×
Ad

ಗ್ಯಾಟ್ ಒಪ್ಪಂದ ದೇಶದ ಸಾರ್ವಭೌಮತೆಗೆ ಕುತ್ತು ತಂದಿದೆ: ಸಾಮಾಜಿಕ ಕಾರ್ಯಕರ್ತ ದಿಲೀಪ್ ಕಾಮತ್

Update: 2019-03-06 23:37 IST

ಬೆಂಗಳೂರು, ಮಾ.6: ಗ್ಯಾಟ್(ವಿಶ್ವ ವಾಣಿಜ್ಯ ಒಪ್ಪಂದ) ಒಪ್ಪಂದ ಭಾರತದ ಸಾರ್ವಭೌಮತೆಗೆ ಕುತ್ತು ತಂದಿದೆ. ಇದು ಸರಿಯಾಗಬೇಕಾದರೆ ಶ್ರಮಿಕ ವರ್ಗದಿಂದ ಮಾತ್ರ ಸಾಧ್ಯ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ದಿಲೀಪ್ ಕಾಮತ್ ತಿಳಿಸಿದರು.

ಬುಧವಾರ ಎಚ್‌ಐಡಿ ಫೋರಂ ವತಿಯಿಂದ ನಗರದ ಎಸಿಎಂ ಹೌಸ್‌ನಲ್ಲಿ ಆಯೋಜಿಸಿದ್ದ ‘ಸಮುದಾಯ ಕಲಿಕಾ ಆಂದೋಲನ ತರಬೇತಿದಾರರ ಕೈಪಿಡಿ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿಶ್ವ ವಾಣಿಜ್ಯ ಒಪ್ಪಂದ(ಗ್ಯಾಟ್)ದಿಂದಾಗಿ ಕೇವಲ ಬಂಡವಾಳಶಾಹಿಗಳಿಗೆ ಅನುಕೂಲವಾಗಿದೆಯೆ ವಿನಃ ಈ ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಅಸ್ಮಿತೆಯನ್ನು ಕಳೆದುಕೊಳ್ಳುತ್ತಾ ಸಾಗಿದ್ದೇವೆ. ಜಾಗತೀಕರಣ ಹಾಗೂ ಆಧುನೀಕರಣದ ಪರಿಣಾಮವಾಗಿ ದೇಶದ ಮೂಲಭೂತ ಲಕ್ಷಣಗಳೆ ಕಳೆದು ಹೋಗಿದೆ ಎಂದು ಅವರು ವಿಷಾದಿಸಿದರು.

ಬಂಡವಾಳಶಾಹಿಗಳಿಗೆ ಪರ್ಯಾಯವಾಗಿ ಶ್ರಮಿಕ ವರ್ಗವನ್ನು ಒಂದು ಶಕ್ತಿಯಾಗಿ ರೂಪಿಸುವಲ್ಲಿ ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಗಳು ವಿಫಲವಾಗಿವೆ. ಮಾರ್ಕ್ಸ್ ಸಿದ್ಧಾಂತಗಳ ತಪ್ಪು ಆಚರಣೆಯಿಂದಾಗಿ ಬಂಡವಾಳಶಾಹಿಗಳಿಗೆ ಪೂರಕವಾಗುವಂತಹ ಪ್ರಕ್ರಿಯೆಯಲ್ಲಿ ಕಾರ್ಮಿಕ ಸಂಘಟನೆಗಳು ತೊಡಗಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶದ ಸ್ವಾತಂತ್ರ ನಂತರದ ಆರಂಭ ಘಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟವು ಸರಿಯಾದ ದಾರಿಯಲ್ಲಿಯೆ ಸಾಗುತ್ತಿತ್ತು. ಜನರ ನಿಜವಾದ ಆಶಯಗಳು ಸರಿಯಾಗಿ ಗ್ರಹಿಸುವುದು ಹಾಗೂ ಸರಕಾರದ ಮೇಲೆ ಒತ್ತಡ ತಂದು ಜನಪರ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯನಿರತರಾಗುತ್ತಿದ್ದವು. ಆದರೆ, ಗ್ಯಾಟ್ ಒಪ್ಪಂದದ ನಂತರ ಸ್ವಯಂ ಸೇವಾ ಸಂಸ್ಥೆಗಳು ಎನ್‌ಜಿಒಗಳಾಗಿ ಪರಿವರ್ತನೆಗೊಂಡವು ಹಾಗೂ ತಮ್ಮ ಚಿಂತನೆಗಳ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಂಡವು ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರಕಾರ ಅನ್ನಭಾಗ್ಯ ಸೇರಿದಂತೆ ಆರ್ಥಿಕವಾಗಿ ಸುಧಾರಿಸುವಂತಹ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿವೆ. ಆದರೆ, ಕೇವಲ ಆರ್ಥಿಕ ಸ್ವಾವಲಂಬನೆಯಿಂದ ಎಲ್ಲವು ಬದಲಾಗುವುದಿಲ್ಲ. ಅದರಲ್ಲೂ ಜನತೆಯ ದುಡಿಮೆಗೆ ಬೇಕಾದ ವಾತಾವರಣ ನಿರ್ಮಿಸದೆ ಕೇವಲ ಉಚಿತವಾಗಿ ಅಕ್ಕಿ, ಹಾಲು, ಸವಲತ್ತುಗಳನ್ನು ಕೊಟ್ಟು, ಪರಾವಲಂಬಿಗಳನ್ನಾಗಿ ಮಾಡುವುದು ದೇಶದ ಅಭಿವೃದ್ಧಿಗೆ ಮಾರಕವಾದದ್ದೆಂದು ಅವರು ಅಭಿಪ್ರಾಯಿಸಿದರು.

ದೇಶದ ಎಲ್ಲ ಸಮುದಾಯಗಳು ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಸಮಾನತೆ ಕಾಣದ ಹೊರತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಬರುವುದಿಲ್ಲ. ಈ ನಿಟ್ಟಿನಲ್ಲಿ ಎಚ್‌ಐಡಿ ಫೋರಂ ಸಂಸ್ಥೆಯು ರಾಜ್ಯದ, ದೇಶದ ಪ್ರತಿಯೊಬ್ಬರು ಜೀವನಾಧಾರಿತ ಕೌಶಲ್ಯ, ಬದುಕಿನ ಮೌಲ್ಯ ಹಾಗೂ ಸಂಘಟಿತವಾಗಿ ಬದುಕುವ ರೀತಿಯನ್ನು ಕಲಿಯುವಂತಹ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ ಸಂಸ್ಥೆಯ ಪ್ರಾಧ್ಯಾಪಕಿ ವಾಸವಿ ಮಾತನಾಡಿ, ಕಳೆದ ಎರಡು ದಶಕಗಳಿಂದೀಚೆಗೆ ದೇಶದಲ್ಲಿ ರೈತರ ಆದಾಯ ಶೇ.19ರಷ್ಟು ಹೆಚ್ಚಳವಾದರೆ, ಸರಕಾರಿ ನೌಕರರ ಸಂಬಳ ಶೇ.400, 500ಪಟ್ಟು ಹೆಚ್ಚಳವಾಗಿದೆ. ಹಾಗೂ ಕಾರ್ಪೊರೇಟ್ ಕಂಪೆನಿ ನೌಕರರ ಸಂಬಳ ಶೇ.1000ಪಟ್ಟು ಹೆಚ್ಚಾಗಿದೆ. ಇಷ್ಟು ತಾರತಮ್ಯ ಇರುವ ಸಮಾಜದಲ್ಲಿ ಎಲ್ಲರನ್ನು ಸಮಾನತೆಯಡೆಗೆ ತರುವುದು ಸವಾಲಿನ ಸಂಗತಿಯಾಗಿದೆ ಎಂದು ತಿಳಿಸಿದರು.

ಹಳ್ಳಿಗಳಲ್ಲಿ ಹಿಂದಿಗಿಂತಲೂ ಇತ್ತೀಚಿನ ದಶಕಗಳಲ್ಲಿ ಸ್ವಜಾತಿ ಹಿತಾಸಕ್ತಿಗಳು ಹೆಚ್ಚಾಗುತ್ತಿದೆ. ಹಳ್ಳಿಗಳಲ್ಲಿ ಎಲ್ಲರು ಕೂಡಿ ಆಟವಾಡುತ್ತಿದ್ದ ಮಕ್ಕಳು ಈಗ ಜಾತಿವಾರು ಆಟದಲ್ಲಿ ತೊಡಗಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಈ ಪ್ರಕ್ರಿಯೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಸಮುದಾಯ ಕಲಿಕಾ ಆಂದೋಲನ ತರಬೇತಿ ಅಗತ್ಯವಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಎಚ್‌ಎಂಡಿ ಫೋರಂ ನಿರ್ದೇಶಕ ವೆಂಕಟೇಶ್, ಚಂದ್ರು, ವಿಆರ್‌ಡಿಎಸ್ ಸಂಸ್ಥೆಯ ಮುಖ್ಯಸ್ಥ ಬಳಿಗಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News