ಸಾಂಪ್ರದಾಯಿಕ ನೀರಾವರಿ ಪದ್ಧತಿಯನ್ನು ಸೂಕ್ಷ್ಮ ನೀರಾವರಿ ವ್ಯವಸ್ಥೆಗೆ ಪರಿವರ್ತಿಸಲು ಕ್ರಮ: ಸಚಿವ ಶಿವಶಂಕರರೆಡ್ಡಿ
ಬೆಂಗಳೂರು, ಮಾ.6: ರಾಜ್ಯದಲ್ಲಿ ಬೇಕಾಬಿಟ್ಟಿ ನೀರು ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾಂಪ್ರದಾಯಿಕ ನೀರಾವರಿ ಪದ್ಧತಿಯನ್ನು ಸೂಕ್ಷ್ಮ ನೀರಾವರಿ ವ್ಯವಸ್ಥೆಗೆ ಪರಿವರ್ತನೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದ್ದಾರೆ.
ಬುಧವಾರ ನಗರದ ಎಫ್‌ಕೆಸಿಸಿಐನಲ್ಲಿ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಸ್ಮಾರ್ಟ್ ವಾಟರ್ ಟೆಕ್ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕದಲ್ಲಿ ನೀರು ಬಳಕೆ ಮಾಡುವ ಸಲುವಾಗಿ ಅಗತ್ಯವಾದ ಕ್ರಮಗಳಿಲ್ಲ. ಅಲ್ಲದೆ, ರೈತರಿಗೆ ಎಷ್ಟು ನೀರು ಬಳಕೆ ಮಾಡಬೇಕು ಎಂಬ ಅಂಶದ ಬಗ್ಗೆ ಜಾಗೃತಿಯಿಲ್ಲ. ಹೀಗಾಗಿ, ನೀರಾವರಿ ಪದ್ಧತಿಯನ್ನು ಸೂಕ್ಷ್ಮ ವ್ಯವಸ್ಥೆಗೆ ಒಳಪಡಿಸಿ ರೈತರಿಗೆ, ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಕೆ ಸಂಬಂಧ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ನಾನೂ ಮತ್ತು ನೀರಾವರಿ ಸಚಿವರು ಇಸ್ರೇಲ್‌ಗೆ ಭೇಟಿ ನೀಡಿದ್ದೆವು. ಇಸ್ರೇಲ್‌ನಲ್ಲಿ ನೀರಿನ ಪ್ರತಿಯೊಂದು ಹನಿಯನ್ನೂ ಜಾಗೃತೆಯಿಂದ ಕಾಪಾಡುತ್ತಾರೆ. ಆದರೆ, ಭಾರತೀಯರಿಗೆ ಅದರ ಬಗ್ಗೆ ತಿಳಿದಿಲ್ಲ ಎಂದ ಅವರು, ಇಸ್ರೇಲ್ ಮಾದರಿಯನ್ನು ಸಣ್ಣ ರೈತರಿಗೆ ತಲುಪಿಸುವುದು ದೊಡ್ಡ ಸವಾಲಾಗಿದೆ. ಈ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದರು.
ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಕೃಷಿಕರಿಂದು ಸ್ವಾಭಿಮಾನದ ಬದುಕಿಗಾಗಿ ಭೂಮಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಅದನ್ನು ತಡೆಯಲು ಬೇಕಾದ ಕ್ರಮಗಳ ಕುರಿತು, ಆಧುನಿಕ ತಂತ್ರಜ್ಞಾನದ ಅಳವಡಿಕೆ ಕುರಿತು ಚರ್ಚೆಗಳು ನಡೆಯಬೇಕಿದೆ ಎಂದು ಹೇಳಿದರು.
ನಗರ ಪ್ರದೇಶದಲ್ಲಿ ದುಡಿಯುತ್ತಿರುವರಿಗೆ ನೀಡುವ ಗೌರವ ಹಳ್ಳಿಯಲ್ಲಿ ಕೃಷಿ ಮಾಡುವವರಿಗೆ ನೀಡುತ್ತಿಲ್ಲ. ಅಲ್ಲದೆ, ಕೃಷಿಕರು ಬಯಸುವ ಶಿಕ್ಷಣ, ಆರೋಗ್ಯದ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ, ಹತ್ತಾರು ಎಕರೆ ಭೂಮಿಯಿದ್ದರೂ ನಗರ ಪ್ರದೇಶಕ್ಕೆ ವಲಸೆ ಬರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಾವಿರಾರು ಅಡಿಗಳಿಂದ ನೀರು ತೆಗೆಯುತ್ತಿದ್ದಾರೆ. ಮಂಡ್ಯ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರಿದ್ದರೂ, ಅದನ್ನು ಬಳಸುವ ವಿಧಾನ ಗೊತ್ತಿಲ್ಲ. ಇನ್ನು ನೀರಿಲ್ಲದ ಜಿಲ್ಲೆಗಳಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಆದರೆ, ನೀರಿರುವ ಜಿಲ್ಲೆಗಳಲ್ಲಿಯೇ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ಎಲ್.ವಿ.ಮುರಳಿಕೃಷ್ಣ ರೆಡ್ಡಿ, ಐಟಿಸಿಎನ ಅಗ್ರಿಟೆಕ್ ಸಲಹಾ ಮಂಡಳಿ ಸದಸ್ಯ ಡಾ.ಡಿ.ಎಲ್.ಮಹೇಶ್ವರ್, ಎಫ್‌ಕೆಸಿಸಿಐನ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರೈತರ ವಲಸೆ ತಡೆಯಲು ಅಗತ್ಯವಾದ ವಿಧಾನಗಳ ಕುರಿತು ಚರ್ಚೆ ನಡೆಯಬೇಕು. ಸರಕಾರಕ್ಕೆ ಸಲಹೆ ನೀಡಿದರೆ, ಅದನ್ನು ಅನುಸರಿಸಲು ಕ್ರಮ ಕೈಗೊಳ್ಳಲಾಗುವುದು, ಪ್ರತಿವರ್ಷ ಒಬ್ಬ ರೈತರ ಮೇಲೆ ಐದಾರು ಲಕ್ಷದಷ್ಟು ಹಣ ವ್ಯಯ ಮಾಡುತ್ತೇವೆ. ಆದರೂ, ಅವರು ಸ್ವಾಭಿಮಾನದಿಂದ ಬದುಕಲು ಸಾಧ್ಯವಿದೆ ಎಂದು ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿಲ್ಲ.
-ಡಿ.ಕೆ.ಶಿವಕುಮಾರ್, ಜಲ ಸಂಪನ್ಮೂಲ ಸಚಿವ