ಟ್ಯಾಕ್ಸಿ ಚಾಲಕರು ಬೆಂಗಳೂರಿನ ಸಾಂಸ್ಕೃತಿಕ ರಾಯಭಾರಿಗಳು: ಸಚಿವ ಪ್ರಿಯಾಂಕ್ ಖರ್ಗೆ

Update: 2019-03-06 15:59 GMT

ಬೆಂಗಳೂರು, ಮಾ. 6: ಟ್ಯಾಕ್ಸಿ ಚಲಾಯಿಸುವವರು ಚಾಲಕರಷ್ಟೇ ಅಲ್ಲ. ಅವರು ಬೆಂಗಳೂರು ನಗರದ ರಾಯಭಾರಿಗಳಿದ್ದಂತೆ. ಅವರ ನಡವಳಿಕೆಯನ್ನು ಆಧರಿಸಿ ಬೆಂಗಳೂರು ನಗರದ ವರ್ಚಸ್ಸು ವೃದ್ಧಿಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬುಧವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಐರಾವತ ಮತ್ತು ಉನ್ನತಿ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಐರಾವತ ಯೋಜನೆಯಲ್ಲಿ ಫಲಾನುಭವಿಗೆ 5 ಲಕ್ಷ ರೂ. ನೆರವು ನೀಡಲಾಗುತ್ತದೆ. ಟ್ಯಾಕ್ಸಿ ಖರೀದಿಸಲು ಸಾಲ ನೀಡಿದ್ದು, ಆ ಮೊತ್ತವನ್ನು ಪ್ರತಿ ತಿಂಗಳು ಕಂತು ಪಾವತಿಸಬೇಕಿತ್ತು. ಈಗ ಕಂತು ಪಾವತಿಸುವಂತಿಲ್ಲ. ಆ ಹಣವನ್ನು ಫಲಾನುಭವಿಗಳ ತಮ್ಮ ಜೀವನ ಮಟ್ಟ ಸುಧಾರಣೆಗೆ, ಆಸ್ತಿ ಮಾಡಿಕೊಳ್ಳಲು ಬಳಸಿಕೊಳ್ಳಬಹುದು ಎಂದು ಹೇಳಿದರು.

‘ಐರಾವತ’ ಯೋಜನೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಬದುಕು ಬದಲಾಯಿಸುವ ಯೋಜನೆಯಷ್ಟೆ ಅಲ್ಲ, ನಗರದ ವರ್ಚಸ್ಸು ಹೆಚ್ಚಾಗಲು ನೆರವಾಗುತ್ತದೆ. ಬೆಂಗಳೂರು ನಗರದ ಕೀರ್ತಿ ಹೆಚ್ಚಿಸುವ ಜವಾಬ್ದಾರಿಯೂ ನಿಮ್ಮ ಕೈಯಲ್ಲಿದೆ. ದೇಶ-ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಜನ ಬೆಂಗಳೂರಿಗೆ ಬರುತ್ತಾರೆ. ಟ್ಯಾಕ್ಸಿ ಚಾಲಕರು ಅವರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿದರೆ ಕರ್ನಾಟಕದ ಜನ ಒಳ್ಳೆಯವರು, ಸುಸಂಸ್ಕೃತರು ಎಂಬ ಹೆಗ್ಗಳಿಕೆ ಹೆಚ್ಚಾಗುತ್ತದೆ. ಹೀಗಾಗಿ ಟ್ಯಾಕ್ಸಿ ಓಡಿಸುವವರು ಚಾಲಕರಷ್ಟೇ ಅಲ್ಲ ನಮ್ಮ ನಗರಗಳ ಸಾಂಸ್ಕೃತಿಕ ರಾಯಬಾರಿಗಳು ಎಂದು ಶ್ಲಾಘಿಸಿದರು.

‘ಐರಾವತ’ ಮೊದಲ ಹಂತದ ಯೋಜನೆಗೆ ಚಾಲನೆ ನೀಡಲಾಗಿದೆ. 75 ಫಲಾನುಭವಿಗಳಿಗೆ ಕಾರು ವಿತರಿಸಲಾಗಿದೆ. ಈ ಯೋಜನೆ ಜಾರಿಯಾಗುತ್ತದೋ, ಇಲ್ಲವೊ ಎಂಬ ಅನುಮಾನ ಬಹಳಷ್ಟು ಜನರಲ್ಲಿ ಇತ್ತು. ಕೊನೆಗೂ ಯೋಜನೆ ಅನುಷ್ಠಾನವಾಗಿದೆ. ಜನಪರ ಯೋಜನೆ ಅನುಷ್ಠಾನಗೊಳ್ಳುತ್ತಿರುವುದಕ್ಕೆ ಇದು ನಿದರ್ಶನ ಎಂದರು.

ಕಾರು ಖರೀದಿಗೆ ಮೊದಲಿನಿಂದಲೂ ಇಲಾಖೆಯಲ್ಲಿ ಯೋಜನೆ ಜಾರಿಯಲ್ಲಿತ್ತು. ಆದರೆ, ಖಾಸಗಿ ಕಂಪೆನಿಗಳು ಇಲಾಖೆ ಜೊತೆ ಕೈಜೋಡಿಸಲು ಮುಂದೆ ಬರುತ್ತಿರಲಿಲ್ಲ. ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಗಳು ಇಲಾಖೆಯ ಜೊತೆ ಸಹಭಾಗಿತ್ವಕ್ಕೆ ಹಿಂದೇಟು ಹಾಕುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಖಾಸಗಿ ಸಂಸ್ಥೆಗಳು ಇಲಾಖೆ ಜೊತೆ ಕೈಜೊಡಿಸಲು ಉತ್ಸಾಹ ತೊರಿಸುತ್ತಿವೆ. ಉಬರ್, ಓಲಾದಂತಹ ಸಂಸ್ಥೆಗಳು ಮುಂದೆ ಬಂದು ಫಲಾನುಭವಿಗಳಿಗೆ ತರಬೇತಿ ನೀಡುತ್ತಿವೆ. ಐರಾವತ ದೇಶದಲ್ಲೆ ಹೊಸ ಕಲ್ಪನೆಯ ಮೊಟ್ಟ ಮೊದಲ ಯೋಜನೆ. ಇದರಿಂದ ನಿರುದ್ಯೋಗ ನಿವಾರಣೆ ಆಗುವುದಲ್ಲದೆ, ಸಮುದಾಯದ ಜೀವನ ಸುಧಾರಣೆಯಾಗಲಿದೆ ಎಂದರು.

ಸರಕಾರದ ಸೌಲಭ್ಯಗಳನ್ನು ಕಟ್ಟಕಡೆಯ ಮನುಷ್ಯನಿಗೆ ಸಿಕ್ಕಾಗ ಮಾತ್ರ ಯಶಸ್ಸು ಸಾಧ್ಯ ಎಂಬ ಕಲ್ಪನೆ ಮೈತ್ರಿ ಸರಕಾರ ಕೆಲಸ ಮಾಡುತ್ತಿದೆ ಎಂದ ಅವರು, ಪರಿಶಿಷ್ಟರನ್ನು ಉದ್ಯಮಶೀಲರನ್ನಾಗಿಸಲು ಸಮಾಜ ಕಲ್ಯಾಣ ಇಲಾಖೆ ಮೊದಲ ಬಾರಿಗೆ ‘ಉನ್ನತಿ’ ಯೋಜನೆ ರೂಪಿಸಿದೆ. ಇದು ದೇಶದಲ್ಲೆ ಮೊದಲ ಪ್ರಯತ್ನ. ಕರ್ನಾಟಕ ಮಾಹಿತಿ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳ ರಾಜಧಾನಿ ಎಂದರು.

ಈ ಹಿಂದೆ ಐಟಿ-ಬಿಟಿ ಇಲಾಖೆಯಿಂದ 400 ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸುತ್ತಿದ್ದು, ಮೊದಲ ಹಂತದಲ್ಲಿ 21 ಸ್ಟಾರ್ಟ್‌ಅಪ್‌ಗಳಿಗೆ 3.74 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು

ಶಾಸಕರಾದ ಬಸವರಾಜ್ ದದ್ದಲ್, ಅಬ್ಬಯ್ಯ ಪ್ರಸಾದ್, ಪ್ರತಾಪ್ ಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರ ಇ.ವೆಂಕಟಯ್ಯ, ಆಯುಕ್ತ ಕುಮಾರ್ ನಾಯಕ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಾಘವೇಂದ್ರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News