ರಾಜ್ಯ ವಕ್ಫ್ ಮಂಡಳಿ ಚುನಾವಣೆ: ಮುತವಲ್ಲಿ ವಿಭಾಗದಲ್ಲಿ ಡಾ.ಮುಹಮ್ಮದ್ ಯೂಸುಫ್, ಅನ್ವರ್ ಬಾಷ ಜಯಶಾಲಿ

Update: 2019-03-07 14:49 GMT

ಬೆಂಗಳೂರು, ಮಾ.7: ರಾಜ್ಯ ವಕ್ಫ್ ಮಂಡಳಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಮಾ.2ರಂದು ನಡೆದಿದ್ದ ಚುನಾವಣೆಯಲ್ಲಿ ಮುತವಲ್ಲಿ ವಿಭಾಗದಡಿಯಲ್ಲಿ ಸ್ಪರ್ಧಿಸಿದ್ದ ಬೆಂಗಳೂರಿನ ಡಾ.ಮುಹಮ್ಮದ್ ಯೂಸುಫ್ ಹಾಗೂ ಚಿತ್ರದುರ್ಗದ ಕೆ.ಅನ್ವರ್ ಬಾಷ ಜಯಶಾಲಿಯಾಗಿದ್ದಾರೆ.

ಗುರುವಾರ ನಗರದ ಡಿಕೆನ್ಸನ್ ರಸ್ತೆಯಲ್ಲಿರುವ ಮುಸ್ಲಿಮ್ ಅನಾಥಾಶ್ರಮದಲ್ಲಿ ನಡೆದ ಮತಗಳ ಎಣಿಕೆ ಕಾರ್ಯದ ಬಳಿಕ ಚುನಾವಣಾಧಿಕಾರಿ ಶಿವಯೋಗಿ ಕಳಸದ ಫಲಿತಾಂಶವನ್ನು ಪ್ರಕಟಿಸಿದರು.

ಮುತವಲ್ಲಿ ವಿಭಾಗದಡಿಯಲ್ಲಿ ಎರಡು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಬೆಂಗಳೂರಿನ ಡಾ.ಮುಹಮ್ಮದ್ ಯೂಸುಫ್ 217+62(ದ್ವಿತೀಯ ಪ್ರಾಶಸ್ತ್ಯದ ಮತಗಳು) ಸೇರಿ 279 ಮತಗಳು, ಚಿತ್ರದುರ್ಗದ ಕೆ.ಅನ್ವರ್ ಬಾಷ 202+68(ದ್ವಿತೀಯ ಪ್ರಾಶಸ್ತ್ಯದ ಮತಗಳು) ಸೇರಿ 270 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ಇನ್ನುಳಿದಂತೆ ದಾವಣಗೆರೆಯ ಸೈಯ್ಯದ್ ಸೈಫುಲ್ಲಾ 119 ಮತಗಳು, ನಿವೃತ್ತ ಕೆಎಎಸ್ ಅಧಿಕಾರಿ ಸೈಯ್ಯದ್ ಏಜಾಝ್ ಅಹ್ಮದ್ 104 ಮತಗಳು, ಬಳ್ಳಾರಿಯ ಎಸ್.ಮುಹಮ್ಮದ್ ಗೌಸ್ ಬಾಷಾ 64 ಮತಗಳು, ಸುಭಾನ್ ಶರೀಫ್ 40 ಮತಗಳು, ಗದಗ ಜಿಲ್ಲೆಯ ಸೈಯ್ಯದ್ ಮಹಬೂಬ್ 22 ಮತಗಳನ್ನು ಪಡೆದಿದ್ದಾರೆ.

ಬೀದರ್ ಜಿಲ್ಲೆಯ ಅಬ್ದುಲ್ಲಾ ಸಲೀಮ್ 12 ಮತಗಳು, ಕಲಬುರ್ಗಿ ಜಿಲ್ಲೆಯ ಅಶ್ಫಾಕ್ ಅಹ್ಮದ್ ಸಿದ್ದೀಖಿ 5 ಮತಗಳು, ಬೆಂಗಳೂರಿನ ಪಿ.ಸಿ.ಬಶೀರ್ 2 ಮತಗಳು, ಮಂಗಳೂರಿನ ಬಿ.ಮುಖ್ತಾರ್ ಅಹ್ಮದ್ 11 ಮತಗಳು, ಬೆಂಗಳೂರಿನ ನಿಯಾಝ್ ಅಹ್ಮದ್ ಶರೀಫ್ 4 ಮತಗಳು, ಮೈಸೂರಿನ ಶಫೀವುಲ್ಲಾ ಬೇಗ್ 8 ಮತಗಳು, ಹಾವೇರಿ ಜಿಲ್ಲೆಯ ಝಿಶಾನ್ ಅಹ್ಮದ್‌ಖಾನ್ 2 ಮತಗಳನ್ನು ಪಡೆದಿದ್ದಾರೆ.

ಮುತವಲ್ಲಿ ವಿಭಾಗದ ಮತದಾರರ ಪಟ್ಟಿಯಲ್ಲಿರುವ 913 ಮತದಾರರ ಪೈಕಿ 883 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಮತಗಳ ಎಣಿಕೆ ವೇಳೆ ಕ್ರಮಬದ್ಧವಲ್ಲದ 82 ಮತಗಳನ್ನು ತಿರಸ್ಕರಿಸಲಾಗಿದೆ ಎಂದು ಶಿವಯೋಗಿ ಕಳಸದ ತಿಳಿಸಿದರು.

913 ಮತಗಳ ಪೈಕಿ ಬೆಂಗಳೂರು ವಿಭಾಗದಲ್ಲಿ 307 ಮತಗಳು, ಮೈಸೂರು ವಿಭಾಗದಲ್ಲಿ 197 ಮತಗಳು, ಬೆಳಗಾವಿ ವಿಭಾಗದಲ್ಲಿ 174 ಹಾಗೂ ಕಲಬುರಗಿ ವಿಭಾಗದಲ್ಲಿ 205 ಮತಗಳು ಚಲಾವಣೆಯಾಗಿದ್ದವು. ಶಾಸಕಾಂಗ ವಿಭಾಗದಡಿಯಲ್ಲಿ ಶಾಸಕಿ ಕನಿಝ್ ಫಾತಿಮಾ ಹಾಗೂ ಶಾಸಕ ತನ್ವೀರ್ ಸೇಠ್, ಸಂಸದರ ಪೈಕಿ ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಸೀರ್ ಹುಸೇನ್, ಕರ್ನಾಟಕ ಬಾರ್ ಕೌನ್ಸಿಲ್‌ನಿಂದ ವಕೀಲ ಆಸಿಫ್ ಅಲಿ ಶೇಖ್ ಹುಸೇನ್‌ರನ್ನು ವಕ್ಫ್ ಮಂಡಳಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News