ಸ್ಮಾರ್ಟ್ ಸಿಟಿ ಯೋಜನೆಯ ಟೆಂಡರ್‌ನಲ್ಲಿ ಭ್ರಷ್ಟಾಚಾರ: ಎನ್.ಆರ್.ರಮೇಶ್ ಆರೋಪ

Update: 2019-03-06 16:09 GMT

ಬೆಂಗಳೂರು, ಮಾ.6: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯ 260 ಕೋಟಿ ರೂ. ಅನುದಾನ ದುರುಪಯೋಗವಾಗಿದ್ದು, ಈ ಕುರಿತು ನೀಡಲಾಗಿರುವ ಟೆಂಡರ್ ರದ್ದು ಮಾಡಿ ಹೊಸದಾಗಿ ಟೆಂಡರ್ ಕರೆಯಬೇಕು ಹಾಗೂ ಈ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿಯ ಮಾಜಿ ಕಾರ್ಪೊರೇಟರ್ ಎನ್.ಆರ್.ರಮೇಶ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆಗೆ ನಗರಗಳನ್ನು ಆಯ್ಕೆ ಮಾಡುವಾಗ 10 ನಿಯಮಾವಳಿಗಳನ್ನು ತಿಳಿಸಲಾಗಿರುತ್ತದೆ. ಆದರೆ, ಈ ನಿಯಮಾವಳಿಗಳಲ್ಲಿ 9 ನಿಯಮಾವಳಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ಆರೋಪ ಮಾಡಿದರು. ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಗಾಂಧಿನಗರ, ಮಲ್ಲೇಶ್ವರ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ, ಶಿವಾಜಿನಗರ, ಶಾಂತಿನಗರ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಈಗಾಗಲೇ ಅಭಿವೃದ್ಧಿಯಾಗಿರುವ ಪ್ರದೇಶಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಿಕೊಂಡು 260 ಕೋಟಿ ರೂ.ಗಳಲ್ಲಿ 235 ಕೋಟಿ ರೂ.ಗಳನ್ನು ಈ ಎರಡು ಕ್ಷೇತ್ರಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದರು.

ಸ್ಮಾಟ್ ಸಿಟಿ ಯೋಜನೆಗಾಗಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ವೇಳೆ ಸ್ಥಾಪನೆ ಮಾಡಿ, ಇದಕ್ಕೆ ಬಿಬಿಎಂಪಿ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡಲಾಯಿತು. ಆ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಅತೀಕ್ ಬೆಂಗಳೂರು ಸ್ಮಾರ್ಟ್ ಸಿಟಿ ಕ್ರಿಯಾಯೋಜನೆಯನ್ನು ತಯಾರಿ ಮಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿನ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಸ್ಮಾಟ್ ಸಿಟಿ ಅನುದಾನ ಕೇವಲ ಎರಡು ಕ್ಷೇತ್ರಗಳಿಗೆ ಹರಿದುಹೋಗುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಎರಡೂ ಕ್ಷೇತ್ರಗಳಿಗೆ 1800 ಕೋಟಿ ರೂ.ಗಿಂತ ಹೆಚ್ಚು ಅನುದಾನ ನೀಡಿದ್ದಾರೆ. ಹೀಗಿದ್ದರೂ ಇದೇ ಕ್ಷೇತ್ರಗಳಿಗೆ ಸ್ಮಾರ್ಟ್ ಸಿಟಿ ಅನುದಾನ ನೀಡಿರುವುದು ಏಕೆ ಎಂದು ಪ್ರಶ್ನೆ ಮಾಡಿದ ಅವರು, ಸ್ಮಾರ್ಟ್ ಸಿಟಿ ಅನುದಾನ ದುರುಪಯೋಗ ಮಾಡಿಕೊಂಡಿರುವ ಕುರಿತು ತನಿಖೆ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News