ರೈತರ ಸಾಲ ಮನ್ನಾ ಬಗ್ಗೆ ಪ್ರಧಾನಿ ಹುಡುಗಾಟಿಕೆಯ ಮಾತುಗಳನ್ನಾಡುವುದು ಬೇಡ: ಸಿಎಂ ಕುಮಾರಸ್ವಾಮಿ

Update: 2019-03-06 15:05 GMT

ಬೆಂಗಳೂರು, ಮಾ.6: ರಾಜ್ಯದಲ್ಲಿ ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರಮೋದಿ ಹುಡುಗಾಟಿಕೆಯ ಮಾತುಗಳನ್ನಾಡುವುದು ಬೇಡ. ಅವರಿಗೆ ಮಾಹಿತಿಯ ಕೊರತೆಯಿದ್ದರೆ ನಮ್ಮ ಅಧಿಕಾರಿಗಳ ಮೂಲಕ ಅಗತ್ಯ ಮಾಹಿತಿ ಒದಗಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯ ಭಾಷಣವನ್ನು ಗಮನಿಸಿದರೆ ನಮ್ಮ ರಾಜ್ಯದ ಬಗ್ಗೆ ಅವರಿಗೆ ಭಯವಿರುವುದು ಕಂಡು ಬರುತ್ತದೆ. ನನ್ನನ್ನು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಎಂದಿದ್ದಾರೆ. ನಾನು ನೀಡುತ್ತಿರುವ ಆಡಳಿತದಲ್ಲಿ ಹಲವಾರು ಅಭಿವೃದ್ಧಿ ಪರವಾದ ತೀರ್ಮಾನಗಳನ್ನು ಕೈಗೊಂಡಿದ್ದೇನೆ ಎಂದರು.

ಪ್ರಧಾನಮಂತ್ರಿಗೆ ಎಲ್ಲ ಮಾಹಿತಿಗಳು ಹೋಗುತ್ತವೆ. ಅವರ ಅನಿಸಿಕೆಯಂತೆ ನಾನು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಾಗಿದ್ದರೆ, ಇಂತಹ ಪರಿಸ್ಥಿತಿಯಲ್ಲೂ ನಾನು ಮಾಡಿರುವ ಸಾಧನೆಗಳ ಬಗ್ಗೆ ಅವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾಡಿನ ರಕ್ಷಣೆಯ ವಿಚಾರದಲ್ಲಿ ನನ್ನ ಕೆಲಸ ನಾನು ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಈಗಾಗಲೇ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ 7 ಲಕ್ಷ ರೈತರು, ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ 6.40 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ. ಸಾಲ ಮನ್ನಾ ಮಾಡಲು 11,170 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಪ್ರಧಾನಿಯಾಗಿ ನರೇಂದ್ರಮೋದಿ ನೀಡುವ ಹೇಳಿಕೆಗಳನ್ನು ನೋಡಿ, ಜನತೆ ಎಚ್ಚರ ವಹಿಸಬೇಕು. ಈ ರೀತಿ ಸುಳ್ಳು ಹೇಳುವ ಪ್ರಧಾನಿ ದೇಶದಲ್ಲಿ ಮತ್ತೊಬ್ಬರು ಬರಲು ಸಾಧ್ಯವಿಲ್ಲ. ರೈತರಿಗೆ ನೀಡಲು ಮೋದಿ ಬಳಿ ದುಡ್ಡಿಲ್ಲ. ನರೇಗಾ ಯೋಜನೆಯ ದುಡ್ಡನ್ನು ತೆಗೆದುಕೊಂಡು ರೈತರಿಗೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ನರೇಗಾ ಯೋಜನೆಯಡಿ ರಾಜ್ಯದ ಕೂಲಿ ಕಾರ್ಮಿಕರಿಗೆ ಎರಡು ಸಾವಿರ ಕೋಟಿ ರೂ.ಗಳು ಕೇಂದ್ರ ಸರಕಾರದಿಂದ ಬರಬೇಕು. ಆ ಹಣ ಬಿಡುಗಡೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯ ಸರಕಾರದಿಂದಲೇ ಕೂಲಿ ಹಣ ನೀಡುತ್ತಿದ್ದೇವೆ. ನಮ್ಮ ಕಾರ್ಯಕ್ರಮಗಳು ಮೋದಿ ತರಹ ಅಲ್ಲ. ಅವರ ಸರಕಾರದಲ್ಲಿರುವ ಆರ್ಥಿಕ ದಿವಾಳಿತನ ನಮ್ಮ ರಾಜ್ಯದಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News