ಜಾತಿ ಪ್ರಮಾಣ ಪತ್ರಕ್ಕಾಗಿ ವಿಧಾನಸೌಧ ಮುತ್ತಿಗೆ ಯತ್ನ

Update: 2019-03-08 15:51 GMT

ಬೆಂಗಳೂರು, ಮಾ.8: ಜಾತಿ ಪ್ರಮಾಣ ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೇಡ ಜಂಗಮ ಸಮುದಾಯದ ಮುಖಂಡರು, ವಿಧಾನಸೌಧ ಮುತ್ತಿಗೆ ಚಳವಳಿ ನಡೆಸಿದರು.

ಶುಕ್ರವಾರ ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ನೇತೃತ್ವದಲ್ಲಿ ಜಮಾಯಿಸಿದ ಮುಖಂಡರು, ಸಾಂವಿಧಾನಿಕ ಹಕ್ಕುಗಳನ್ನು ಜಾರಿಗೊಳಿಸುವಂತೆ ಧರಣಿ ನಡೆಸಿ, ಮೈತ್ರಿ ಸರಕಾರದ ಸಚಿವರೊಬ್ಬರು ಭೇಟಿ ಮಾಡಿ, ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಆದರೆ, ಸಚಿವರು ಯಾರೂ ಸಹ ಧರಣಿ ನಿರತ ಸ್ಥಳಕ್ಕೆ ಬಾರದ ಕಾರಣ, ಬೇಡಜಂಗಮ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ, ಹಿರಿಯ ಪೊಲೀಸ್ ಅಧಿಕಾರಿಗಳು ತಡೆದು, ವಿಧಾನಸೌಧ ಮಾರ್ಗವಾಗಿ ಹೋಗಬಾರದು, ಮೈದಾನದಲ್ಲಿಯೇ ಇರುವಂತೆ ಸೂಚಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಧರಣಿ ನಿರತರು, ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ಇದಕ್ಕೂ ಮೊದಲು ಧರಣಿ ನಿರತರು, ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಪ್ರಮಾಣಪತ್ರ ನೀಡದೇ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶ ನೀಡಿದರೂ, ಸರಕಾರಿ ಅಧಿಕಾರಿಗಳು ಸುಳ್ಳು ಹೇಳಿ ಸಮಾಜಕ್ಕೆ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ದೊರೆಯುವ ಅವಕಾಶದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಬೇಡ ಜಂಗಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಪಾಟೀಲ್, ಬೇಡ ಜಂಗಮರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಸಂವಿಧಾನದ 341ನೇ ಪರಿಚ್ಛೆದ ಅಡಿ ಸೇರ್ಪಡೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ರಾಜ್ಯಪತ್ರದಲ್ಲಿ ಈ ಬಗ್ಗೆ ಅಧಿಕತವಾಗಿ ಆದೇಶ ಹೊರಡಿಸಿವೆ ಎಂದು ತಿಳಿಸಿದರು.

‘ಜಾತಿ ಪ್ರಮಾಣ ಪತ್ರ ನೀಡಿ’

ಬೇಡ ಜಂಗಮ ಸಮುದಾಯ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಹೀಗಾಗಿ, ಸರಕಾರ ಅದಷ್ಟು ಬೇಗ, ಈ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲದಿದ್ದರೆ, ನಮ್ಮ ಹೋರಾಟ ತೀವ್ರಗೊಳಿಸಲಾಗುವುದು.

-ಶಾಂತವೀರ ಸ್ವಾಮೀಜಿ, ಕೊಳದಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News