×
Ad

ವರ್ತೂರು ಕೆರೆಯಲ್ಲಿ ಮರುಕಳಿಸಿದ ನೊರೆ ಸಮಸ್ಯೆ: ಸಾರ್ವಜನಿಕರಿಗೆ ಕಿರಿಕಿರಿ

Update: 2019-03-06 23:33 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.5: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಗತ್ಯ ಕ್ರಮದ ನಂತರವೂ ವರ್ತೂರು ಕೆರೆಯಲ್ಲಿ ಮತ್ತೆ ನೊರೆ ಸಮಸ್ಯೆ ಮರುಕಳಿಸಿದ್ದು, ರಸ್ತೆ ಮೇಲೆ ಹಾರುತ್ತಿರುವ ನೊರೆಯಿಂದ ಪರಿಸರ ಕಲುಷಿತವಾಗಿದೆ. ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ವರ್ತೂರು ಕೆರೆಯಲ್ಲಿ ರಾಸಾಯನಿಕ ಅಂಶ ಹೆಚ್ಚಾಗಿರುವ ಕಾರಣ ನೊರೆ ಉಂಟಾಗುತ್ತಿದೆ.

ಶುಕ್ರವಾರ ಸಂಜೆ ವೇಳೆಗೆ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಿದ್ದ ನೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ, ಇಂದು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿ ರಾಜ್ಯ ಹೆದ್ದಾರಿ 35ರ ಮೇಲೆ ಬಂದಿದೆ. ಇದರಿಂದ ಕೆಲಕಾಲ ಸಂಚಾರ ದಟ್ಟಣೆಯೂ ಉಂಟಾಯಿತು. ನೊರೆಯಿಂದ ದುರ್ವಾಸನೆ ಬರುತ್ತಿದ್ದು ಮೂಗು ಹಿಡಿದು ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಕಾಣಿಸಿಕೊಳ್ಳುವ ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸ್ಥಳಿಯ ಸಂಬಂಧಪಟ್ಟ ಸಂಸ್ಥೆಗಳಿಗೆ ಹಸಿರು ನ್ಯಾಯಪೀಠ ಸೂಚಿಸಿತ್ತು. ಹೀಗಾಗಿ, ಬಿಡಿಎ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೂಸ್ ಗೇಟ್ ಮ್ಯಾಕಾನಿಸಂ ತಂತ್ರಜ್ಞಾನವನ್ನು ಕೆರೆಗಳಿಗೆ ಅಳವಡಿಸುವ ಕಾಮಗಾರಿ ಕೈಗೊಂಡು, ಕಳೆದ ಡಿಸೆಂಬರ್‌ನಲ್ಲಿ ತಂತ್ರಜ್ಞಾನ ಅಳವಡಿಸಿತ್ತು. ಆದರೂ, ಕೆರೆಯಲ್ಲಿ ಮತ್ತೆ ನೊರೆಗೆ ಕಾಣಿಸಿಕೊಂಡಿದೆ.

ಒಳ ಚರಂಡಿ ನೀರಿನಿಂದ ನೊರೆ?: ಕೆರೆಗೆ ಜಲಮಂಡಳಿಯ ತ್ಯಾಜ್ಯ ಸಂಸ್ಕರಣಾ ಘಟಕಗಳ ನೀರು ಬರುತ್ತಿದ್ದು, ಜಲಮಂಡಳಿ ಅಲ್ಲಿ ಸೂಕ್ತವಾಗಿ ನೀರನ್ನು ಸಂಸ್ಕರಣೆ ಮಾಡದೇ ಕೆರೆಗೆ ಹರಿಸಲಾಗುತ್ತಿದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಜಲಮಂಡಳಿ ಅಧಿಕಾರಿಗಳು, ವರ್ತೂರು ಕೆರೆಯಲ್ಲಿ ನಮ್ಮ ಸಂಸ್ಕರಣಾ ಘಟಕದಿಂದ ಕೇವಲ 15ರಿಂದ 20 ಎಂಎಲ್ಡಿ ನೀರು ಹರಿಯುತ್ತಿದೆ. ಜತೆಗೆ ಆ ನೀರನ್ನು ಉನ್ನತ ಮಟ್ಟದಲ್ಲಿ ಶುದ್ಧೀಕರಿಸಿ ಬಿಡಲಾಗುತ್ತಿದೆ. ಬದಲಿಗೆ ಅಕ್ಕ ಪಕ್ಕದಿಂದ ಹರಿಯುತ್ತಿರುವ ಒಳಚರಂಡಿ ನೀರಿನ ರಾಸಾಯನಿಕ ಅಂಶದಿಂದ ನೊರೆ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ನೊರೆ ಪರಿಹಾರಕ್ಕೆ ಕಾಮಗಾರಿ: ಹಸಿರು ನ್ಯಾಯಪೀಠದಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಬಿಡಿಎ ವರ್ತೂರು, ಬೆಳ್ಳಂದೂರು ಹಾಗೂ ಯಮಲೂರು ಕೆರೆಗಳಿಗೆ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ನೊರೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಯಿತು. ಮೊದಲು ಈ ಮೂರು ಕೆರೆಗಳಿಗೆ ಕೋಡಿ ಕಟ್ಟುವುದು ಆನಂತರ ಕೆರೆಗೆ ಹರಿಯುವ ನೀರಿನ ವೇಗವನ್ನು ಕಡಿಮೆ ಮಾಡಲು ಸೂಸ್ ಗೇಟ್ ಮ್ಯಾಕಾನಿಸಂ ಬಳಸುವ ಕಾಮಗಾರಿ ಕೈಗೊಂಡಿತ್ತು.

ಬಿಡಿಎ ಸಮಜಾಯಿಷಿ: ವರ್ತೂರು ಕೆರೆ ಮತ್ತೆ ನೊರೆ ಕಾಣಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಬಿಡಿಎ ಅಧಿಕಾರಿಯೊಬ್ಬರು, ಕೆರೆಯ ಪಕ್ಕದಲ್ಲಿ ಬಿಬಿಎಂಪಿ ಕಾಮಗಾರಿಯೊಂದು ನಡೆಯುತ್ತಿದ್ದು, ಅದರಿಂದ ನೊರೆ ಕಾಣಿಸಿಕೊಂಡಿರಬಹುದು. ಕಾಮಗಾರಿ ಮುಗಿದ ನಂತರ ಸರಿಹೋಗುತ್ತದೆ ಎಂದು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News