ಅಂತರ್‌ರಾಜ್ಯ ಬೈಕ್ ಕಳ್ಳರ ಬಂಧನ: 20 ಲಕ್ಷ ರೂ. ಮೌಲ್ಯದ 17 ಬೈಕ್ ವಶ

Update: 2019-03-07 14:22 GMT

ಬೆಂಗಳೂರು, ಮಾ.7: ದುಬಾರಿ ಬೆಲೆಯ ಬೈಕ್‌ಗಳನ್ನು ಕಳವು ಮಾಡಿ ನಂಬರ್ ಪ್ಲೇಟ್ ಬದಲಿಸಿ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಕಳ್ಳರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು 20 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ಅಂಬೂರ್‌ನ ಮುನೀರ್ ಪಾಷ, ಉಮ್ರಾಬಾದ್‌ನ ಮುಹ್ಮದ್ ಮುಝಾಯಿದ್, ವಾಣಿಯಂಬಾಡಿಯ ಮೋಹನ್ ಬಂಧಿತ ಆರೋಪಿಗಳು. ಇವರಿಂದ 8 ಬುಲೆಟ್, 3 ಬಜಾಜ್ ಪಲ್ಸರ್, ಯಮಹಾ ಎಫ್‌ಝೆಡ್, ಡಿಯೋ, ಹೋಂಡಾ ಶೈನ್ ಸೇರಿದಂತೆ 17 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬ್ಯಾಟರಾಯನಪುರ, ಜಯನಗರ, ಅಶೋಕ್‌ ನಗರ, ಹೆಬ್ಬಗೋಡಿ, ಬಂಡೆಪಾಳ್ಯ, ವಿಲ್ಸನ್‌ಗಾರ್ಡನ್ ಇನ್ನಿತರ ಕಡೆಗಳಲ್ಲಿ ಹಗಲು-ರಾತ್ರಿ ವೇಳೆ ಹೊಂಚು ಹಾಕುತ್ತಾ ದುಬಾರಿ ಬೆಲೆಯ ಬೈಕ್‌ಗಳನ್ನು ನಕಲಿ ಕೀ ಬಳಸಿ ಇಲ್ಲವೆ ಹ್ಯಾಂಡಲ್ ಮುರಿದು ಕಳವು ಮಾಡಿ ನಂಬರ್ ಪ್ಲೇಟ್ ಬದಲಿಸಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದರು.

ಇಬ್ಬರು ಆರೋಪಿಗಳು ವಿವಿಪುರಂ ಬಳಿ ಬುಲೆಟ್ ಬೈಕ್‌ನಲ್ಲಿ ಬರುತ್ತಿದ್ದಾಗ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ನೋಡಿ ಓರ್ವ ಆರೋಪಿ ಓಡಿ ಹೋಗಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು, ಮತ್ತೊಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಂತರ್‌ರಾಜ್ಯ ಬೈಕ್ ಕಳ್ಳರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News