ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಮುಸ್ಲಿಂ ಕುಟುಂಬಕ್ಕೆ ಆಪದ್ಬಾಂಧವನಾದ ಕಾಶ್ಮೀರಿ ಪಂಡಿತ

Update: 2019-03-06 17:10 GMT

ಗತಕಾಲದ ಬಗ್ಗೆ ನೆನಪಿಸಿಕೊಳ್ಳುವಾಗ 68 ವರ್ಷದ ರಝಾ ಬೇಗಂರ ಕಣ್ಣೀರು ಕಟ್ಟೆಯೊಡೆದಿತ್ತು. ತನ್ನ ಜೀವನವನ್ನಿಡೀ ಆಕೆ ಬಡತನದಲ್ಲೇ ಕಳೆದವರು. ಪತಿ ಮೌಝುದ್ದೀನ್ ಭಟ್ ಅಂಗವಿಕಲರಾಗಿದ್ದು, ಕುಟುಂಬದ ಹೊಟ್ಟೆ ಹೊರೆಯಲು ಗಳಿಸುವುದು ಕೂಡಾ ಕಷ್ಟವಾಗಿತ್ತು.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಪತ್‍ನಾರ್ ಗ್ರಾಮದಲ್ಲಿ ರಝಾ ಬೇಗಂ ವಾಸವಿದ್ದರು. ಹಚ್ಚ ಹಸಿರಿನ ಪರ್ವತದ ನಡುವೆ ಕಡಿದಾದ ಆಳದ ರಸ್ತೆ ತುಂಬೆಲ್ಲ ಹೊಂಡಗಳು. ಇದನ್ನು ದಾಟಿಕೊಂಡು ಗ್ರಾಮಕ್ಕೆ ಹೋಗಬೇಕು. ಈ ನಿಸರ್ಗದ ಚೆಲುವು ಅದ್ಭುತ; ಆದರೆ ಗ್ರಾಮದ ಇತರ ಕುಟುಂಬಗಳು ಕೂಡಾ ಇಂಥದ್ದೇ ಸೌಲಭ್ಯ ವಂಚಿತ ಸ್ಥಿತಿಯನ್ನು ಹಂಚಿಕೊಂಡಿದ್ದವು.

"ನಮ್ಮ ಕುಟುಂಬ ಎಷ್ಟು ದಿನ ಉಪವಾಸ ಮಲಗಿತ್ತು ಎಂದು ಎಣಿಸಿಕೊಳ್ಳಲೂ ಸಾಧ್ಯವಿಲ್ಲ. ಅದು ನನಗೆ ಹಾಗೂ ಪತಿಗೆ ಅತೀವ ನೋವು ತಂದಿತ್ತು, ಬಡತನ ಜೀವನದಲ್ಲಿ ಅತ್ಯಂತ ಕೆಟ್ಟದ್ದು" ಎಂದು ಬೇಗಂ ನೆನಪಿಸಿಕೊಳ್ಳುತ್ತಾರೆ.

ಬೇಗಂ ಅವರ ಗುಡಿಸಲು ಮಣ್ಣಿನಿಂದ ನಿರ್ಮಿಸಿದ್ದು, ತುಕ್ಕುಹಿಡಿದ ಕಬ್ಬಿಣದ ಶೀಟುಗಳ ಛಾವಣಿ. ಮನೆಬಾಗಿಲವರೆಗೂ ಅರ್ಧ ಕಾಲು ಮುಳುಗುವಷ್ಟು ಜಾರುವ ಕೆಸರು ಮಣ್ಣು. ಮಕ್ಕಳಿಗೆ ಮತ್ತು ವೃದ್ಧರಿಗೆ ಅಪಾಯಕಾರಿ ಎನಿಸಿದ ದಾರಿ. ಮನೆಯ ಸ್ಥಿತಿ ಅಲ್ಲಿ ವಾಸಿಸುವವರ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿತ್ತು.

ಬೇಗಂ ಅವರ ಇಬ್ಬರು ಗಂಡುಮಕ್ಕಳಾದ ಜಾವೇದ್ ಅಹ್ಮದ್ ಮತ್ತು ಫಯಾಝ್ ಅಹ್ಮದ್ ಇಬ್ಬರೂ ಪಕ್ಕದಲ್ಲೇ ಕೂಲಿ ಕೆಲಸ ಮಾಡುತ್ತಿದ್ದರು. "ಅವರು ಕೂಡಾ ನಿರ್ಗತಿಕ ಬದುಕು ಸಾಗಿಸುತ್ತಿದ್ದರು. ನಾನು ಹಾಗೂ ಪತಿ ಪ್ರತ್ಯೇಕವಾಗಿಯೇ ವಾಸವಿರಲು ಇಷ್ಟಪಡುತ್ತಿದ್ದೆವು. ನಮ್ಮ ಸ್ಥಿತಿ ಅವರೊಂದಿಗೆ ಬದುಕಲು ಅವಕಾಶ ನೀಡಿರಲಿಲ್ಲ" ಎಂದು ಬೇಗಂ ವಿವರಿಸುತ್ತಾರೆ.

ಆರು ತಿಂಗಳ ಹಿಂದೆ, ಗಾಯದ ಮೇಲೆ ಬರೆ ಎಂಬಂತೆ ಫಯಾಝ್ ನನ್ನು ಜಮ್ಮು ಪೊಲೀಸರು ಮಾದಕ ವಸ್ತು ಕಳ್ಳಸಾಗಾಣಿಕೆ ಆರೋಪದಲ್ಲಿ ಬಂಧಿಸಿದರು. ಬೇಗಂ ಅವರ ಸೊಸೆ ಹಾಗೂ ಮೊಮ್ಮಕ್ಕಳು ಕೂಡಾ ಈಗ ಅವರೊಂದಿಗೆ ಇದ್ದಾರೆ.

"ಬಡತನ ನಿಮಗೆ ಕಠಿಣ ಹೆಜ್ಜೆಗಳನ್ನು ಇಡುವಂತೆ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಇಡೀ ಕುಟುಂಬದ ಜೀವನಾಧಾರವಾಗಿರುವಾಗ ಪರಿಸ್ಥಿತಿ ಮತ್ತಷ್ಟು ಕಠಿಣ. ಫಯಾಝ್ ನನ್ನು ಬಂಧಿಸಲಾಯಿತು. ಕೆಲವರು ಆತನ ಬಡತನದ ಲಾಭ ಪಡೆದು ಆತನನ್ನು ಬಲಿಪಶು ಮಾಡಿದರು. ಮಗನ ಕುಟುಂಬದ ನರಳಾಟವನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ನಮ್ಮ ಮೊಮ್ಮಕ್ಕಳ ಆರೈಕೆಯನ್ನು ನಾನೇ ಮಾಡಬೇಕಾಯಿತು"

ಮತ್ತೊಂದು ಬಾರಿ 2018ರ ಡಿಸೆಂಬರ್‍ನಲ್ಲಿ ಹಿಮಪಾತ ಆರಂಭವಾಯಿತು. ಮೌಝುದ್ದೀನ್‍ ಗೆ ಇದು ಆತಂಕ ತಂದಿತು. ಪತ್ನಿ, ಸೊಸೆ ಮತ್ತು ಮೊಮ್ಮಕ್ಕಳ ಹೊಟ್ಟೆ ತುಂಬಿಸಲು ಏನೂ ಇರಲಿಲ್ಲ. ನಡುಗುವ ಚಳಿಕೆ ಕನಿಷ್ಠ ಬೆಚ್ಚಗಿರಲು ಬಟ್ಟೆ ಕೂಡಾ ಇರಲಿಲ್ಲ.

"ಆರು ದಿನಗಳ ಕಾಲ ನಾವು ಹಸಿವಿನಿಂದ ಇದ್ದೆವು. ಹಾಲು ಇಲ್ಲದ ಉಪ್ಪು ಚಹಾ ಮಾತ್ರ ನಮಗಿತ್ತು. ನಮ್ಮ ಮೊಮ್ಮಕ್ಕಳು ಆಹಾರಕ್ಕಾಗಿ ದೈನ್ಯದಿಂದ ಕೇಳುತ್ತಿದ್ದರು. ಚಳಿಯಿಂದ ನಡುಗುತ್ತಿದ್ದರು" ಎಂದು ಬೇಗಂ ಹೇಳುತ್ತಾರೆ.

"ಆದಾಗ್ಯೂ ಡಿಸೆಂಬರ್ ಮಧ್ಯದ ವೇಳೆಗೆ ವಲಸೆ ಪಂಡಿತರು ಗ್ರಾಮಕ್ಕೆ ಭೇಟಿ ನೀಡಿದ್ದರು. ರಂಜನ್ ಜೋಶಿ ಅವರು 2010ರಲ್ಲಿ ಪ್ರಧಾನ ಮಂತ್ರಿ ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್‍ ನಡಿ ಕಣಿವೆಗೆ ಭೇಟಿ ನೀಡಿದ್ದರು. ಯುವ ಗ್ರಾಮಸ್ಥ ಮುಝಾಫರ್ ಅಹ್ಮದ್ ಎಂಬವರು ಪಕ್ಕದ ಕುಟುಂಬದ ದಯನೀಯ ಸ್ಥಿತಿಯನ್ನು ಅವರಿಗೆ ವಿವರಿಸಿದರು.

"ಅವರ ಸ್ಥಿತಿ ನನಗೆ ಕಣ್ಣೀರು ತರಿಸಿತು" ಎಂದು ಜೋಶಿ ವಿವರಿಸುತ್ತಾರೆ. "ಪುಟ್ಟ ಮಕ್ಕಳು ಸೇರಿದಂತೆ ಅವರು ಹಲವು ದಿನಗಳಿಂದ ಹಸಿವಿನಿಂದ ಬಳಲುತ್ತಿದ್ದರು"

ಜೋಶಿ ಅವರಿಗೆ ಅಕ್ಕಿ, ಹಾಲು, ತರಕಾರಿ, ಬ್ರೆಡ್ ಮತ್ತು ಇತರ ಅಗತ್ಯ ವಸ್ತುಗಳನ್ನು ತಂದುಕೊಟ್ಟರು. ಅದು ಕೆಲ ವಾರಗಳ ವರೆಗೆ ಸಾಕಾಯಿತು.

ಅನಂತ್‍ ನಾಗ್ ಮಟ್ಟನ್ ‍ನಲ್ಲಿರುವ ತಾತ್ಕಾಲಿಕ ಶಿಬಿರಕ್ಕೆ ಜೋಶಿ ಆಗಮಿಸಿದಾಗ, ಅವರು ಪಂಡಿತ್ ಸಮುದಾಯಕ್ಕೆ ಮೌಝುದ್ದಿನ್ ಕುಟುಂಬದ ಸ್ಥಿತಿಯನ್ನು ವಿವರಿಸಿದರು. ಅವರು ಅಗತ್ಯ ದಿನಬಳಕೆ ವಸುಗಳನ್ನು ಸಂಗ್ರಹಿಸಿದರು ಹಾಗೂ ವಿನೋದ್ ಟಿಕ್ಕೂ, ಶಶಿಭೂಷಣ್ ಭಟ್, ಸುನೀಲ್ ರೈನಾ, ವಿಕ್ರಂ ಖಾರ್, ರೂಪ್‍ಕೃಷ್ಣನ್, ರೆಹ್ಮಾನ್ ಶೆರ್ಗೋಜ್ರಿ, ಫಾರೂಕ್ ಅಹ್ಮದ್ ನೈಕೂ ಮತ್ತು ಫರ್ಹಾತ್ ಫರಾಝ್ ಅವರಿಂದ ನೆರವು ಪಡೆದರು.

ಮರುದಿನ ಶೀತಗಾಳಿಯ ನಡುವೆಯೂ ಜೋಶಿ ಮತ್ತು ಇತರರು ಹಪತ್‍ ನಾರ್‍ ಗೆ ಮರಳಿ ದಿನಬಳಕೆ ವಸ್ತುಗಳನ್ನು ದೀನ ಕುಟುಂಬಕ್ಕೆ ವಿತರಿಸಿದರು.

ರಂಜನ್ ಜೋಶಿ

"ಮಾನವೀಯತೆಗಾಗಿ ನಾವು ಇದನ್ನು ಮಾಡಿದೆವು" ಎಂದು ಜೋಶಿ "ದ ವೈರ್"ಗೆ ತಿಳಿಸಿದರು. “2010ರಲ್ಲಿ ನಾವು ಕಣಿವೆಗೆ ವಾಪಸ್ಸಾದಾಗಿನಿಂದ ನಮ್ಮ ಕಾಶ್ಮೀರಿ ಮುಸ್ಲಿಂ ಸಹೋದರರಿಂದ ಸಾಕಷ್ಟು ನೆರವು ಪಡೆದಿದ್ದೆವು. ಪ್ರೀತಿಯಿಂದ ಅವರು ಮುಕ್ತಹಸ್ತ ಚಾಚಿದ್ದರು” ಎಂದು ಹೇಳುತ್ತಾರೆ ಜೋಶಿ.

ಜೋಶಿ ವಿಡಿಯೊ ಚಿತ್ರೀಕರಿಸಿ ಮೌಝುದ್ದೀನ್ ಭಟ್ಟ್ ಕುಟುಂಬದ ಬ್ಯಾಂಕ್ ವಿವರಗಳನ್ನು ಫೇಸ್‍ ಬುಕ್ ನಲ್ಲಿ ಪೋಸ್ಟ್ ಮಾಡಿದರು. "ದಯವಿಟ್ಟು ಮೌಝುದ್ದೀನ್ ಭಟ್ಟ್ ಕುಟುಂಬಕ್ಕೆ ನೆರವಾಗಿ" ಎಂದು ಕೋರಿದರು. "ಈ ಕುಟುಂಬ ಹಲವು ದಿನಗಳಿಂದ ಹಸಿವಿನಿಂದ ಇದೆ. ಮಾನವೀಯತೆಯ ನೆರವು ನೀಡಲು ಮುಂದಾಗಿ; ಮಾನವೀಯ ನೆರವು ದೇವರ ಸೇವೆ" ಎಂದು ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ವೈರಲ್ ಆಯಿತು. ಅಲ್ಪ ಅವಧಿಯಲ್ಲೇ 2400 ಮಂದಿ ಶೇರ್ ಮಾಡಿದರು. ಅವರ ಕುಟುಂಬದ ಖಾತೆಗೆ 17 ಲಕ್ಷ ರೂಪಾಯಿ ನೆರವು ಹರಿದು ಬಂತು. ಹಲವಾರು ಮಂದಿ ಈ ಕುಟುಂಬಕ್ಕೆ ನೆರವಾಗಲು ಹಪತ್‍ ನಾರ್ ಗೆ ಆಗಮಿಸಿದರು.

ರಝಾ ಮತ್ತು ಮೌಝುದ್ದೀನ್ ಅವರಿಗೆ ಮಾತೇ ಹೊರಡಲಿಲ್ಲ. ಇದರಿಂದಾಗಿ ಕುಟುಂಬದ ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಲು ಸಾಧ್ಯವಾಗಿದೆ. "ಪಂಡಿತರಿಗೆ ನಾವು ಕೃತಜ್ಞರು" ಎಂದು ರಝಾ ಹೇಳುತ್ತಾರೆ. "ಯಾರು ಹಾಗೂ ಎಷ್ಟು ಮಂದಿ ಪತಿಯ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ ಎಂದು ನನಗೆ ಗೊತ್ತಿಲ್ಲ. ಒಟ್ಟಾಗಿ, ನಮ್ಮ ಕಾಶ್ಮೀರದಲ್ಲಿ ಇನ್ನೂ ಮಾನವೀಯತೆ ಉಳಿದಿದೆ ಎಂದಷ್ಟೇ ನಾನು ಹೇಳಬಲ್ಲೆ"

ಜನವರಿ 28ರಂದು ರಾತ್ರಿ ಮೌಝುದ್ದೀನ್ ಮೃತಪಟ್ಟರು. ಈ ನಿಧಿಯನ್ನು ಕುಟುಂಬಕ್ಕಾಗಿ ಬಿಟ್ಟುಹೋದರು. ಇದನ್ನು ಪತ್ನಿ ಹಾಗೂ ಮಕ್ಕಳಿಗೆ ಸಮಾನವಾಗಿ ಹಂಚಲಾಯಿತು.

"ನಾನು ಮೌಝುದ್ದೀನ್‍ ನನ್ನು ನೋಡಲು ಅಂದು ರಾತ್ರಿಯೇ ತೆರಳಿದೆ. ಅವರು ಚೆನ್ನಾಗಿದ್ದರು. ಒಳ್ಳೆಯ ವೈದ್ಯರಲ್ಲಿಗೆ ಕರೆದೊಯ್ಯುವಂತೆ ಕೇಳಿದರು. ಜಮ್ಮುವಿನಲ್ಲಿ ಜೈಲಿನಲ್ಲಿರುವ ಮಗನನ್ನು ನೋಡಲು ಬಯಸಿದ್ದರು" ಎಂದು ಮುಝಾಫರ್ ವಿವರಿಸುತ್ತಾರೆ. "ಹೃದಯಾಘಾತದಿಂದ ಅವರು ಮೃತಪಟ್ಟರು. ಆದರೆ ಸಂತೋಷದಿಂದ ಅವರು ಕೊನೆಯುಸಿರೆಳೆದರು" ಎಂದವರು ಹೇಳುತ್ತಾರೆ.

ಮೌಝುದ್ದೀನ್ ನಿಧನದ ಕೆಲ ದಿನಗಳ ಬಳಿಕ ಪೊಲೀಸರು ಫಯಾಝ್‍ ನನ್ನು ಬಿಡುಗಡೆ ಮಾಡಿದರು. ಆತ ಮತ್ತೆ ಕುಟುಂಬ ಸೇರಿಕೊಂಡ. ಇದೀಗ ಫಯಾಝ್ ತಾಯಿ ಜೊತೆ ವಾಸವಿದ್ದಾನೆ.

"ರಂಜನ್ ನಮ್ಮ ಕುಟುಂಬದ ಸಂರಕ್ಷಕರಾಗಿ ಬಂದರು" ಎಂದು ಮುಝಾಫರ್ ಹೇಳುತ್ತಾರೆ. "ಅವರು ನಮ್ಮ ಕುಟುಂಬವನ್ನು ಹಸಿವಿನಿಂದ ಪಾರು ಮಾಡಿದ್ದು ಮಾತ್ರವಲ್ಲದೇ, ನಮ್ಮ ಕುಟುಂಬ ಮತ್ತೆ ಒಂದಾಗಲು ಕೂಡಾ ನೆರವಾದರು" ಎಂದು ನೆನಪಿಸುತ್ತಾರೆ ಮುಝಾಫರ್.

Writer - ಆಮಿರ್ ಅಲಿ ಭಟ್, thewire.in

contributor

Editor - ಆಮಿರ್ ಅಲಿ ಭಟ್, thewire.in

contributor

Similar News