ಬೆಂಗಳೂರು: ಮಹಿಳಾ ವಿದ್ಯಾರ್ಥಿ ನಿಲಯ ಮಾ.6ರಂದು ಪ್ರಧಾನಿ ಮೋದಿ ಉದ್ಘಾಟನೆ

Update: 2019-03-04 16:01 GMT

ಬೆಂಗಳೂರು, ಮಾ.4: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಿರ್ಮಿಸಲಾಗಿರುವ ಈಶಾನ್ಯ ರಾಜ್ಯಗಳ ಮಹಿಳಾ ವಿದ್ಯಾರ್ಥಿಗಳ ವಸತಿನಿಲಯದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾ.6ರಂದು ಬೆಳಗ್ಗೆ 11 ಗಂಟೆಗೆ ಕಲಬುರ್ಗಿಯಿಂದ ಡಿಜಿಟಲ್ ತಂತ್ರಜ್ಞಾನದ ಮೂಲಕ ನೆರವೇರಿಸಲಿದ್ದಾರೆ.

ಈ ಉದ್ಘಾಟನೆ ಕಾರ್ಯಕ್ರಮವು ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತಕುಮಾರ್‌ ಹೆಗಡೆ, ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಈಶಾನ್ಯ ರಾಜ್ಯಗಳ ಪರಿಷತ್ತಿನ ಕಾರ್ಯದರ್ಶಿ ರಾಮ್ ಮುಯುವ ಸಮ್ಮುಖದಲ್ಲಿ ನೆರವೇರಲಿದೆ.

ಈಶಾನ್ಯ ರಾಜ್ಯಗಳ ಮಹಿಳಾ ವಿದ್ಯಾರ್ಥಿಗಳ ವಸತಿ ನಿಲಯದ ಕಟ್ಟಡವನ್ನು ಜ್ಞಾನಭಾರತಿ ಆವರಣದಲ್ಲಿರುವ 6 ಎಕರೆ ಪ್ರದೇಶದಲ್ಲಿ, ಕೇಂದ್ರ ಸರಕಾರ, ಶಿಲಾಂಗ್‌ನ ಈಶಾನ್ಯ ರಾಜ್ಯಗಳ ಪರಿಷತ್ತು ನೀಡಿರುವ 138 ಕೋಟಿ ರೂ.ಗಳ ಅನುದಾನದೊಂದಿಗೆ ನಿರ್ಮಿಸಲಾಗಿದೆ. ಈ ಕಟ್ಟಡದ ಉದ್ದೇಶವು, ಬೆಂಗಳೂರು ವಿಶ್ವವಿದ್ಯಾಲಯ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ, ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ರಾಜ್ಯಗಳ ವಿದ್ಯಾರ್ಥಿನಿಯರಿಗೆ ವಸತಿ ಕಲ್ಪಿಸುವುದು. ಈ ಈಶಾನ್ಯ ರಾಜ್ಯಗಳ ಮಹಿಳಾ ವಿದ್ಯಾರ್ಥಿಗಳ ವಸತಿನಿಲಯದ ಕಟ್ಟಡವು ಭಾರತದಲ್ಲೇ ಪ್ರಪ್ರಥಮವಾಗಿದೆ.

ಈ ಸುಸಜ್ಜಿತವಾದ ಹಾಸ್ಟೆಲ್ ಕಟ್ಟಡ ನಿರ್ಮಾಣವು ಪೂರ್ಣಗೊಂಡಿದ್ದು, 3 ಮಹಡಿಗಳಿದ್ದು, ಒಟ್ಟು ವಿಸ್ತೀರ್ಣ 6809 ಚ.ಮೀ.ಗಳು. ಈ ಕಟ್ಟಡದಲ್ಲಿ ಸುಮಾರು 100 ಕೊಠಡಿಗಳಿದ್ದು 300 ವಿದ್ಯಾರ್ಥಿನಿಯರು ವಾಸಿಸಬಹುದಾಗಿದೆ. ಪ್ರತಿ ಕೊಠಡಿಗಳಲ್ಲಿ, ವಾರ್ಡ್ರೋಬ್, ಶೌಚಾಲಯ, ವೈಫೈ, ಓದುವ ಕೊಠಡಿ ಮತ್ತು ಗ್ರಂಥಾಲಯ ಹಾಗೂ ಇತರ ಸೌಲಭ್ಯಗಳಿವೆ ಎಂದು ಕುಲಪತಿ ಪ್ರೊ.ವೇಣುಗೋಪಾಲ್ ಕೆ.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News