ಬಡವರ ಕನಸಿನ ಮನೆ ಸಾಕಾರಗೊಳಿಸಲು ಸಂಕಲ್ಪ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-03-08 15:43 GMT

ಬೆಂಗಳೂರು, ಮಾ.8: ಬಡವರ ಕನಸಿನ ಮನೆ ಸಾಕಾರಗೊಳಿಸಲು ಸರಕಾರ ಕಡಿಮೆ ಬೆಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಬೆಂಗಳೂರು ಉತ್ತರ ತಾಲೂಕು ಬ್ಯಾಟರಾಯನಪುರದ ಬೆಟ್ಟಹಲಸೂರು ಗ್ರಾಮ ಪಂಚಾಯತ್ ನ ಕುದುರೆಗೆರೆ ಗ್ರಾಮದಲ್ಲಿ ವಸತಿ ಇಲಾಖೆಯಡಿ ರಾಜೀವ್ ಗಾಂಧಿ ವಸತಿ ನಿಗಮ ನಿಯುತದಿಂದ ನಿರ್ಮಿಸಲಾದ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಈ ಪ್ರದೇಶದಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಇದರಿಂದ ಸುಮಾರು 4 ಲಕ್ಷ ಜನರಿಗೆ ವಸತಿ ಕಲ್ಪಿಸಿದಂತಾಗುತ್ತದೆ. ಇದಕ್ಕಾಗಿ ಆನ್‌ಲೈನ್ ಮೂಲಕ ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದ್ದು, ಅರ್ಧದಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಬಿಪಿಎಲ್ ಕಾರ್ಡು ಹೊಂದಿರುವವರು ಈ ಸೌಲಭ್ಯ ಪಡೆದುಕೊಳ್ಳಲು ಅರ್ಹರು ಎಂದು ಹೇಳಿದರು.

ಈ ಯೋಜನೆಯಡಿ ಕೇಂದ್ರ ಸರಕಾರ 1.50 ಲಕ್ಷ ರೂ. ಹಾಗೂ ರಾಜ್ಯ ಸರಕಾರ 1.50 ಲಕ್ಷ ರೂ. ನೀಡಲಿದ್ದು, ಫಲಾನುಭವಿಗಳು 3 ರಿಂದ 4 ಲಕ್ಷ ರೂ. ಒಟ್ಟಾರೆ ಸುಮಾರು 7 ಲಕ್ಷಕ್ಕೆ ಒಂದು ಪ್ಲಾಟ್‌ನ್ನು ಪಡೆದುಕೊಳ್ಳಬಹುದಾಗಿದೆ. 14 ಅಂತಸ್ತುಗಳ ವಸತಿ ಸಂಕೀರ್ಣದಲ್ಲಿ ಗುಣಾತ್ಮಕ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಫಲಾನುಭವಿಗಳ ಆದಾಯ ಮಿತಿಯನ್ನು ವಾರ್ಷಿಕ 87,000 ರಿಂದ 3 ಲಕ್ಷಗಳವರೆಗೆ ಏರಿಸಲು ಆದೇಶಿಸಲಾಗಿದೆ. ಈಗಾಗಲೇ ಕೆಲವರಿಗೆ ವಸತಿಯ ಹಕ್ಕುಪತ್ರ ನೀಡಲಾಗಿದ್ದು, ಇನ್ನೂ 50,000 ಜನರಿಗೆ ಮನೆ ಪಡೆಯಲು ಅವಕಾಶದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನಗರ ಅಭಿವೃದ್ಧಿ ಯೋಜನೆಗಳು, ರೈತರ ಸಾಲಮನ್ನಾ, ಇತ್ಯಾದಿಗಳನ್ನು ಸಕಾರ ಕೈಗೊಂಡಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಸರಕಾರ ಜನರ ಪರವಾಗಿದೆ. ರೈತರ 40,000 ಕೋಟಿ ರೂ ಸಾಲ ಮನ್ನಾ ಮಾಡಿದೆ. ಬೆಂಗಳೂರು ಅಭಿವೃದ್ಧಿಗೆ 8000 ಕೋಟಿ ರೂ. ಮೀಸಲಿಟ್ಟಿದೆ. ಮೆಟ್ರೋ 2ನೇ ಹಾಗೂ 3ನೇ ಹಂತದ ಕಾಮಗಾರಿಗಳಿಗೆ ಅನುಮತಿ ನೀಡಿದೆ. 15 ವರ್ಷಗಳಿಂದ ಬಾಕಿಯಿಂದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಭೂಮಿ ಒತ್ತುವರಿ ನಡೆಸಿದೆ. 9,000 ಕೋಟಿ ರೂ ಗಳಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಹೊಸೂರು ರಸ್ತೆಯಿಂದ ಬಳ್ಳಾರಿ ರಸ್ತೆವರೆಗೆ ಕೈಗೊಳ್ಳಲಾಗಿದೆ. ಮೇಲ್ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಹಾಗೆಯೇ ಸಬ್ ಅರ್ಬನ್ ರೈಲ್ವೆ ಯೋಜನೆಯನ್ನು ಸಹ ಅನುಷ್ಠಾನಗೊಳಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ವಸತಿ ಸಚಿವ ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಜನಪ್ರತಿನಿಧಿಗಳು, ಬೆಂಗಳೂರು ಜಿಲ್ಲಾಧಿಕಾರಿ ಜಯ್ ಶಂಕರ್, ವಸತಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News