ಶೇಖ್ ನೆನಪು

Update: 2019-03-08 06:41 GMT

ಇಂದು ನಾಡಿನ ಹೆಮ್ಮೆಯಾದ ಪಿ. ಲಂಕೇಶ್ ಜನ್ಮದಿನ. ಲಂಕೇಶ್ ಅವರು ಕಾಶ್ಮೀರದ ಹಿರಿಯ ಜನನಾಯಕ ಶೇಖ್ ಅಬ್ದುಲ್ಲಾರ ಬಗ್ಗೆ ಮೇ 26-1991ರಂದು ಬರೆದ ಲೇಖನವನ್ನು ಇಂದಿನ ಸಂದರ್ಭಕ್ಕೆ ಪ್ರಸ್ತುತವೆಂದು ಇಲ್ಲಿ ಪ್ರಕಟಿಸಲಾಗಿದೆ.

ಅಲ್ಲಿ ಐದರಲ್ಲಿ ನಾಲ್ಕು ಭಾಗದಷ್ಟು ಮುಸ್ಲಿಮರು; ಬೆಟ್ಟಗುಡ್ಡಗಳ, ನದಿ ಅರಣ್ಯಗಳ, ಸರೋವರ, ಮಂಜು, ಹಸಿರು ಮೈದಾನಗಳ ಈ ನಾಡು ಸ್ವರ್ಗವೆಂಬುದು ಇದ್ದರೆ ಚೆಂದದಲ್ಲಿ ಅದಕ್ಕಿಂತ ಯಾವುದರಲ್ಲೂ ಕಡಿಮೆ ಇಲ್ಲ. ಗಟ್ಟಿ ದೇಹದ, ಕಷ್ಟಸಹಿಷ್ಣುಗಳಾದ ಜನ; ಲಕ್ಷಾಂತರ ವರ್ಷಗಳ ಚರಿತ್ರೆ, ಪರಂಪರೆಯುಳ್ಳ ಸ್ವಾಭಿಮಾನದ ಜನ. ಆದರೆ ಸುಂದರ ಪ್ರಕೃತಿಯ ಈ ಜನ ಬಡತನ, ವೌಢ್ಯ, ಜಾತೀಯತೆಯಲ್ಲಿ ಮುಳುಗಿದ್ದರು. ಅವರ ಈ ದಾರಿದ್ರಕ್ಕೆ ಅವರನ್ನಾಳುತ್ತಿದ್ದ ಹರಿಸಿಂಗ್ ಎಂಬ ಹಿಂದೂ ದೊರೆ ಕಾರಣವೆಂದು ತಿಳಿದಿದ್ದರು. ಅವರ ಈ ತಿಳಿವಳಿಕೆಗೆ ಸರಿಯಾಗಿ ಹರಿಸಿಂಗ್ ಕ್ರೂರಿಯಾದ ದೊರೆಯಾಗಿದ್ದ; ಅನ್ಯಾಯ, ಹಿಂಸೆ, ಧರ್ಮ ಅವನ ಆಡಳಿತದ ಮುಖ್ಯ ಲಕ್ಷಣಗಳಾಗಿದ್ದವು. ಅವನೆದುರು ಸೊಲ್ಲೆತ್ತಿದವರನ್ನು ಅವನು ಇರಗೊಡುತ್ತಿರಲಿಲ್ಲ; ಇಡೀ ದೇಶವನ್ನು ಆತ ಗುಲಾಮಗಿರಿಗೆ ತಳ್ಳಿದ್ದ.

ಸಹಜವಾಗಿಯೇ ಮುಸ್ಲಿಮರು ಈ ಹರಿಸಿಂಗ್‌ನನ್ನು ದ್ವೇಷಿಸುತ್ತಿದ್ದರು; ಅವನನ್ನು ಕಿತ್ತೊಗೆದು ಹಿಂದೂಗಳನ್ನು ಹತ್ತಿಕ್ಕಿದರೆ ತಮ್ಮ ದಾರಿದ್ರ ಕೊನೆಗೊಳ್ಳುವುದೆಂದು ತಿಳಿದಿದ್ದರು.

ಇಂಥವರ ನಡುವೆ ವಿದ್ಯಾವಂತನಾದ ಹುಡುಗನೊಬ್ಬ ಕಾಣಿಸಿಕೊಂಡ. ಈತ ಮುಸ್ಲಿಂ. ಈತನ ಹೆಸರು ಶೇಖ್. ಆಗತಾನೇ ಅಲಿಗಡದಲ್ಲಿ ವಿದ್ಯಾಭ್ಯಾಸ ಮುಗಿಸಿ ತನ್ನ ಸುಂದರ ಕಾಶ್ಮೀರಕ್ಕೆ ಬಂದಿದ್ದ. ಇವನು ತನ್ನ ನಾಡಿನ ದುರ್ಗತಿಗೆ ಕಾರಣವೇನೆಂದು ಕೇಳಿಕೊಳ್ಳುತ್ತ ಸುತ್ತಾಡಿದ. ಒಂದು ದಿನ ಈತ ಸೇಬಿನಹಣ್ಣಿನ ತೋಟವೊಂದರ ಹತ್ತಿರ ನಡೆಯುತ್ತಿದ್ದ. ಆ ತೋಟದಲ್ಲಿ ಸೇಬಿನಹಣ್ಣು ಕೀಳಲು ಮರದ ತುದಿಯವರೆಗೆ ಹತ್ತಿದವನೊಬ್ಬ ಹಣ್ಣಿನ ಗೊಂಚಲ ಭಾರದಿಂದ ಕೊಂಬೆ ತುಂಡಾಗಿ ಕೆಳಗೆ ಬಿದ್ದ. ಅವನು ಬಿದ್ದೊಡನೆ ತೋಟದ ಮಾಲಕನಾದ ಮುಸ್ಲಿಂ ಅವನಲ್ಲಿಗೆ ಬಂದು ಕೊಂಬೆ ಕತ್ತರಿಸಿದ್ದಕ್ಕೆ, ಹಣ್ಣು ಪೋಲು ಮಾಡಿದ್ದಕ್ಕೆ ಅವನನ್ನು ಹಿಡಿದು ಕೊಂಡು ಚಚ್ಚತೊಡಗಿದ. ಆ ಕೆಲಸಗಾರ ಹಿಂದೂ. ಶೇಖ್ ಅವನನ್ನು ಕರೆದುಕೊಂಡು ಹೋಗಿ ಗಾಯಗಳಿಗೆ ಔಷಧಿ ಹಚ್ಚಿಸಿ ಅವನೊಂದಿಗೆ ಅವನ ಮನೆಗೆ ಹೋದ. ಆ ಕೆಲಸಗಾರನ ಮನೆ ತೀರಾ ಚಿಕ್ಕ ಗುಡಿಸಲಾಗಿತ್ತು. ಒಂದು ಮೂಲೆಯಲ್ಲಿದ್ದ ದೇವರು, ಪಟಗಳು ಇತ್ಯಾದಿಯನ್ನು ಬಿಟ್ಟರೆ ಅತ್ಯಂತ ಬಡ ಕುಟುಂಬವೆಂಬುದು ಯಾರಿಗೂ ತಿಳಿಯುತ್ತಿತ್ತು. ಬಡ ಮುಸ್ಲಿಂ ಕುಟುಂಬಕ್ಕೂ ಈ ಹಿಂದೂವಿನ ಕುಟುಂಬಕ್ಕೂ ವ್ಯತ್ಯಾಸವೇ ಇರಲಿಲ್ಲ. ಇವನ ಅಸಹಾಯಕತೆಗೂ ಮುಸ್ಲಿಮನ ಅಸಹಾಯಕತೆಗೂ ವ್ಯತ್ಯಾಸವಿರಲಿಲ್ಲ. ಆದ್ದರಿಂದ ಶೇಖ್ ಹಿಂದೂ, ಮುಸ್ಲಿಂ ಧರ್ಮಗಳನ್ನು ಮೀರಿದ ಯಾವುದೋ ಈ ಬಡತನಕ್ಕೆ ಕಾರಣ ಎಂದು ತನ್ನ ನಾಡಿನ ಜನರನ್ನು ಅಭ್ಯಸಿಸುತ್ತ ಹೋದ. ಕಾಶ್ಮೀರ ಕಲ್ಲು ಕೆತ್ತುವುದಕ್ಕೆ ಪ್ರಸಿದ್ಧ; ಕಲ್ಲು ಒಡೆದು, ಕೆತ್ತಿ ಕಟ್ಟಡ ಕಟ್ಟುವವರೆಲ್ಲ ಬಡ ಹಿಂದೂಗಳೇ. ಹಾಗೆಯೇ ಕಾಶ್ಮೀರ ರತ್ನಗಂಬಳಿಗಳಿಗೆ ನೇಯ್ಗೆ ಕೆಲಸಕ್ಕೆ ಪ್ರಸಿದ್ಧ. ಸ್ವತಃ ಶೇಖ್ ನೇಯ್ಗೆ ಕುಟುಂಬದಿಂದ ಬಂದವನು. ಲಕ್ಷಾಂತರ ಜನ ನೇಯ್ಗೆಯವರು, ಅತ್ಯಂತ ತಾಳ್ಮೆಯಿಂದ ಜಗತ್ಪ್ರಸಿದ್ಧ ರತ್ನಗಂಬಳಿ, ಜಮಖಾನ ನೇಯುವವರು ಕಡುಬಡವರಾಗಿದ್ದರು; ಅವರ ಶ್ರಮದ ಲಾಭ ಪಡೆದ ವ್ಯಾಪಾರಿಗಳು ಕೋಟ್ಯಧೀಶರಾಗಿದ್ದರು. ಶ್ರಮಕ್ಕೆ ತಕ್ಕ ವರಮಾನವಿಲ್ಲ; ಉಳುವ ರೈತನಿಗೆ ಜಮೀನಿಲ್ಲ. ಶೇಖ್ ತನ್ನ ನಾಡಿನ ದುಃಸ್ಥಿತಿಗೆ ದುಷ್ಟ ರಾಜನ ಆಳ್ವಿಕೆಯೇ ಕಾರಣ, ಯಾವುದೇ ಧರ್ಮವಲ್ಲ ಎಂದು ತೀರ್ಮಾನಿಸಿದ.

ಕಾಶ್ಮೀರದಲ್ಲಿದ್ದ ಮುಸ್ಲಿಮರು, ಹಿಂದೂಗಳು, ಸಿಖ್‌ಗಳು, ಕ್ರಿಶ್ಚಿಯನ್ನರೆಲ್ಲ ಅಣ್ಣತಮ್ಮಂದಿರಂತೆ ಒಗ್ಗಟ್ಟಾಗಿ ಸಂಘಟನೆಗೊಂಡು ಕ್ರೂರ ದೊರೆಯ ವಿರುದ್ಧ ಹೋರಾಡಿ ಸ್ವಾತಂತ್ರ ಪಡೆದು ಕಾಶ್ಮೀರ ಸರ್ವಧರ್ಮದ ನಾಡಾಗಿ ಬೆಳೆಸಬೇಕೆಂದು ಯೋಜನೆ ಹಾಕಿಕೊಂಡ.

ಶೇಖ್ ಅಬ್ದುಲ್ಲಾ ಎಂಬ ಕಾಶ್ಮೀರದ ಸಿಂಹನ ಬಗ್ಗೆ, ಆತ ಸಂಘಟಿಸಿದ ಹೋರಾಟದ ಬಗ್ಗೆ ನಮ್ಮ ಜನಕ್ಕೆ ಗೊತ್ತಿಲ್ಲ; ಆತನ ಉದ್ದೇಶ, ಸಾಧನೆಗಳೆಲ್ಲ ಗಾಂಧೀಜಿಯ ಉದ್ದೇಶ ಮತ್ತು ಸಾಧನೆ ಗಳಂತೆಯೇ ಮಣ್ಣುಗೂಡುತ್ತಿರುವ ಈ ಸಮಯದಲ್ಲಿ, ಕಾಶ್ಮೀರ ನಮ್ಮೆಲ್ಲರಿಂದ ಮಾನಸಿಕವಾಗಿ ದೂರವಾಗುತ್ತಲೇ ಇರುವ ಈ ಸಂದರ್ಭದಲ್ಲಿ ಜಾತಿವಾದಿಗಳು ಎಲ್ಲೆಲ್ಲೂ ಬೊಬ್ಬೆ ಹಾಕುತ್ತಿರುವ ಸಂದರ್ಭದಲ್ಲಿ ಈತನನ್ನು ಒಮ್ಮೆ ನೆನೆಯುವುದು ಒಳ್ಳೆಯದು.

ಶೇಖ್ ಅಬ್ದುಲ್ಲಾ ಆರಿಸಿಕೊಂಡ ದಾರಿ ಸುಲಭವಾಗಿರಲಿಲ್ಲ. ಒಮ್ಮೆ ಶ್ರೀನಗರದಲ್ಲಿ ಜಾತಿ ಗಲಭೆಯಾಯಿತು. ಏಳು ಸೇತುವೆಗಳ ಶ್ರೀನಗರದ ಎರಡನೆ ಸೇತುವೆಯ ಹತ್ತಿರ ಹಿಂದೂ ಹೆಣ್ಣುಮಗಳೊಬ್ಬಳು ಸತ್ತುಬಿದ್ದಿದ್ದಳು. ಆ ಹೆಣವನ್ನು ಎತ್ತುವ ಧೈರ್ಯ ಯಾರಿಗೂ ಇರಲಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ಶವವೊಂದಕ್ಕೆ ಎರಡೂ ದಿನಗಳೊಳಗೆ ಸಂಸ್ಕಾರವಾಗಬೇಕು. ಮುಸ್ಲಿಮರಿಗೆ ಹೆದರಿಕೊಂಡು ಹಿಂದೂಗಳು, ಜಾತಿವಾದಿಗಳಿಗೆ ಹೆದರಿಕೊಂಡು ಸರಕಾರ ಈ ಶವವನ್ನು ನಿರ್ಲಕ್ಷಿಸಿತು. ಆಗ ಶೇಖ್ ಧೈರ್ಯವಾಗಿ ಹೆಣ ಎತ್ತಿಕೊಂಡು, ದೋಣಿಯಲ್ಲಿಟ್ಟು, ಶುಭ್ರ ಬಿಳಿ ಬಟ್ಟೆಯಲ್ಲಿ ಅದನ್ನು ಮುಚ್ಚಿ, ಆ ಹೆಣ್ಣು ಮಗಳ ಸಂಬಂಧಿಗಳೊಂದಿಗೆ ದೋಣಿಯಲ್ಲಿ ಸಾಗಿದ. ಆತನ ಕೆಲಸ ಗಮನಿಸಿದ ಜಾತಿವಾದಿಗಳಾದ ಮುಸ್ಲಿಮರು ದಡದ ಮೇಲೆ ನಿಂತು ‘‘ಹೆಣ ಸುಡುವವ!’’ ಎಂದು ಹೀಯಾಳಿಸಿದರು. ಶೇಖ್ ಜಗ್ಗಲಿಲ್ಲ. ಆ ಹೆಣ್ಣು ಮಗಳ ಶವಸಂಸ್ಕಾರ ಮಾಡಿದ.

ಹಾಗೆಯೇ ಹಿಂದೂ, ಮುಸ್ಲಿಮರ, ಹೆಣ್ಣು- ಗಂಡುಗಳ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವನ್ನು ಸಂಘಟಿಸಿ ದೊರೆ ಹರಿಸಿಂಗನ ವಿರುದ್ಧ ಹೋರಾಡತೊಡಗಿದ. ಭೂಗತ ಸೈನ್ಯ ಕಟ್ಟಿ ಕಾಶ್ಮೀರದ ಹಳ್ಳಿ, ಪಟ್ಟಣಗಳಲ್ಲೆಲ್ಲ ಹರಿಸಿಂಗ್ ವಿರುದ್ಧ ಬಂಡಾಯ ಬೆಳೆಯುವಂತೆ ಮಾಡಿದ. ಗಾಂಧಿ, ನೆಹರೂ, ಪಟೇಲರ ಸಹಕಾರದಿಂದ ಬೆಳೆಯತೊಡಗಿದ ಜಾತಿ, ಲಿಂಗದ ಭೇದವಿಲ್ಲದ ಜನತೆಯ ಪಕ್ಷದ ಎದುರು ಹರಿಸಿಂಗ್ ತತ್ತರಿಸತೊಡಗಿದ.

ಕುರ್‌ಆನ್ ಬಲ್ಲ ಶೇಖ್ ವಿಜ್ಞಾನದ ವಿದ್ಯಾರ್ಥಿಯಾಗಿದ್ದ; ಜನಸಾಮಾನ್ಯರಿಗೆ ಧರ್ಮದ ಅರ್ಥವನ್ನು ವಿವರಿಸಿ ಹೇಳಬಲ್ಲವನಾಗಿದ್ದ. ಎಲ್ಲ ಧರ್ಮಗಳ ಮಾನವೀಯತೆ, ಪ್ರೀತಿ ಅರಿತಿದ್ದ ಶೇಖ್ ಎಲ್ಲ ಜಾತಿಯ ಜನಕ್ಕೆ ಧರ್ಮಗಳೆಲ್ಲದರ ಇಂಗಿತ ವಿವರಿಸಿ ಹೇಳಬಲ್ಲವನಾಗಿದ್ದ. ಹಾಗೆಯೇ ಅದ್ಭುತ ಸಂಘಟನಾ ಶಕ್ತಿ ಪಡೆದಿದ್ದ; ಎಲ್ಲ ಜಾತಿಯ ವೌಲ್ವಿಗಳು, ಸಾಮಾನ್ಯರು, ಧಾರ್ಮಿಕರು ಅವನಲ್ಲಿ ವಿಶ್ವಾಸವಿಟ್ಟಿದ್ದರು. ಈತನ ಸಂಘಟನೆ ಪ್ರಬಲವಾಗಿ ಬೀದಿ ಬೀದಿಗಳಲ್ಲಿ ದೊರೆಯ ವಿರುದ್ಧ ಪ್ರತಿಭಟನೆ ಕಂಡುಬಂದೊಡನೆ, 1931ರಲ್ಲಿ ಹರಿಸಿಂಗ್ ಶೇಖ್‌ನನ್ನು ದಸ್ತಗಿರಿ ಮಾಡಿ ಕೋಟೆಯೊಂದರಲ್ಲಿ ಇಟ್ಟ. ಇಡೀ ಕಾಶ್ಮೀರ ಪ್ರತಿಭಟಿಸಿ ಬಂದ್ ಆಚರಿಸಿತು; ಜನರು ದೊರೆಯ ವಿರುದ್ಧ ರೊಚ್ಚಿಗೆದ್ದರು. ದೊರೆ ಹೆದರಿ ಹದಿನೆಂಟನೆಯ ದಿನ ಮುಗಿಯುವುದರೊಳಗೆ ಶೇಖ್‌ನನ್ನು ಬಿಡುಗಡೆ ಮಾಡಿದ. ಈ ಬಗ್ಗೆ ಅನೇಕ ಕತೆಗಳಿವೆ. ಒಂದು ಕತೆಯ ಪ್ರಕಾರ ಶೇಖ್ ದಸ್ತಗಿರಿಯಾದ ಹದಿನೆಂಟನೆಯ ದಿನ ದೊರೆ ಹರಿಸಿಂಗ್ ಶೇಖ್ ಸೆರೆಯಲ್ಲಿದ್ದ ಕೋಟೆಗೆ ಬಂದು ದೊಡ್ಡ ಕೊಪ್ಪರಿಗೆಯೊಂದರಲ್ಲಿ ಎಣ್ಣೆ ಕಾಯಿಸಿ ಅವನನ್ನು ಅದರಲ್ಲಿ ಎಸೆಯಲು ಸೈನಿಕರಿಗೆ ಆಜ್ಞೆ ಮಾಡಿದ. ಆದರೆ ಶೇಖ್ ಹೇಳಿದ, ‘‘ಎಸೆಯುವ ಕಷ್ಟ ಬೇಡ, ನಾನೇ ಅದರೊಳಕ್ಕೆ ಹೋಗುತ್ತೇನೆ.’’ ಹೀಗೆಂದು ಹೇಳಿ ಶೇಖ್ ಕೊಪ್ಪರಿಗೆಯತ್ತ ತಣ್ಣಗೆ ನಡೆಯತೊಡಗಿದ. ದೊರೆ ಆತನ ದಿಟ್ಟತನ, ಪ್ರಶಾಂತ ಮುಖ ಕಂಡು ಬೆಚ್ಚಿ ತನ್ನ ಆಜ್ಞೆಯನ್ನು ಹಿಂದೆಗೆದುಕೊಂಡು ಹೊರಟುಹೋದ.

ಕಾಶ್ಮೀರದ ಸಿಂಹ ಶೇಖ್ ಒಟ್ಟು ಎಂಟು ಸಲ ಸೆರೆಮನೆ ವಾಸ ಅನುಭವಿಸಿದ. 1931ರ ಸೆರೆಮನೆ ವಾಸ ಐತಿಹಾಸಿಕವಾದ್ದರಿಂದ ಪ್ರಸಿದ್ಧವಾಗಿದೆ. ಮತ್ತೊಮ್ಮೆ 1947ರಲ್ಲಿ ಪಾಕಿಸ್ತಾನಿ ಕೂಲಿ ಸೈನಿಕರು ಕಾಶ್ಮೀರಕ್ಕೆ ನುಗ್ಗುವ ಮುನ್ನ ಹರಿಸಿಂಗ್ ಶೇಖ್‌ನನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕಿದ. ಈ ಸಲ ಶೇಖ್‌ನ ಸಂಘಟನೆ ತನ್ನೆಲ್ಲ ಸಾಮರ್ಥ್ಯ ತೋರಿತು. ಶೇಖ್ ಬೇರೆ ಬೇರೆ ಜಾತಿಗಳನ್ನು ಮಾತ್ರ ಒಗ್ಗೂಡಿಸಿರಲಿಲ್ಲ; ಆತ ಮಹಿಳೆಯರಿಗೆ ಹೋರಾಟದ ತರಬೇತಿ ನೀಡಿದ್ದ. ಇಡೀ ಕಾಶ್ಮೀರ ಬಂದ್ ಆಚರಿಸಿದ್ದು ಮಾತ್ರವಲ್ಲ; ಕಾಶ್ಮೀರದ ಎಲ್ಲ ಜಾತಿಯ ಹೆಣ್ಣು ಮಕ್ಕಳೂ ಬೀದಿಗಿಳಿದು ಪ್ರತಿಭಟಿಸಿದರು. ಹೆಣ್ಣುಮಕ್ಕಳು ರಸ್ತೆಯಲ್ಲಿ ಮಲಗಿ ಹರಿಸಿಂಗ್‌ನ ವಾಹನ ಮುಂದೆ ಹೋಗದಂತೆ ತಡೆದರು. ಇದನ್ನು ಕಂಡು ಹರಿಸಿಂಗ್ ದಿಕ್ಕೆಟ್ಟು ಹೋದ. ಅವನ ಸ್ನೇಹಿತರಾಗಿದ್ದ ಮಹಾರಾಜರುಗಳಾಗಲಿ, ಆರೆಸ್ಸೆೆಸ್ ಸಂಘಟನೆಯಾಗಲಿ ಅವನಿಗೆ ಧೈರ್ಯ ತುಂಬಲಾಗಲಿಲ್ಲ. ಬೇರೆ ದಾರಿಯನ್ನೇ ಕಾಣದೆ ಹರಿಸಿಂಗ್ ಶೇಖ್‌ನನ್ನು ಬಿಡುಗಡೆ ಮಾಡಿದ.

ಶೇಖ್ ತನ್ನ ನ್ಯಾಷನಲ್ ಕಾನ್ಫರೆನ್ಸನ್ನು ಬಲಪಡಿಸಿ ಹೋರಾಟ ನಡೆಸುತ್ತಿದ್ದಾಗಲೇ ಭಾರತಕ್ಕೆ ಸ್ವಾತಂತ್ರ ದೊರೆಯುವ ಗಳಿಗೆ ಬಂತು. ಕಾಶ್ಮೀರ ಭಾರತಕ್ಕೆ ಸೇರಬೇಕೋ ಪಾಕಿಸ್ತಾನಕ್ಕೆ ಸೇರಬೇಕೋ ಎಂಬ ಸಮಸ್ಯೆ ಎದ್ದಿತು. ಪಾಕಿಸ್ತಾನದಲ್ಲಿ ಜಿನ್ನಾ ನಾಯಕನಾಗಿದ್ದ; ಆತ ಕಾಶ್ಮೀರದ ಜಾತ್ಯತೀತ, ಪ್ರಜಾಪ್ರಭುತ್ವಾತ್ಮಕ ಸ್ಥಿತಿಯನ್ನು ನೋಡಿ ಬೆಚ್ಚಿ ಕಾಶ್ಮೀರದ ನಿಯೋಗದೊಂದಿಗೆ ಮಾತನಾಡಲೂ ನಿರಾಕರಿಸಿದ.

ಅಷ್ಟರಲ್ಲಿ ಭಾರತಕ್ಕೆ ಸ್ವಾತಂತ್ರ ಬಂದ ಕೇವಲ ಆರು ವಾರದಲ್ಲಿ 1947ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ತನ್ನ ತಂಟೆ ಶುರುಮಾಡಿತು. ಪಾಕಿಸ್ತಾನದ ಕುಮ್ಮಕ್ಕಿನಿಂದ ಪಾಕಿಸ್ತಾನದ ಗಡಿನಾಡಿನ ಗಿರಿಜನರ ಗುಂಪೊಂದು ಕಾಶ್ಮೀರಕ್ಕೆ ನುಗ್ಗಿತು. ಈ ಘಟನೆಯನ್ನು ಪ್ರತ್ಯಕ್ಷ ಕಂಡು ವರದಿ ಮಾಡಲು ಹೋಗಿದ್ದ ಪ್ರಖ್ಯಾತ ಛಾಯಾ ಚಿತ್ರಗಾರ್ತಿ ಮಾರ್ಗರೆಟ್ ಬರ್ಕ್-ವೈಟ್ ಹೇಳಿದ್ದಾರೆ: ‘‘ನಾನು ಕಾಶ್ಮೀರಕ್ಕೆ ನುಗ್ಗುತ್ತಿದ್ದ ಪಾಕಿಸ್ತಾನದ ಒರಟರಾದ ಗಿರಿಜನರನ್ನು ಕೇಳಿದೆ- ‘ಎಲ್ಲಿಗೆ ಹೋಗುತ್ತಿದ್ದೀರಿ?’ ಅವರೆಂದರು, ‘ಕಾಶ್ಮೀರದ ನಮ್ಮ ಮುಸ್ಲಿಂ ಸಹೋದರರನ್ನು ರಕ್ಷಿಸುವುದಕ್ಕೆ.’ ಅವರು ಸ್ವಲ್ಪ ಕಾಲದಲ್ಲೇ ತಮ್ಮ ರಕ್ಷಣೆಯ ಕೆಲಸ ಮಾಡಿದರು. ಕಾಶ್ಮೀರವನ್ನು ಲೂಟಿ ಹೊಡೆದು ಅವರ ಹೆಣ್ಣು ಮಕ್ಕಳನ್ನು ಕೂಡ ಅಪಹರಿಸಿಕೊಂಡು ಬರತೊಡಗಿದರು. ಇಡೀ ಕಾಶ್ಮೀರ ಬೆಚ್ಚಿತು.’’

ಅದೇ ಶ್ರೀಮತಿ ಬರ್ಕ್-ವೈಟ್ ಹೇಳುತ್ತಾರೆ:

‘‘ಕಾಶ್ಮೀರದ ಹೋರಾಟಗಾರರು ಪಾಕಿಸ್ತಾನಿ ಬಾಡಿಗೆ ಸೈನ್ಯದ ವಿರುದ್ಧ, ಹರಿಸಿಂಗ್‌ನ ಸೈನ್ಯದ ವಿರುದ್ಧ ಹೋರಾಡಲು ಹರಿಸಿಂಗ್ ತುಂಬ ನೆರವಾದ- ಕಾಶ್ಮೀರದಿಂದ ಓಡಿಹೋಗುವ ಮೂಲಕ. ಗಡಿನಾಡ ಪಾಕಿಸ್ತಾನಿಗಳು ಕಾಶ್ಮೀರಕ್ಕೆ ಕಾಲಿಟ್ಟೊಡನೆ ಹರಿಸಿಂಗ್ ತನ್ನ ಅರಮನೆಯಲ್ಲಿದ್ದ ಹಣ, ಒಡವೆ, ಬೆಲೆಬಾಳುವ ವಸ್ತುಗಳು-ಎಲ್ಲದರೊಂದಿಗೆ ಪೆಟ್ರೋಲ್ ಕೂಡ ತೆಗೆದುಕೊಂಡು ಪರಾರಿಯಾದ. ದೇವರ ಮೇಲಿನ ಒಡವೆಗಳನ್ನು ಕೂಡ ಈತ ಬಿಟ್ಟಿರಲಿಲ್ಲ.’’

ಈ ಹರಿಸಿಂಗ್ ಕಾಲು ಕಿತ್ತೊಡನೆ ಭಾರತದ ನೆರವು ಕೇಳಿದ ಶೇಖ್ ಅಬ್ದುಲ್ಲಾ ಕಾಶ್ಮೀರ ಭಾರತದ ಭಾಗವೆಂದು ಕರಾರು ಮಾಡಿಕೊಂಡ; ಹರಿಸಿಂಗ್ ಕೂಡ ತನ್ನ ಹೊಸ ಜಮ್ಮು ಅರಮನೆಯಿಂದಲೇ ಕರಾರಿಗೆ ಒಪ್ಪಿಕೊಂಡ. ಆಗ ಶೇಖ್ ಅಬ್ದುಲ್ಲಾರಿಂದ ತರಬೇತಿ ಪಡೆದ ಸ್ವಯಂಸೇವಕರು ಇಡೀ ರಾಜ್ಯವನ್ನು ಒಪ್ಪವಾಗಿ, ಯಾರಿಗೂ ಅನ್ಯಾಯವಾಗದಂತೆ, ಗೊಂದಲದಲ್ಲಿ ದುರಂತಗಳಾಗದಂತೆ ನಡೆಸತೊಡಗಿದರು. ಅಷ್ಟರಲ್ಲಿ ಪಾಕಿಸ್ತಾನದ ಬಾಡಿಗೆ ಸೈನಿಕರು ಕಾಶ್ಮೀರದ ನೆಲ ಆಕ್ರಮಿಸಿಕೊಂಡು ಆಝಾದ್ ಕಾಶ್ಮೀರ ಎಂದು ಹೆಸರಿಟ್ಟು ದರೋಡೆ, ಲೂಟಿ, ವ್ಯಭಿಚಾರ ನಡೆಸಿದರು. ಬಾರಾಮುಲ್ಲಾ ಎಂಬ ಪಟ್ಟಣವನ್ನು ಭಾರತ, ಕಾಶ್ಮೀರದ ಸೈನ್ಯ ಪಾಕಿಸ್ತಾನದಿಂದ ಹಿಂದಕ್ಕೆ ಕಿತ್ತುಕೊಂಡ ಮೇಲೆ ಅಲ್ಲಿ ನಡೆದ ಒಂದು ಘಟನೆಯನ್ನು ಜನ ಈಗಲೂ ನೆನೆಯುತ್ತಾರೆ.

ಬಾರಾಮುಲ್ಲಾ ಪಟ್ಟಣದಲ್ಲಿ ಪುಟ್ಟ ಅಂಗಡಿಯನ್ನಿಟ್ಟುಕೊಂಡಿದ್ದ ಮಖ್ಬೂಲ್ ಶರ್‌ವಾನಿ,ಈತ ಶೇಖ್ ಅಬ್ದುಲ್ಲಾ ಅನುಯಾಯಿಯಾಗಿದ್ದ; ಶೇಖ್ ನಂಬಿದ್ದ ಜಾತ್ಯತೀತತೆ ಮತ್ತು ಸರ್ವಧರ್ಮ ಸೋದರತ್ವದಲ್ಲಿ ನಂಬಿಕೆ ಇಟ್ಟಿದ್ದ. ಶೇಖ್ ಅಬ್ದುಲ್ಲಾ ಸ್ವಾತಂತ್ರ ಸಂಗ್ರಾಮವನ್ನು ಬಲಪಡಿಸಿ ದೊರೆಯ ವಿರುದ್ಧ ಬಂಡೆದ್ದಾಗ ಶರ್‌ವಾನಿ ಶೇಖ್ ಸೈನ್ಯದ ಮುಂಚೂಣಿಯಲ್ಲಿದ್ದ. ಕಾಶ್ಮೀರದ ಪ್ರತಿಯೊಂದು ಹಳ್ಳಿ ಮತ್ತು ರಸ್ತೆ, ಕವಲುದಾರಿಯನ್ನು ಬಲ್ಲ ಶರ್‌ವಾನಿ ಸರಕಾರದಿಂದ ಯಾವ ಗ್ರಾಮಸ್ಥನಿಗೆ ಅನ್ಯಾಯವಾದರೂ ಸಿಡಿದೆದ್ದು ಕ್ರಮ ಕೈಗೊಳ್ಳುತ್ತಿದ್ದ; ಬಡ ರೈತರ ಮೇಲೆ ದಬ್ಬಾಳಿಕೆಯಾದರೆ ಎಲ್ಲ ಜಾತಿಯವರನ್ನೂ ಸಂಘಟಿಸಿ ಅನ್ಯಾಯ ಮಾಡಿದವರನ್ನು ಶಿಕ್ಷಿಸುತ್ತಿದ್ದ- ಪಾಕಿಸ್ತಾನದ ದರೋಡೆಕೋರರು ಕಾಶ್ಮೀರಕ್ಕೆ ನುಗ್ಗಿದ್ದಾಗ ಹಳ್ಳಿಹಳ್ಳಿಗೆ ಹೋಗಿ ಎಲ್ಲ ಜಾತಿಯವರೂ ಒಗ್ಗಟ್ಟಾಗಿರುವಂತೆ ಸಂಘಟಿಸಿ ಎರಡು ಸಲ ಪಾಕಿಸ್ತಾನೀ ಸೈನಿಕರನ್ನು ಸ್ವಯಂಸೇವಕರ ವ್ಯೆಹದ ಮೂಲಕ ಸೆರೆ ಹಿಡಿದಿದ್ದ. ‘ಭಾರತದ ಸೈನ್ಯ ಬರುತ್ತಿದೆ. ಹೆದರಬೇಡಿ’ ಎಂದು ಎಲ್ಲರಲ್ಲಿ ಧೈರ್ಯ, ಹುಮ್ಮಸ್ಸು ತುಂಬುತ್ತಿದ್ದ. ಶರ್‌ವಾನಿ ಮೂರನೆಯ ವ್ಯೆಹ ರಚನೆಯಲ್ಲಿದ್ದಾಗ ಪಾಕಿಸ್ತಾನಿ ಕೂಲಿ ಸೈನಿಕರಿಗೆ ಸೆರೆಸಿಕ್ಕಿದ. ಅವನನ್ನು ಹಿಡಿದ ಪಾಕಿಸ್ತಾನಿಗಳು ಅವನನ್ನು ಬಾರಾಮುಲ್ಲಾ ಪಟ್ಟಣದ ಚೌಕಕ್ಕೆ ಕರೆದೊಯ್ದರು. ಅತ್ಯಂತ ಜನಪ್ರಿಯ ನಾಯಕನಾಗಿದ್ದ ಶರ್‌ವಾನಿಗೆ ಬೇಡಿ ಹಾಕಿದ್ದನ್ನು ಕಂಡ ಜನ ಅವನ ರಕ್ಷಣೆಗೆ ನುಗ್ಗಿದರು. ಪಾಕಿಸ್ತಾನಿ ಸೈನಿಕರು ಅವರನ್ನು ಚಚ್ಚಿ ಹಿಂದಕ್ಕೆ ತಳ್ಳಿದರು. ಶರ್‌ವಾನಿಯನ್ನು ಕಂಬಕ್ಕೆ ಕಟ್ಟಿ ಥಳಿಸತೊಡಗಿದರು. ಅವನಿಗೆ ಹೇಳಿದರು: ‘‘ನೀನು ಹೇಳಬೇಕು-ಪಾಕಿಸ್ತಾನ್ ಜಿಂದಾಬಾದ್, ಶೇಖ್ ಅಬ್ದುಲ್ಲಾ ಮುರದಾಬಾದ್!’’

ಶರ್‌ವಾನಿ ಹೇಳಲು ನಿರಾಕರಿಸಿದ, ಅವನನ್ನು ಥಳಿಸಿ ಶಿಲುಬೆಗೆ ಕಟ್ಟಿದರು. ಅವನ ಕೈಗಳನ್ನು ಜೀಸಸ್ ಕ್ರಿಸ್ತನ ಕೈಗಳನ್ನು ಬಡಿದಂತೆ ಮೊಳೆಗಳಿಂದ ಶಿಲುಬೆಗೆ ಬಡಿದರು. ತಲೆಗೆ ಚಚ್ಚತೊಡಗಿದರು. ಸಾಯುವ ಮುನ್ನ ಶರ್‌ವಾನಿ ಕೂಗಿದ: ‘‘ಎಲ್ಲ ಧರ್ಮದ ಜನರ ಒಗ್ಗಟಿಗೆ ಜಯವಾಗಲಿ! ಎಲ್ಲ ಜಾತಿಗಳೂ ಒಂದೇ!’’

ಪಾಕಿಸ್ತಾನಿ ಸೈನಿಕರು ಬೆಚ್ಚಿದರು. ಮರುದಿನವೇ ಭಾರತದ ಸೈನ್ಯ ಮತ್ತು ಶೇಖ್ ದಳ ಬಾರಾಮುಲ್ಲಾವನ್ನು ವಿಮುಕ್ತಿಗೊಳಿಸಿತು. ಬಾರಾಮುಲ್ಲಾ ಮತ್ತು ಕಾಶ್ಮೀರದ ಜನ ಶರ್‌ವಾನಿ ಅಸುನೀಗಿದ ಸ್ಥಳಕ್ಕೆ ಬಂದು ನಿಟ್ಟುಸಿರಿಟ್ಟರು. ಶರ್‌ವಾನಿಯ ಹೆತ್ತವರು ಮತ್ತು ಸೋದರರು ಅವನ ಫೋಟೋ ತೋರಿಸಿದರು. ಸಾಯುವ ವೇಳೆಯಲ್ಲೂ ಶರ್‌ವಾನಿಯ ಕಣ್ಣು ದಿವ್ಯ ತೇಜಸ್ಸನ್ನು ಹೊಮ್ಮಿಸುತ್ತಿದ್ದವು. ಪ್ರೀತಿ ತುಂಬಿದ ಕಾಶ್ಮೀರದ ಜನ ಶರ್‌ವಾನಿಯ ಸಂದೇಶ, ತ್ಯಾಗವನ್ನು ಅರಿತು ಆತನಿಗೆ ಹೊಸ ಹೆಸರಿಟ್ಟರು. ಅಂದಿನಿಂದ ಆತ ಮುಜಾಹಿದ್ ಶರ್‌ವಾನಿಯಾದ; ಹುತಾತ್ಮ ಶರ್‌ವಾನಿ ಎಂದು ಪ್ರಖ್ಯಾತನಾದ.

ಭಾರತದ ಪ್ರಜಾಪ್ರಭುತ್ವ ಮತ್ತು ಮಹಾತ್ಮಾಗಾಂಧಿಯನ್ನು ಅರಿತಿದ್ದ ಶೇಖ್ ಅಬ್ದುಲ್ಲಾ ಮತ್ತು ಅವನ ಅನುಯಾಯಿಗಳು ಬೆಳೆಸಿದ ಜಾತ್ಯತೀತ, ಮಾನವೀಯ ಸಂಘಟನೆಯನ್ನು ನಡೆಸಿಕೊಂಡು ಹೋಗುವ ದಾರಿ ನೆಹರೂ ಮತ್ತು ಕಾಂಗ್ರೆಸ್‌ಗೆ ಗೊತ್ತಿರಲಿಲ್ಲ. ಕಾಶ್ಮೀರಕ್ಕೆ ತನ್ನದೇ ಆದ ಚರಿತ್ರೆ, ಸ್ವಾತಂತ್ರ್ಯ ಹೋರಾಟ ಮತ್ತು ಜಾತ್ಯತೀತ ಪರಂಪರೆ ಇರುವುದರ ಸೂಕ್ಷ್ಮ ಅರಿತಿರಲಿಲ್ಲ. ದಿಲ್ಲಿಯಲ್ಲಿ ಕೂತು ಇಡೀ ದೇಶದ ಸೂತ್ರ ಹಿಡಿದು ಚಕ್ರವರ್ತಿಯಂತೆ ಮೆರೆಯುವುದು ನೆಹರೂಗೆ ಇಷ್ಟ; ವಿಕೇಂದ್ರೀಕರಣದ ಸೊಲ್ಲೆತ್ತಿದರೆ ಅದು ಅವರಿಗೆ ಪ್ರತ್ಯೇಕತಾವಾದದಂತೆ, ದೇಶದ್ರೋಹದಂತೆ ಕೇಳಿಸುತ್ತಿತ್ತು. ಶೇಖ್ ಅಬ್ದುಲ್ಲಾ ಮಹಾ ರಾಷ್ಟ್ರಪ್ರೇಮಿಯಾದ, ಸ್ವಾಭಿಮಾನಿಯಾದ, ಜಾತ್ಯತೀತನಾದ ಆಧುನಿಕ ಮನುಷ್ಯ; ಆತ ತನ್ನ ಕಾಶ್ಮೀರದ ಹಿತಚಿಂತನೆ ಮಾಡಿದ್ದು ನೆಹರೂ ಅವರಲ್ಲಿ ಅನುಮಾನ ಹುಟ್ಟಿಸಿತು. ಯಾವುದೇ ಸಾಕ್ಷಿ, ಪುರಾವೆ ಇಲ್ಲದೆ ಶೇಖ್‌ರನ್ನು ದೇಶದ್ರೋಹದ ಆಪಾದನೆ ಮೇಲೆ ದಶಕಗಟ್ಟಲೆ ಜೈಲಿನಲ್ಲಿಟ್ಟರು. ಕಾಂಗ್ರೆಸ್‌ನ ಮೊದಲ ದುಷ್ಟ ಕೆಲಸ ಅದು. ಇಂದಿರಾಗಾಂಧಿ, ರಾಜೀವ್‌ಗಾಂಧಿಯೊಂದಿಗೆ ಬೆಳೆದ ಕಾಂಗ್ರೆಸ್‌ನ ಭ್ರಷ್ಟತೆ, ನೀಚತನದಿಂದಾಗಿ ಕಾಶ್ಮೀರದಲ್ಲಿ ಕಳೆದ ನಲವತ್ತು ವರ್ಷಗಳಲ್ಲಿ (1978ರಲ್ಲಿ ಮೊರಾರ್ಜಿ ದೇಸಾಯಿ ನಡೆಸಿದ ಚುನಾವಣೆ ಬಿಟ್ಟರೆ) ಒಮ್ಮೆಯೂ ಪ್ರಾಮಾಣಿಕ ಚುನಾವಣೆ ನಡೆದಿಲ್ಲ. ಜನ ತೀವ್ರ ಭಯ, ಹತಾಶೆಯಲ್ಲಿದ್ದಾರೆ.

ಇವತ್ತು ಆಗಿರುವುದನ್ನು ನೋಡಿ. ಬಿಜೆಪಿ ಬಲಗೊಳ್ಳುತ್ತಿರುವುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಈ ಬಿಜೆಪಿ ಮತ್ತು ಆರೆಸ್ಸೆಸ್ ಬಲಗೊಳ್ಳುತ್ತಿರುವುದಕ್ಕೆ ಕಾರಣರಾದವರನ್ನು ಉಗಿಯಬೇಕೆನ್ನಿಸಿದೆ. ಇವತ್ತು ಬಿಜೆಪಿಗೆ ಮತ ನೀಡಕೂಡದೆಂದು ಚಂದ್ರಪ್ರಭಾ, ಗುಂಡೂರಾವ್, ಜಾಫರ್ ಶರೀಫ್, ಸಿಂಧ್ಯಾ, ಹೆಗಡೆ, ಕೃಷ್ಣ ಅಯ್ಯರ್- ಯಾರಿಗೂ ಮತ ನೀಡಲಾಗುತ್ತಿಲ್ಲ, ಕಳೆದ ನಾಲ್ಕು ದಶಕಗಳಲ್ಲಿ ರಾಜಕೀಯ ದೇಶದ ಸ್ಫೂರ್ತಿ, ಚೈತನ್ಯವನ್ನೇ ಕಿತ್ತು ಹಾಕಿದೆ. ಪಂಚತಾರಾ ಹೊಟೇಲಿನ ಭೋಜನ, ನಿದ್ರೆ, ಶವರ್‌ಬಾತ್‌ಗಳಿಗಾಗಿ ಆತ್ಮವನ್ನೇ ಮಾರಿಕೊಳ್ಳಬಲ್ಲ ರಾಜಕಾರಣಿಗಳು ಮತ್ತು ಮತದಾರರು ದೇಶವನ್ನು ಈ ಸ್ಥಿತಿಗೆ ಮುಟ್ಟಿಸಿದ್ದಾರೆ.

ಇದನ್ನು ನಾನು ಸುಮ್ಮನೇ ಹೇಳುತ್ತಿಲ್ಲ. ನಾನು ಶೇಖ್ ಬಗ್ಗೆ ಓದಿದ ಶ್ರೀಮತಿ ಮಾರ್ಗರೆಟ್ ಬರ್ಕ್- ವೈಟ್ ಅವರ ‘ಏಚ್ಝ್ಛ ಡಿ ಠಿಟ ಊ್ಟಛಿಛಿಟಞ’- ಪುಸ್ತಕದಲ್ಲೇ ಈ ದುರಂತ ಕತೆ ವರ್ಣಿತವಾಗಿದೆ. ಈ ಪ್ರತಿಭಾವಂತ ಮಹಿಳೆ ಯಾರು ಎಂದು ಹೇಳಲೇ? ಗಾಂಧೀಜಿ ಆರೆಸ್ಸೆಸ್‌ನವರ ಗುಂಡಿಗೆ ಬಲಿಯಾಗುವ ಮುನ್ನ ಗಾಂಧೀಜಿಯನ್ನು ಸಂದರ್ಶಿಸಿದ ಫೋಟೊಗ್ರಾಫರ್- ವರದಿಗಾರ್ತಿ ಬರ್ಕ್- ವೈಟ್. ಆಕೆ 1947-48ರಲ್ಲಿ ಭಾರತದಲ್ಲಿದ್ದಳು. ಶೇಖ್‌ರನ್ನು ನೋಡಿ ಮಾತಾಡಿದಳು. ಆಕೆಯ ಕಣ್ಣೆದುರಿಗೇ ಇವತ್ತಿನ ಭಾರತದ ದುರಂತ ಶುರುವಾಗಿತ್ತು. ಆಕೆ ವರದಿ ಮಾಡುವಂತೆ, ಕಾಶ್ಮೀರದ ಜನರನ್ನು ತುಳಿದಿದ್ದ, ಅವಮಾನಗೊಳಿಸಿದ್ದ, ದಾರಿದ್ರಕ್ಕೆ ತಳ್ಳಿದ್ದ ಕಾಶ್ಮೀರದ ರಾಜ ಹರಿಸಿಂಗ್ ಒಬ್ಬಂಟಿಯಾಗಿರಲಿಲ್ಲ. ಮಹಾರಾಷ್ಟ್ರದ ನಾಗಪುರದ ಆರೆಸ್ಸೆಸ್‌ಗಳು ಮತ್ತು ಗುಜರಾತಿನ, ರಾಜಸ್ಥಾನದ ದೊರೆಗಳು ಅವನ ಬೆಂಬಲಕ್ಕಿದ್ದರು. ಇವರೆಲ್ಲರ ರಾಮರಾಜ್ಯವೇ ಇವತ್ತು ಅಡ್ವಾಣಿ ಕನಸುತ್ತಿರುವ ರಾಮರಾಜ್ಯ. ಇಲ್ಲಿ ಹರಿಸಿಂಗ್‌ನ ಆತ್ಮೀಯ ಸ್ನೇಹಿತ ಆಲ್ವಾರ್ ದೊರೆಯ ಬಗ್ಗೆ ಹೇಳಬೇಕು. ಇವತ್ತು ಬಿಜೆಪಿಯಲ್ಲಿ ಅನೇಕ ದೊರೆಗಳು ಮಿಂಚುತ್ತಿರುವುದರಿಂದ ಈ ಆಲ್ವಾರ್ ದೊರೆಯ ಬಗ್ಗೆ ಹೇಳುವುದು ಒಳ್ಳೆಯದು. ಈ ದೊರೆಯ ವಿಕೃತ ವ್ಯಭಿಚಾರ ಆನೆಗಳಿಂದ ಹಿಡಿದು ಮನುಷ್ಯರವರೆಗೆ ಹಬ್ಬಿತ್ತು; ಈತ ರಾಜ್ಯದ ಬೊಕ್ಕಸದ ಹಣ ಚೆಲ್ಲಿ ಕಟ್ಟಿಸಿದ ಅರಮನೆಯನ್ನು (ಶಕುನ ಸರಿಹೋಗಲಿಲ್ಲವೆಂದು) ಕ್ಷಣಾರ್ಧದಲ್ಲಿ ನೆಲಸಮಮಾಡಿ ಇನ್ನೊಂದು ಅರಮನೆ ಕಟ್ಟಿಸಿಕೊಳ್ಳುತ್ತಿದ್ದ; ಈತನ ಕೊಲೆ, ಸುಲಿಗೆ ಈತನ ಮಂತ್ರಿಗಳ ಭ್ರಷ್ಟತೆ ಎಲ್ಲೆ ಮೀರಿದ್ದವು. ಈ ದೊರೆ ಸತ್ತು ಆತನ ಮಗ ಅಧಿಕಾರಕ್ಕೆ ಬಂದ. ಈತ ‘ಒಳ್ಳೆಯವನು’- ಎಷ್ಟು ಒಳ್ಳೆಯವನೆಂದರೆ ಯಾರನ್ನೂ ನೋಡುತ್ತಿರಲಿಲ್ಲ. ಏನನ್ನೂ ಮಾಡುತ್ತಿರಲಿಲ್ಲ. ಒಮ್ಮೆ ಆಲ್ವಾರ್‌ನ ಜನತೆ ಈತನ ಬಳಿ ಬಂದು, ತಮ್ಮ ತೊಂದರೆ ಹೇಳಿಕೊಂಡರು. ಆತ ಹೇಳಿದ, ‘‘ದೊರೆ ಮತ್ತು ಪ್ರಜೆಗಳು ತಂದೆ ಮಕ್ಕಳಿದ್�

Writer - ಪಿ. ಲಂಕೇಶ್

contributor

Editor - ಪಿ. ಲಂಕೇಶ್

contributor

Similar News