ಸರಕಾರಿ ಕೆಲಸದ ಆಮಿಷ ನೀಡಿ ವಂಚನೆ: ಆರೋಪಿ ಬಂಧನ
ಬೆಂಗಳೂರು, ಮಾ.7: ನಿರುದ್ಯೋಗಿ ಯುವಕ-ಯುವತಿಯರಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನರಗುಂದದ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರನಗೌಡ ಬಸನಗೌಡ ಪಾಟೀಲ ಬಂಧಿತ ಆರೋಪಿ. ಈತ ಬಿಜಾಪುರ, ಗದಗ, ಬಾಗಲಕೋಟೆ, ರಾಮನಗರ ಜಿಲ್ಲೆಗಳ 15ಕ್ಕೂ ಹೆಚ್ಚಿನ ನಿರುದ್ಯೋಗಿ ವಿದ್ಯಾವಂತ ಯುವಕ-ಯುವತಿಯರಿಂದ ಸರಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ 2 ಲಕ್ಷ ರಿಂದ 5 ಲಕ್ಷ ರೂ.ವರೆಗೂ ಹಣ ಪಡೆದು ವಂಚಿಸಿರುವ ಬಗ್ಗೆ ಸಿಸಿಬಿ ಕಚೇರಿಗೆ ದೂರುಗಳು ಬಂದಿದ್ದವು.
ಉಪ ಪೊಲೀಸ್ ಆಯುಕ್ತ ಗಿರೀಶ್ ನೇತೃತ್ವದಲ್ಲಿ ಆರೋಪಿ ವೀರನಗೌಡ ಬಸನಗೌಡ ಪಾಟೀಲರನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಈ ವೇಳೆ ಬಂಧಿತ ಆರೋಪಿಯು ಕಳೆದ 4 ವರ್ಷಗಳಿಂದ ಯುವಕ, ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ, ಕೇಂದ್ರ ರೈಲ್ವೆ ನಿಗಮ ನಡೆಸುವ ಪರೀಕ್ಷೆಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿರುವ ಬಗ್ಗೆ ತಿಳಿದು ಬಂದಿದೆ. ಇಲ್ಲಿಯವರೆಗೂ ಸುಮಾರು 75 ರಿಂದ 80ಲಕ್ಷ ರೂ.ಗಳನ್ನು ಪಡೆದು ವಂಚಿಸಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.