ಕುಡಿಯುವ ನೀರಿನ ಯೋಜನೆ ಅರ್ಧಕ್ಕೆ ನಿಲ್ಲಿಸಬೇಡಿ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-03-06 14:41 GMT

ಬೆಂಗಳೂರು, ಮಾ. 6: ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಯಾರೇ ಅಡ್ಡಪಡಿಸಿದರೂ, ಯೋಜನೆ ಅರ್ಧಕ್ಕೆ ನಿಲ್ಲಿಸದೇ ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಮುನ್ನಡೆಯಿರಿ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಬುಧವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬೇಗೂರು ವಾರ್ಡ್ ವ್ಯಾಪ್ತಿಯ ಉತ್ತರಹಳ್ಳಿ, ಯಲಚೇನಹಳ್ಳಿ, ತಿಪ್ಪಸಂದ್ರ, ಗೊಟ್ಟಿಗೆರೆಯಲ್ಲಿ ಕುಡಿಯುವ ನೀರು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಉತ್ತರಹಳ್ಳಿ ಭಾಗದಲ್ಲಿ 24 ದಶಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಾಗಾರ ನಿರ್ಮಾಣವಾಗಿ ಎರಡು ವರ್ಷ ಪೂರೈಸಿದ್ದರೂ ಉದ್ಘಾಟನೆ ಮಾತ್ರ ನೆರವೇರಿಲ್ಲ. ಕುಡಿಯುವ ನೀರಿನ ಯೋಜನೆ ಅರ್ಧಕ್ಕೆ ಸ್ಥಗಿತಗೊಂಡರೆ ಜನರಿಗೆ ತೊಂದರೆಯಾಗುತ್ತದೆ. ಅಲ್ಲದೆ ಈ ಯೋಜನೆ ಅನುಷ್ಠಾನಕ್ಕೆ ಸಾಲ ಪಡೆದಿದ್ದು, ಅದರ ಬಡ್ಡಿಯೂ ಹೆಚ್ಚಾಗಲಿದೆ. ಇದರ ಹೊರೆ ಸರಕಾರದ ಮೇಲೆಯೇ ಬೀಳುತ್ತದೆ. ಹೀಗಾಗಿ ಇಂಥ ಯೋಜನೆ ತಡೆಯೊಡ್ಡುವವರನ್ನು ನಿರ್ಲಕ್ಷಿಸಿ ಎಂದರು.

ಉತ್ತರಹಳ್ಳಿ ಭಾಗದ 17 ಹಳ್ಳಿಗಳಿಗೆ ನೀರು ಪೂರೈಕೆ ಆಗಲಿದೆ. ಇದಕ್ಕಾಗಿ 15 ಸಾವಿರ ಸಂಪರ್ಕ ನೀಡಲಾಗಿದೆ ಎಂದ ಅವರು, ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದು, ಇಲ್ಲಿನ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕಾವೇರಿ 5ನೆ ಹಂತಕ್ಕೆ ತಲುಪಿದ್ದೇವೆ. ಇದು ಕೊನೆಯ ಹಂತ. ಹೀಗಾಗಿ ಎತ್ತಿನಹೊಳೆ, ಹೇಮಾವತಿ, ಇತರೆ ಮಾರ್ಗಗಳಿಂದ ನೀರು ತರುವ ಯೋಜನೆ ಹಾಕಿಕೊಳ್ಳಲಾಗಿದೆ. ಜನರು ಸರಕಾರದೊಂದಿಗೆ ಸಹಕಾರ ನೀಡಬೇಕು. ನೀರು ಪೋಲಾಗುವುದನ್ನು ನಿಲ್ಲಸಬೇಕು. ಮೊದಲು ಶೇ.49ರಷ್ಟು ನೀರು ಪೋಲಾಗುತ್ತಿತ್ತು. ಈ ಪ್ರಮಾಣ ಶೇ.37ಕ್ಕೆ ಇಳಿದಿದೆ. ಈ ಪ್ರಮಾಣ ಇನ್ನಷ್ಟು ಕಡಿಮೆಯಾಗಬೇಕು. ಕೆಲವರು ಕುಡಿಯುವ ನೀರನ್ನೆ ಇತರೆ ಕೆಲಸಗಳಿಗೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಲೇ ನೀರಿನ ಪೋಲು ಹೆಚ್ಚಾಗಿದೆ. ಹೀಗಾಗಿ ಇತರೆ ಬಳಕೆಗೆ ಶುದ್ದೀಕರಿಸಿದ ನೀರನ್ನು ಮತ್ತೊಂದು ಪೈಪ್ ಮೂಲಕ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ ಎಂದರು.

‘ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ರೀತಿಯ ಮಾಹಿತಿ ನೀಡದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯೋಜನೆಗಳ ಉದ್ಘಾಟನೆ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿರಬೇಕು. ಕೋಣನಕುಂಟೆ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುವುದು’

-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News