×
Ad

ಬೆಂಗಳೂರು-ಮೈಸೂರು ನಡುವಿನ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ

Update: 2019-03-04 23:29 IST

ಬೆಂಗಳೂರು, ಮಾ.4: ಬೆಂಗಳೂರು-ಮೈಸೂರು ರೈಲು ಮಾರ್ಗದ 17 ನಿಲ್ದಾಣಗಳಲ್ಲೂ ಉಚಿತ ವೈಫೈ ಸೇವೆ ಆರಂಭವಾಗಿದೆ. ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿದಂತೆ ಕೆಲ ನಿಲ್ದಾಣಗಳಲ್ಲಿ ಲಭ್ಯವಿದ್ದ ವೈಫೈ ಸೌಲಭ್ಯ ಈಗ ಮಾರ್ಗದ ಎಲ್ಲ ನಿಲ್ದಾಣಗಳಿಗೂ ವಿಸ್ತರಿಸಲಾಗಿದೆ.

ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ರೈಲ್ವೆ ಇಲಾಖೆ ಎಲ್ಲ ನಿಲ್ದಾಣಗಳಿಗೆ ಉಚಿತ ವೈಫೈ ನೀಡುತ್ತಿದೆ. ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಕೆಲ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ನೀಡಲಾಗಿತ್ತು. ಈಗ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ನಾಯಂಡಹಳ್ಳಿ, ಹೆಜ್ಜಾಲ, ಸೆಟ್ಟಿಹಳ್ಳಿ, ಹಣಕೆರೆ, ಎಳಿಯೂರು, ಬ್ಯಾಡರಹಳ್ಳಿ, ಪಾಂಡವಪುರ, ನಾಗೇನಹಳ್ಳಿ ನಿಲ್ದಾಣಗಳಿಗೂ ವೈಫೈ ಸೌಲಭ್ಯ ಸಿಕ್ಕಿದೆ. ಇವುಗಳಲ್ಲಿ ಕೆಲ ನಿಲ್ದಾಣಗಳಲ್ಲಿ ಹಿಂದೆಯೇ ಪ್ರಾಯೋಗಿಕವಾಗಿ ವೈಫೈ ಆರಂಭಿಸಲಾಗಿತ್ತು. ಒಟ್ಟು 138 ಕಿ.ಮೀ. ಉದ್ದದ ರೈಲು ಮಾರ್ಗದ ಎಲ್ಲ ನಿಲ್ದಾಣಗಳೂ ವೈಫೈ ಸೌಲಭ್ಯ ಪಡೆದಿವೆ. ಈ ಸಂಬಂಧ ಮಾಹಿತಿ ನೀಡಿರುವ ವೈಫೈ ಸೇವೆ ನೀಡುವ ರೇಲ್‌ಟೆಲ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪುನೀತ್ ಚಾವ್ಲಾ, ದೇಶದ 831 ನಿಲ್ದಾಣಗಳಿಗೆ ವೈಫೈ ಸೇವೆ ನೀಡಲಾಗಿದೆ. ಪ್ರತಿ ತಿಂಗಳು 80 ಲಕ್ಷ ಪ್ರಯಾಣಿಕರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಹತ್ತು ದಿನಗಳಲ್ಲಿ ವೈಫೈ ಪಡೆಯುವ ನಿಲ್ದಾಣಗಳ ಸಂಖ್ಯೆ 1 ಸಾವಿರ ದಾಟಲಿದೆ ಎಂದು ಹೇಳಿದ್ದಾರೆ.

ಬಳಸುವುದು ಹೇಗೆ: ನಿಲ್ದಾಣದ ಒಳಗೆ ಮಾತ್ರ ಈ ವೈಫೈ ಸೇವೆ ದೊರೆಯುತ್ತದೆ. ಪ್ರಯಾಣಿಕರು ನಿಲ್ದಾಣದ ಒಳಗೆ ಹೋದಾಗ ಸ್ಮಾರ್ಟ್‌ಫೋನ್‌ನಲ್ಲಿ ವೈಫೈ ಆನ್ ಮಾಡಬೇಕು. ಆಗ ರೈಲ್‌ವಯರ್ ಎಂಬ ವೈಫೈ ಸೇವೆ ಇರುವುದು ಕಂಡುಬರುತ್ತದೆ. ಇದನ್ನು ಆಯ್ಕೆ ಮಾಡಿಕೊಂಡರೆ ರೈಲ್ ವಯರ್‌ನ ಪುಟ ತೆರೆದುಕೊಳ್ಳುತ್ತದೆ.

ಅದರಲ್ಲಿ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ ಸಬ್‌ಮಿಟ್ ಬಟನ್ ಒತ್ತಬೇಕು. ಬಳಿಕ ಮೊಬೈಲ್‌ಗೆ ಒಟಿಪಿ ಹೊಂದಿರುವ ಸಂದೇಶ ಬರುತ್ತದೆ. ಈ ಒಟಿಪಿಯನ್ನು ಪುಟದಲ್ಲಿ ಟೈಪ್ ಮಾಡಿ ಮತ್ತೊಮ್ಮೆ ಸಬ್‌ಮಿಟ್ ಒತ್ತಿದರೆ ವೈಫೈ ಸೇವೆ ದೊರೆಯುತ್ತದೆ. ಒಮ್ಮೆ ಲಾಗ್‌ಇನ್ ಆದರೆ 30 ನಿಮಿಷ ವೇಗವಾದ ಅಂತರ್ಜಾಲ ಸೌಲಭ್ಯ ಪಡೆಯಬಹುದು. 1 ಎಂಬಿಪಿಎಸ್ ಅಪ್‌ಲೋಡ್ ಹಾಗೂ 3 ಎಂಬಿಪಿಎಸ್ ಡೌನ್‌ಲೋಡ್ ವೇಗ ಇರಲಿದೆ. 30 ನಿಮಿಷದ ಬಳಿಕ ವೈಫೈನ ವೇಗ 64 ಕೆಬಿಪಿಎಸ್‌ಗೆ ಇಳಿಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News