ಪುಲ್ವಾಮ ದಾಳಿಯನ್ನು ‘ಅಪಘಾತ’ ಎಂದ ಬಿಜೆಪಿಯ ಹಿರಿಯ ನಾಯಕ

Update: 2019-03-06 07:48 GMT

ಹೊಸದಿಲ್ಲಿ, ಮಾ.6: ಪುಲ್ವಾಮದಲ್ಲಿ ಉಗ್ರರ ದಾಳಿಯನ್ನು 'ಅಪಘಾತ' ಎಂದು ಬಣ್ಣಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕರೊಬ್ಬರು ಅದೇ ರೀತಿಯ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಈ ರೀತಿ ಹೇಳಿಕೆ ನೀಡಿರುವುದನ್ನು ದಿಗ್ವಿಜಯ್ ಸಿಂಗ್ ಅವರು ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ.

ಕೇಶವ್ ಪ್ರಸಾದ್ ನೀಡಿರುವ ಹೇಳಿಕೆಯ ವೀಡಿಯೊ ದಾಖಲೆಯನ್ನು  ದಿಗ್ವಿಜಯ್ ಸಿಂಗ್ ಬಹಿರಂಗ ಮಾಡಿದ್ದಾರೆ. ಈ ವೀಡಿಯೊದಲ್ಲಿ ಕೇಶವ್ ಪ್ರಸಾದ್  ಅವರು " ಫೆಬ್ರವರಿ 14ರಂದು ಹಲವು ಮಂದಿ ಸಿಆರ್ ಪಿಎಫ್ ಯೋಧರ ಸಾವಿಗೆ ಕಾರಣವಾದ ಉಗ್ರರ ದಾಳಿ ಭದ್ರತೆಯ ವೈಫಲ್ಯದಿಂದಾಗಿ ಸಂಭವಿಸಿಲ್ಲ.  ಇದೊಂದು ದೊಡ್ಡ  ‘ಅಪಘಾತ’ವಾಗಿದೆ. ಆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳಿಗೆ ಸೂಕ್ತ ಕ್ರಮಕೈಗೊಳ್ಳಲು ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಭದ್ರತಾ ಪಡೆಗಳು ಮುಂದೆ ಏನು ಮಾಡಬೇಕೋ ಅದನ್ನು ನೋಡಿಕೊಳ್ಳುತ್ತಾರೆ "ಎಂದು ಹೇಳಿಕೆ ನೀಡಿರುವ ವೀಡಿಯೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.

ಬಾಲಕೋಟ್ ದಾಳಿಯ ಬಗ್ಗೆ ಸಾಕ್ಷ್ಯ ಒದಗಿಸುವಂತೆ ವಿಪಕ್ಷದ ಹಲವು ನಾಯಕರು ಹೇಳಿಕೆ ನೀಡಿದ ಬೆನ್ನೆಲ್ಲೆ ಕಾಂಗ್ರೆಸ್ ನ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದರು.  ಧೈರ್ಯವಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಿ ಎಂದು  ಪ್ರಧಾನಿ ಮೋದಿಗೆ ದಿಗ್ವಿಜಯ್ ಸಿಂಗ್ ಸವಾಲು ಹಾಕಿದ್ದಾರೆ.

"ನಾನು ಪುಲ್ವಮಾ ದಾಳಿಯ ಬಗ್ಗೆ ಅಪಘಾತ ಎಂದಾಗ ಮೂವರು ಕೇಂದ್ರ ಸಚಿವರು ನನಗೆ  ಪಾಕಿಸ್ತಾನದ ಬೆಂಬಲಿಗ ಎಂಬ ಹಣೆಪಟ್ಟಿ ಕಟ್ಟಿದರು. ಆದರೆ ಇದೀಗ ಕೇಶವ್ ಪ್ರಸಾದ್ ನೀಡಿರುವ ಹೇಳಿಕೆಯ ವೀಡಿಯೋವನ್ನು ಆಲಿಸಿ. ಇದರ ಬಗ್ಗೆ  ಪ್ರಧಾನಿ ಮೋದಿ ಮತ್ತು ಅವರ ಸಚಿವ ಸಂಪುಟದ ಸದಸ್ಯರು  ಏನು ಹೇಳುತ್ತಾರೆ" ಎಂದು  ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.

“ಗುಪ್ತಚರ ಇಲಾಖೆಯ ವೈಫಲ್ಯದಿಂದಾಗಿ  ಪುಲ್ವಮಾದಲ್ಲಿ ದಾಳಿ ಸಂಭವಿಸಿರುವ ಹಿನ್ನೆಲೆಯಲ್ಲಿ  ಮೋದಿ ಏನು ಕ್ರಮ ಕೈಗೊಂಡಿದ್ದಾರೆ ? ಪುಲ್ವಮಾ ದಾಳಿಗೆ ಯಾರು ಹೊಣೆ ? ಮೋದಿ ಈ ದಾಳಿಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಿದ್ದಾರೋ ? ಈ ಬಗ್ಗೆ ಎನ್ ಎಸ್ ಎ, ಗುಪ್ತಚರ ಇಲಾಖೆ ಮತ್ತು  ರಾ ಮುಖ್ಯಸ್ಥರಲ್ಲಿ ಮೋದಿ ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೋ ‘’ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್  ಸ್ಪಷ್ಟನೆ ಬಯಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News