ಪ್ರಧಾನಿ ಮೋದಿ ಮೊದಲು ನರೇಗಾ ಕೂಲಿ ನೀಡಲಿ: ಎಚ್.ಡಿ ಕುಮಾರಸ್ವಾಮಿ

Update: 2019-03-06 16:16 GMT

ಬೆಂಗಳೂರು, ಮಾ.6: ಪ್ರಧಾನಿ ನರೇಂದ್ರ ಮೋದಿ ‘ಕಿಸಾನ್ ಸಮ್ಮಾನ್ ನಿಧಿ’ ಅಡಿ 6 ಸಾವಿರ ರೂ. ಹಣ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಇದಕ್ಕೂ ಮೊದಲು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹಣ ನೀಡಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬುಧವಾರ ಕೃಷಿ ಇಲಾಖೆಯು ನಗರದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ, ‘ಕೃಷಿ ಪಂಡಿತ’ ಹಾಗೂ ‘ಕೃಷಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ರೈತರಿಗೆ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು.

ನಾಲ್ಕೂವರೆ ವರ್ಷ ರೈತರನ್ನು ಮರೆತಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಕಾರಣಕ್ಕಾಗಿ ಏಕಾಏಕಿ ರೈತರನ್ನು ನೆನೆದು ‘ಕಿಸಾನ್ ಸಮ್ಮಾನ್ ನಿಧಿ’ ಅಡಿ 6 ಸಾವಿರ ರೂ. ಹಣ ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ 24,000 ಕೋಟಿ ರೂ. ಕೂಲಿ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ನರೇಂದ್ರ ಮೋದಿ 2 ಸಾವಿರ ಕೋಟಿ ರೂ. ನೀಡಿದರೆ ನಾವು 16 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ. ಜತೆಗೆ 40 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇವೆ. ಆದರೆ, ನರೇಂದ್ರ ಮೋದಿ 70 ವರ್ಷದಲ್ಲಿ ಆಗದಿರುವುದನ್ನು 60 ತಿಂಗಳಲ್ಲಿ ಎಲ್ಲ ಮಾಡಿ ಮುಗಿಸಿದ್ದೇನೆ ಎಂದು ಭಾಷಣ ಮಾತ್ರ ಚೆನ್ನಾಗಿ ಮಾಡುತ್ತಾರೆ. 60 ತಿಂಗಳಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದು ಹೇಳಿದರು.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ 47 ಲಕ್ಷ ರೈತರಿಗೆ 2098 ಕೋಟಿ ರೂ. ಹಣ ಬರಲಿದೆ. ಆದರೆ, ನಾವು ರಾಜ್ಯದ ಹಾಲು ಉತ್ಪಾದಕರಿಗೆ ರಾಜ್ಯ ಸರಕಾರ ಪ್ರೋತ್ಸಾಹದ ರೂಪದಲ್ಲೇ 2,500 ಕೋಟಿ ರೂ. ನೀಡುತ್ತಿದ್ದೇವೆ. ಜತೆಗೆ ಉಚಿತ ವಿದ್ಯುತ್‌ಗೆ 11,500 ಕೋಟಿ ರು. ಸಬ್ಸಿಡಿ ನೀಡುತ್ತೇವೆ ಎಂದು ಕುಮಾರಸ್ವಾಮಿ ನುಡಿದರು.

ಕೃಷಿ ಪಂಡಿತ ಪ್ರಶಸ್ತಿ: ಮುಹಮ್ಮದ್ ಗುಲಾಮ್ ಅಹ್ಮದ್ ಖಾದ್ರಿ(ಬೀದರ್), ದಯಾನಂದ ಜಗದೀಶ ಅಪ್ಪಯ್ಯನವರ ಮಠ(ಬೈಲಹೊಂಗಲ, ಬೆಳಗಾವಿ), ಸಣ್ಣಯಮನಪ್ಪ ಭೀಮಪ್ಪರಾಜಾಪುರೆ(ಗೋಕಾಕ್, ಬೆಳಗಾವಿ), ಎಂ.ರಾಮಯ್ಯ(ಶಿಡ್ಲಘಟ್ಟ, ಚಿಕ್ಕಬಳ್ಳಾಪುರ) ಮಂಜನಾಯ್ಕ(ಚನ್ನಗಿರಿ, ದಾವಣಗೆರೆ), ಶ್ರೀಕಾಂತ ಕುಂಬಾರ(ಮುಧೋಳ, ಬಾಗಲಕೋಟೆ), ಲಕ್ಷ್ಮಣ ಈಶ್ವರ ಪಸಾರೆ(ಚಿಕ್ಕೋಡಿ, ಬೆಳಗಾವಿ).

ಕೃಷಿ ಪ್ರಶಸ್ತಿ: ಕೆ.ರಾಂಬಾಬು(ಬಳ್ಳಾರಿ), ಹನುಮಂತಯ್ಯ(ಕುಣಿಗಲ್, ತುಮಕೂರು), ಕಲ್ಮೇಶ್ ರಾಯಗೊಂಡಪ್ಪ (ಅಥಣಿ, ಬೆಳಗಾವಿ), ಈರಯ್ಯ ಸಂಗಯ್ಯ ಪೂಜಾರಿ (ಅಥಣಿ, ಬೆಳಗಾವಿ), ಶ್ರೀಮಂತ ತಿಪ್ಪಣ್ಣ ಅಕ್ಕೋಳೆ(ರಾಯಭಾಗ, ಬೆಳಗಾವಿ), ಶರಣಪ್ಪ ಮಲಕಪ್ಪ ಯಂಕಂಚಿ(ಸಿಂದಗಿ, ವಿಜಯಪುರ), ಮಹದೇವಪ್ಪ ಬಸಪ್ಪ ಬಾಳಿಕಾಯಿ (ಕಲಘಟಗಿ, ಧಾರವಾಡ), ಟಿ.ಶಶಿಧರ್ (ಕೆ.ಆರ್.ನಗರ, ಮೈಸೂರು), ಶೋಭ (ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ), ವೀರಪ್ಪ ಶ್ರೀಶೈಲ ಗದಗ (ಬೈಲಹೊಂಗಲ, ಬೆಳಗಾವಿ), ಟಿ.ನಾಗರಾಜಪ್ಪ (ಹೊನ್ನಾಳಿ, ದಾವಣಗೆರೆ), ಜಯಶ್ರೀ (ಜಮಖಂಡಿ, ಬಾಗಲಕೋಟೆ), ಗಂಗಾಧರಪ್ಪ (ಗೌರಿಬಿದನೂರು, ಚಿಕ್ಕಬಳ್ಳಾಪುರ), ಬಾವುರಾಜ ರಾಯಗೊಂಡಪ್ಪ ಬಸರಗಿ(ಅಥಣಿ, ಬೆಳಗಾವಿ).

ಕಾರ್ಯಕ್ರದಮದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ, ಸಚಿವರಾದ ಸಾ.ರಾ. ಮಹೇಶ್, ರಹೀಮ್ ಖಾನ್, ಪಿ.ಟಿ. ಪರಮೇಶ್ವರನಾಯಕ್, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿವಿ ಕುಲಪತಿಗಳು ಸೇರಿದಂತೆ ಪ್ರಮುಖರಿದ್ದರು.

ಊಟ ಇಲ್ಲ..!

ಕಾರ್ಯಕ್ರಮದಲ್ಲಿ ರೈತರಿಗೆ ಸೂಕ್ತ ಊಟದ ವ್ಯವಸ್ಥೆ ಮಾಡಿರಲಿಲ್ಲ. ಕೊನೆಯಲ್ಲಿ ಕೆಲವು ರೈತರಿಗೆ ಊಟ ಸಿಗದ ಹಿನ್ನೆಲೆಯಲ್ಲಿ ರೈತರು ಆಯೋಜಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಾತ್ರೆ ಬಿಸಾಡಿ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News