ಕೆಎಸ್ಸಾರ್ಟಿಸಿ: ಹುತಾತ್ಮ ಯೋಧ ಗುರು ಕುಟುಂಬಕ್ಕೆ 25 ಸಾವಿರ ನಗದು, ಉಚಿತ ಬಸ್‌ಪಾಸ್ ವಿತರಣೆ

Update: 2019-03-08 14:34 GMT

ಬೆಂಗಳೂರು, ಮಾ.8: ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರ ಪತ್ನಿ ಕಲಾವತಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು(ಕೆಎಸ್ಸಾರ್ಟಿಸಿ) 25 ಸಾವಿರ ರೂ. ನಗದು ಹಾಗೂ ಉಚಿತ ಬಸ್‌ಪಾಸ್‌ ನೀಡಿ ಗೌರವಿಸಿತು.

ಶುಕ್ರವಾರ ಕೆಎಸ್ಸಾರ್ಟಿಸಿ ಸಂಸ್ಥೆಯ ಸಂಭಾಗಣದಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ, ಹುತಾತ್ಮ ಯೋಧ ಗುರು ಅವರ ತಾಯಿ ಚಿಕ್ಕತಾಯಮ್ಮ ಹಾಗೂ ತಂದೆ ಹೊನ್ನಯ್ಯ ಅವರಿಗೂ ಉಚಿತ ಬಸ್‌ಪಾಸ್ ನೀಡಿ ಸನ್ಮಾನಿಸಿದರು. ಈ ವೇಳೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸೇರಿ ಹಲವರು ಉಪಸ್ಥಿತರಿದ್ದರು.

ಈ ವೇಳೆ ಕೆಎಸ್ಸಾರ್ಟಿಸಿ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಮಹಿಳೆ ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸಂಸ್ಥೆಯನ್ನು ಮುನ್ನಡೆಸಬೇಕು. ಮಹಿಳಾ ಸಿಬ್ಬಂದಿಗಳು ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕೆಂಬ ಆಶಯ ವ್ಯಕ್ತಪಡಿಸಿದರು.

ನಿಗಮದಲ್ಲಿ ಸುಮಾರು 800 ಮಹಿಳಾ ನಿರ್ವಾಹಕರು, ಮಹಿಳಾ ತಾಂತ್ರಿಕ ಸಿಬ್ಬಂದಿ 826 ಹಾಗೂ ಇತರೆ ಮಹಿಳಾ ಸಿಬ್ಬಂದಿಗಳು ಸೇರಿ ಸುಮಾರು 2500ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ಒಗ್ಗಟ್ಟನಿಂದ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಅವರು ಹೇಳಿದರು.

ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮಾತನಾಡಿ, ನಿಗಮದಲ್ಲಿರುವ ಮಹಿಳಾ ಸಿಬ್ಬಂದಿಗಳಿಗೆ ನೀಡಬೇಕಾಗಿರುವ ಎಲ್ಲಾ ಸೌಲಭ್ಯ ಸವಲತ್ತುಗಳನ್ನು ನೀಡಲು ನಾವು ಬದ್ಧವಾಗಿದ್ದೇವೆ. ಒಂದು ಪ್ರಶಸ್ತಿ ಹಲವು ಪ್ರೇರಣೆಗೆ ಅವಕಾಶ ನೀಡುವುದರೊಂದಿಗೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿಗಳಿಗೆ ಇದು ಮಾದರಿಯಾಗಲಿದೆ ಎಂದು ತಿಳಿಸಿದರು.

49 ಮಹಿಳಾ ಸಿಬ್ಬಂದಿಗಳಿಗೆ ಸನ್ಮಾನ: ಕೆಎಸ್ಸಾರ್ಟಿಸಿಯ 17 ವಿಭಾಗದಿಂದ ಓರ್ವ ಮಹಿಳಾ ನಿರ್ವಾಹಕಿ, ಒಬ್ಬ ಮಹಿಳಾ ತಾಂತ್ರಿಕ ಸಿಬ್ಬಂದಿ ಹಾಗೂ ಭದ್ರತಾರಕ್ಷಕಿ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News