ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಹುದ್ದೆ ಇತರೆ ಜಾತಿಗೆ: ದಸಂಸ ಗಂಭೀರ ಆರೋಪ

Update: 2019-03-07 16:12 GMT

ಬೆಂಗಳೂರು, ಮಾ. 7: ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯಲ್ಲಿ ದಲಿತರಿಗೆ ಮೀಸಲಿಟ್ಟ ಹುದ್ದೆಗಳನ್ನು ಇತರೆ ಜಾತಿಯವರಿಗೆ ನೀಡಿರುವುದರ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮಂಡಳಿಯ ಮುಂಭಾಗ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ತಿಳಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, 1984 ರಲ್ಲಿ ಮಂಡಳಿಯು ಅಭಿಯಂತರ, ಆಡಿಟ್ ಮ್ಯಾನೇಜರ್, ಪ್ರಾಜಕ್ಟ್ ಆಫೀಸರ್ ಮುಂತಾದ ಹುದ್ದೆಗೆ ನೇರ ನೇಮಕಾತಿಗಾಗಿ ಪ್ರಕಟಣೆ ನೀಡಿದ್ದು, ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟ ಬಹಳಷ್ಟು ಹುದ್ದೆಗಳನ್ನು ಇತರೆ ಜಾತಿಯ ಅಭ್ಯರ್ಥಿಗಳಿಗೆ ನೀಡಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಹೈಕೋರ್ಟ್‌ನ ಅಸಿಂಧು ತೀರ್ಫು: ಕುರುಬ ಜನಾಂಗಕ್ಕೆ ಸೇರಿದ ಎಂ.ರಾಮ ಅವರು ಪರಿಶಿಷ್ಟ ಜಾತಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ.ಜಾತಿಯ ಕೋಟಾದಲ್ಲಿ ಅಧಿಕ ಮುಖ್ಯ ಅಭಿವೃದ್ಧಿ ಅಧಿಕಾರಿ(ಎಸಿಡಿಒ) ಹುದ್ದೆಗೆ ನೇಮಕಕೊಂಡು ಸರಕಾರಕ್ಕೆ ಅನ್ಯಾಯ ಮಾಡಿದ್ದಾರೆ. ಸರಕಾರ ಅದನ್ನು ಪರಿಶೀಲಿಸಿ 2015 ರಲ್ಲಿ ಹೈಕೋರ್ಟ್ ಅವರ ಹುದ್ದೆ ಅಸಿಂಧು ಎಂದು ತೀರ್ಪು ನೀಡಿದ್ದರೂ ಸರಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ಕೂಡಲೇ ಸಕಾರ ಇವರ ವಿರುದ್ದ ಕ್ರಮ ಕೈಗೊಳ್ಳದಿದ್ದಲ್ಲಿ ಮಂಡಳಿಯ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News