ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನ ಕಾಮಗಾರಿ 30 ತಿಂಗಳಲ್ಲಿ ಕಾಮಗಾರಿ ಪೂರ್ಣ: ಪರಮೇಶ್ವರ್
ಬೆಂಗಳೂರು, ಮಾ.6: ತಿಪ್ಪಗೊಂಡನಹಳ್ಳಿ ಜಲಾಶಯ ಮೊದಲನೇ ಹಂತದಲ್ಲಿ ಪುನಶ್ಚೇತನಗೊಳಿಸುವ ಕಾಮಗಾರಿಯನ್ನು 30 ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬಿಡಬ್ಲೂಎಸ್‌ಎಸ್‌ಬಿ ವತಿಯಿಂದ ಆಯೋಜಿಸಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಮೊದಲನೇ ಹಂತದಲ್ಲಿ ಪುನಶ್ಚೇತನಗೊಳಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
85 ವರ್ಷದ ಹಿಂದೆ ವಿಶ್ವೇಶ್ವರಯ್ಯ ಅವರು ಇದೇ ತಿಪ್ಪಗೊಂಡನಹಳ್ಳಿ ಡ್ಯಾಂಗೆ ಅಡಿಗಲ್ಲು ಹಾಕಿದ್ದರು. ಈಗ ಇದರ ಪುನಶ್ಚೇತನಕ್ಕೆ ಅಡಿಗಲ್ಲು ಹಾಕುವ ಅವಕಾಶ ನನಗೆ ಸಿಕ್ಕಿರುವುದು ಅತ್ಯಂತ ಸಂತೋಷಕರ. ಹಿಂದೆಲ್ಲಾ ಸಾಕಷ್ಟು ಪ್ರದೇಶಕ್ಕೆ ನೀರು ಪೂರೈಕೆ ಮಾಡಿತ್ತು. ಆದರೀಗ ಈ ಡ್ಯಾಂನಲ್ಲಿ ಶೇಖರವಾಗಿರುವ ನೀರು ವಾಹನದ ಕೆಮಿಕಲ್ ರೀತಿ ಆಗಿದೆ ಎಂದರು.
ಈ ಹಿಂದೆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಇಬ್ಬರು ನಟರು ಪ್ರಾಣ ಕಳೆದುಕೊಂಡ ಘಟನೆ ನಡೆದಾಗ ಗೃಹ ಸಚಿವನಾಗಿದ್ದೆ. ಇಲ್ಲಿನ ಡ್ಯಾಂನಲ್ಲಿ ನೀರು ವಾಹನಗಳಿಗೆ ಹಾಕುವ ಆಯಿಲ್ ರೀತಿಯಲ್ಲಿ ಇತ್ತು. ಈಗ ನಗರಾಭಿವೃದ್ಧಿ ಸಚಿವರಾದ ಬಳಿಕ ಈ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಮತ್ತೆ ಈ ಡ್ಯಾಂನಿಂದ ಜನರಿಗೆ ನೀರು ಹರಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಪ್ರಸ್ತುತ ಕೆಆರ್‌ಎಸ್‌ನಿಂದ 1,500 ಎಂಎಲ್‌ಟಿ ನೀರು ಹರಿಸಲಾಗುತ್ತಿದೆ. 5 ಸಾವಿರ ಕೋಟಿ ರೂ.ವೆಚ್ಚದಲ್ಲಿ ಕಾವೇರಿ 5ನೆ ಹಂತ ತರುತ್ತಿದ್ದೇವೆ. ಈ ನೀರಿನ ಮೂಲದ ಜೊತೆಗೆ ಬೇರೆ ಮೂಲವನ್ನೂ ಹುಡುಕುತ್ತಿದ್ದೇವೆ. ಅದರಲ್ಲಿ ತಿಪ್ಪಗೊಂಡನಹಳ್ಳಿ ಡ್ಯಾಂ ಪುನಶ್ಚೇತನ ಕೂಡ ಒಂದು. ಇದರ ಜೊತೆಗೆ ಎತ್ತಿನ ಹೊಳೆ ಯೋಜನೆ ನೀರನ್ನು ಇಲ್ಲಿ ಶೇಖರಿಸಿ, 15 ಲಕ್ಷ ಜನರಿಗೆ ನೀರನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.