ಕಾಂಗ್ರೆಸ್ ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾದ ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ಮಾ. 6: ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಉಮೇಶ್ ಜಾಧವ್ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಬುಧವಾರ ಉಪಾಹಾರ ಕೂಟದ ನೆಪದಲ್ಲಿ ಇಲ್ಲಿನ ಚಾಲುಕ್ಯ ವೃತ್ತದಲ್ಲಿನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿದ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್ ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಕ್ಷೇತ್ರದ ವಿಚಾರ ಚರ್ಚೆ: ಶಾಸಕರ ಮನವೊಲಿಕೆ ಏನೂ ಇಲ್ಲ. ರಮೇಶ್ ಬೆಳಗ್ಗೆ ಉಪಾಹಾರಕ್ಕೆ ಆಹ್ವಾನಿಸಿದ್ದರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ. ಯಾವುದೇ ಮಾತುಕತೆಯನ್ನೂ ನಡೆಸಿಲ್ಲ. ನಮ್ಮ ಮತ್ತು ಅವರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಕುಮಾರಸ್ವಾಮಿ ಇದೇ ವೇಳೆ ಸ್ಪಷ್ಟನೆ ನೀಡಿದರು.
ರಮೇಶ್ ಜಾರಕಿಹೊಳಿ, ನಾಗೇಂದ್ರ ಹಾಗೂ ಮಹೇಶ್ ಕುಮಟಳ್ಳಿ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಕ್ಷೇತ್ರದ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಿದ್ದೇವೆ. ಕ್ಷೇತ್ರಗಳಿಗೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಉಮೇಶ್ ಜಾಧವ್ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ. ರಮೇಶ್ ಸೇರಿದಂತೆ ಕಾಂಗ್ರೆಸ್‌ನ ಮೂವರು ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಜಾರಕಿಹೊಳಿಗೆ ಅಸಮಾಧಾನ ಇರುವುದು ನಿಜ. ಅದನ್ನು ‘ಕೈ’ ನಾಯಕರು ಬಗೆಹರಿಸಬೇಕು. ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ ಎಂದರು.
‘ಬಿಜೆಪಿಯ ಹಲವು ಮಂದಿ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ ಭೇಟಿಯಾಗಿದ್ದರು. ಅದಕ್ಕೆ ರಾಜಕೀಯ ಬೆರೆಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಿಶ್ಚಿತ. ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿದೆ’
-ಕುಮಾರಸ್ವಾಮಿ ಮುಖ್ಯಮಂತ್ರಿ
‘ನಮಗೆ ಅಸಮಾಧಾನವಿರುವುದು ನಿಜ. ಆದರೆ, ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಉಮೇಶ್ ಜಾಧವ್ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನನ್ನ ಅಸಮಾಧಾನದ ಬಗ್ಗೆ ಹೈಕಮಾಂಡ್‌ಗೆ ತಿಳಿಸಿದ್ದು, ಅವರಿಂದ ಸ್ಪಂದನೆ ಸಿಕ್ಕಿಲ್ಲ. ಏನೇ ಆದರೂ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವುದಿಲ್ಲ’
-ರಮೇಶ್ ಜಾರಕಿಹೊಳಿ, ಗೋಕಾಕ್ ಶಾಸಕ
‘ನನ್ನ ಸೋದರನನ್ನು ಬಿಜೆಪಿ ಲೋಕಸಭೆ ಅಭ್ಯರ್ಥಿ ಮಾಡುವ ವಿಚಾರದಲ್ಲಿ ನನ್ನ ಸೋದರ ಸ್ವತಂತ್ರರು. ಅವರ ತೀರ್ಮಾನ ನನಗೆ ಗೊತ್ತಿಲ್ಲ. ಅವರು ಪಕ್ಷ ಬಿಟ್ಟರೆ ನಾನು ಅವರ ಜತೆ ಇರುವುದಿಲ್ಲ. ನಾನು ಬಳ್ಳಾರಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನಗೆ ಟಿಕೆಟ್ ಕೊಡಲಿಲ್ಲ. ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ. ಅಸಮಾಧಾನವಿದೆ, ಅತೃಪ್ತಿ ಇಲ್ಲ. ಮುಖಂಡರ ಭೇಟಿ ಬಳಿಕ ಅಸಮಾಧಾನ ಶಮನವಾಗಿದೆ. ರಾಜೀನಾಮೆ ಪ್ರಶ್ನೆಯೇ ಇಲ್ಲ’
-ನಾಗೇಂದ್ರ, ಬಳ್ಳಾರಿ ಗ್ರಾಮಾಂತರ ಶಾಸಕ