ಅಮಲಿನ ದೇಶಭಕ್ತಿಗಿಂತ ‘ದೇಶಪ್ರೇಮ’ ಮುಖ್ಯ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್
ಬೆಂಗಳೂರು, ಮಾ. 6: ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಅಮಲಿನ ‘ದೇಶಭಕ್ತಿ’ಗಿಂತ ‘ದೇಶಪ್ರೇಮ’ ಇಂದು ಅತ್ಯಗತ್ಯ. ಆದರೆ, ಜನರಲ್ಲಿ ಅಮಲಿನ ದೇಶಭಕ್ತಿ ತುಂಬಿ ಚುನಾವಣೆ ಗೆಲ್ಲುವ ಹುನ್ನಾರ ನಡೆದಿದ್ದು ದೇಶದಲ್ಲಿ ಯುದ್ಧೊನ್ಮಾದ ಸೃಷ್ಟಿಸಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ದೂರಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಮಾಧ್ಯಮ ಅಕಾಡಮಿಯಿಂದ ಎಸ್ಸಿ-ಎಸ್ಟಿ ಪತ್ರಕರ್ತರಿಗೆ ಐಪ್ಯಾಡ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧದ ದಾಳಿಯನ್ನೆ ಯುದ್ಧವೆಂದು ಬಿಂಬಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಯುದ್ಧ ನಡೆಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಏನಾಗಲಿದೆ ಎಂದು ಯಾರೊಬ್ಬರು ಆಲೋಚಿಸಿಲ್ಲ. ಚುನಾವಣೆಗಾಗಿ ದೇಶದಲ್ಲಿ ಯುದ್ಧೋನ್ಮಾದ ಸರಿಯಲ್ಲ್ಲ ಎಂದು ಆಕ್ಷೇಪಿಸಿದ ಅವರು, ಮೊದಲ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೃಷ್ಟಿಸಿದ ದೇಶಭಕ್ತಿ, ಸ್ವಾತಂತ್ರದ ಅಮಲಿನಂತೆ ಇಂದೂ ದೇಶಭಕ್ತಿ ಅಮಲನ್ನು ಸೃಷ್ಟಿಸಲಾಗುತ್ತಿದೆ ಎಂದು ಪ್ರಧಾನಿ ವಿರುದ್ಧ ಲೇವಡಿ ಮಾಡಿದರು.
ದಲಿತ ಸಂಪಾದಕರಿಲ್ಲ: ರಾಜ್ಯದಲ್ಲಿ ಹಲವು ದೊಡ್ಡ ದೊಡ್ಡ ಪತ್ರಿಕೆಗಳಿದ್ದರೂ ಒಂದು ಪತ್ರಿಕೆಯ ಸಂಪಾದಕನೂ ದಲಿತ ವ್ಯಕ್ತಿ ಇಲ್ಲ. ಆ ಸಮುದಾಯದವರಲ್ಲಿ ಬೌದ್ಧಿಕತೆ ಇಲ್ಲವೋ ಅಥವಾ ದಲಿತನೆಂಬ ಮೈಲಿಗೆಯೋ? ಎಂದು ವಿಶ್ವನಾಥ್ ಪ್ರಶ್ನಿಸಿದರು.
ಆಡಳಿತದ ಶಕ್ತಿಕೇಂದ್ರ ವಿಧಾನಸೌಧ ದಲ್ಲಾಳಿಗಳ ಕೇಂದ್ರವಾಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ವಿಧಾನಸೌಧದ ‘ಮಾಲ್’ ಆಗಿ ಪರಿವರ್ತನೆಯಾಗಿದೆ ಎಂದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಹಣವಿದೆ. ಆದರೂ, ಸೂಕ್ತ ಯೋಜನೆಗಳಿಲ್ಲ ಎಂದು ಟೀಕಿಸಿದರು.
ಪರಿಶಿಷ್ಟ ಪತ್ರಕರ್ತರು ಸರಕಾರದ ಅನುದಾನವನ್ನು ಜನರ ಕಲ್ಯಾಣಕ್ಕೆ ಸದ್ಬಳಕೆಯಾಗುವ ನಿಟ್ಟಿನಲ್ಲಿ ಸರಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಬೇಕು. ಜತೆಗೆ ಆಡಳಿತಸ್ಥರನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು ಎಂದು ವಿಶ್ವನಾಥ್ ಇದೇ ವೇಳೆ ಸಲಹೆ ನೀಡಿದರು.
ಕೊರತೆಗಳ ಬಗ್ಗೆ ಬೆಳಕು ಚೆಲ್ಲಿ: ಪತ್ರಕರ್ತರು, ರಾಜಕಾರಣಿಗಳು ಮತ್ತು ಅಪರಾಧ ಕೃತ್ಯಗಳ ವೈಭವಿಕರಣವನ್ನು ಬಿಟ್ಟು ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳು ಹಾಗೂ ಕೊರತೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಮಾಡಬೇಕು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಧ್ರುವನಾರಾಯಣ್ ತಿಳಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ಪರಿಶಿಷ್ಟ ಪತ್ರಕರ್ತರ ಸಂಖ್ಯೆ ಬಹಳ ಕಡಿಮೆ ಇದ್ದು, ಇದು ಮುಂಬರುವ ದಿನಗಳಲ್ಲಿ ಹೆಚ್ಚಾಗಬೇಕು. ಪತ್ರಕರ್ತರು ಆಳವಾದ ಅಧ್ಯಯನದ ಮೂಲಕ ಸಮಾಜದಲ್ಲಿನ ವಾಸ್ತವಾಂಶಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಧ್ರುವನಾರಾಯಣ್ ಹೇಳಿದರು.
ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಭೃಂಗೀಶ್, ಮಾಧ್ಯಮ ಅಕಾಡಮಿ ಅಧ್ಯಕ್ಷ ಸಿದ್ಧರಾಜು, ಕಾರ್ಯದರ್ಶಿ ರೂಪಾ, ಸದಸ್ಯರಾದ ಶಿವಕುಮಾರ್, ರವಿಕುಮಾರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.