ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ಹಿಂದುಳಿದ ವಿದ್ಯಾರ್ಥಿಗಳಿಂದ ಧರಣಿ

Update: 2019-03-07 16:01 GMT

ಬೆಂಗಳೂರು, ಮಾ. 7: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಮುದಾಯವು ಹಲವು ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಬೃಹತ್ ಮಟ್ಟದ ಧರಣಿ ಸತ್ಯಾಗ್ರಹ ನಡೆಸಿದೆ.

ಗುರುವಾರ ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮುಂಭಾಗ ನಡೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿವಿಯ ಕುಲಪತಿಗಳು ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು. ಆದರೆ, ಅದಕ್ಕೆ ಒಪ್ಪದ ವಿದ್ಯಾರ್ಥಿಗಳು ಬೇಡಿಕೆಗಳನ್ನು ಈಡೇರಿಸುವ ಕುರಿತು ಲಿಖಿತ ರೂಪದಲ್ಲಿ ನೀಡಲು ಒತ್ತಾಯಿಸಿದರು. ಅಲ್ಲದೆ, ಕುಲಪತಿಗಳು ಹಾಗೂ ಕುಲಸಚಿವರು ಬೇಡಿಕೆಗಳನ್ನು ಈಡೇರಿಸಲು ತಕ್ಷಣವೇ ಒಂದು ಸಮಿತಿಯನ್ನು ರಚಿಸಿ ಒಂದು ತಿಂಗಳ ಕಾಲಾವಧಿಯೊಳಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟು ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.

ಇದಕ್ಕೂ ಮೊದಲು ದಲಿತ ವಿದ್ಯಾರ್ಥಿಗಳ ಕೆಲ ಮುಖಂಡರು ಸ್ಥಳಕ್ಕೆ ಬಂದು ಧರಣಿ ನಿರತರನ್ನು ಧರಣಿ ನಡೆಸಬಾರದೆಂದು ಹಾಗೂ ತಮ್ಮ ಅನುಮತಿ ಇಲ್ಲದೆ ಇಲ್ಲಿ ಯಾರೂ ಪ್ರತಿಭಟನೆ ನಡೆಸಬಾರದೆಂದು ಹಿಂದುಳಿದ ವರ್ಗದ ವಿದ್ಯಾರ್ಥಿ ನಾಯಕ ವಿಕಲಚೇತನ, ಧನಂಜಯ ಹಾಗೂ ಇತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ಸಮಯದಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News