಲಿ ಎಲ್ಲರೂ 60-70 ವರ್ಷ ಮೀರಿದವರೇ ಇದ್ದರು. ಅಂದರೆ ಯುವ ಸಮುದಾಯವನ್ನು ತಲುಪಲು ನಮಗೆ ಇಂದಿನ ಪರಂಪರೆ ಮುಖ್ಯವಾಗಿದೆ. ಜನಸಾಮಾನ್ಯರ ಪರಂಪರೆಯನ್ನು ಯುವಜನರಿಗೆ ತಲುಪಿಸಬೇಕಾದ ಅಗತ್ಯವಿದೆ ಎಂದರು.

ಕರ್ನಾಟಕದಲ್ಲಿ ಕಿ.ರಂ.ನಾಗರಾಜರನ್ನು ಕಾವ್ಯದ ಹುಚ್ಚ ಎನ್ನುತ್ತಿದ್ದರು. ಆದರೆ, ಅವರ ನಂತರ ಈ ನಾಡಿನಲ್ಲಿ ಮತ್ತೊಬ್ಬ ಕಾವ್ಯದ ಹುಚ್ಚಿರುವ ಮೇಷ್ಟ್ರು ಸಿಗಲಿಲ್ಲ. ಕಾವ್ಯ ಬರೆಯುವುದು ಹೇಗೆ ಎಂದು ಹೇಳಿಕೊಡಲು ಹಾಗೂ ಕಾವ್ಯದಿಂದ ಪ್ರಯೋಜನವೇನು ಎಂದು ಅಪಹಾಸ್ಯ ಮಾಡುವವರಿಗೆ ಬುದ್ಧಿವಾದ ಹೇಳಲು ಒಬ್ಬ ಮೇಷ್ಟ್ರು ಅಗತ್ಯವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅನೇಕ ವಿಶ್ವವಿದ್ಯಾಲಯಗಳಿದ್ದು, ಅದರಲ್ಲಿ ನೂರಾರು ಸಂಖ್ಯೆಯಲ್ಲಿ ಕನ್ನಡದ ಪ್ರಾಧ್ಯಾಪಕರಿದ್ದಾರೆ. ಆದರೆ, ಕಿ.ರಂ.ನಂತಹ ಕಾವ್ಯದ ಹುಚ್ಚನ್ನು ಹತ್ತಿಸಿಕೊಂಡವರು ಹುಟ್ಟಿಕೊಳ್ಳಲಿಲ್ಲ. ಈ ನಿಟ್ಟಿನಲ್ಲಿ ಕಿರಂ ರಷ್ಟರ ಮಟ್ಟಿಗೆ ಅಲ್ಲದಿದ್ದರೂ ಮತ್ತೊಬ್ಬ ಕಾವ್ಯದ ಹುಚ್ಚರು ಹುಟ್ಟಬೇಕಿದೆ ಎಂದು ಆಶಿಸಿದರು.

ದೇಶವಿಡೀ ಶಿವನನ್ನು ಆರಾಧಿಸುತ್ತಿದೆ. ಆದರೆ, ಶಿವ ನಮ್ಮೆಲ್ಲರ ಗೆಳೆಯನಾಗಿದ್ದು, ಪರಂಪರೆಯ ಶಿವನಾಗಿದ್ದಾನೆ. ಅವನಿಗೆ ವಿವಿಧ ರೀತಿಯ ಭಕ್ತರಿದ್ದು, ಹಿಮಾಲಯದ ತಪ್ಪಲಿನಲ್ಲಿ ಹೆಜ್ಜೆಗೊಂದು ಗುಡಿ ಕಟ್ಟಿಕೊಂಡವರಿದ್ದಾರೆ. ಶಿವ ಎಂಬುವವನು ಪರಿಶಿಷ್ಟ ಜಾತಿಗೆ ಸೇರಿದ ನಾಯಕನಾಗಿದ್ದಾನೆ. ಮೈಗೆ ಚರ್ಮವನ್ನು ಸುತ್ತಿಕೊಂಡು, 2 ಹೆಂಡತಿ ಕಟ್ಟಿಕೊಂಡವನಾಗಿದ್ದಾನೆ ಎಂದು ಹೇಳಿದರು.

ಮಾಂಸಾಹಾರಿಯಾಗಿದ್ದ ಶಿವನನ್ನು ಕೆಲವರು ಅನುಕೂಲಕ್ಕಾಗಿ ಸಸ್ಯಾಹಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಮನುಷ್ಯ ಹೇಗೆ ಜೀವಿಸಬಲ್ಲನೋ ಹಾಗೆ ಜೀವಿಸಿದ ವ್ಯಕ್ತಿ. ಅವನಿಗೆ ಯಾವುದರ ಕಲ್ಪನೆಯಿರಲಿಲ್ಲ ಎಂದ ಅವರು, ಎಲ್ಲಿ ಬೇಕಾದರೂ ಸ್ನಾನ ಮಾಡುತ್ತಿದ್ದ, ಊಟ ಮಾಡುತ್ತಿದ್ದ, ಮಲಗುತ್ತಿದ್ದನು. ಹೀಗಾಗಿ, ಅವನು ಜನಸಾಮಾನ್ಯರ ಶಿವನಾಗಿದ್ದು, ಅವನನ್ನು ಅರ್ಥಮಾಡಿಕೊಳ್ಳುವ, ಅವನ ವೈವಿದ್ಯತೆಯನ್ನು ಪಾಲಿಸುವ ಸಂದರ್ಭ ಇದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಬಿ.ಎಂ.ಹನೀಫ್, ಕೆ.ಎನ್.ಕವನ, ಕುರುವ ಬಸವರಾಜು, ಉಷಾ ಕಟ್ಟೆಮನೆ, ಕೆ.ಪಿ.ಬೆಟ್ಟೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News